
ಬೇಲೂರು (ಹಾಸನ ಜಿಲ್ಲೆ): ತಾಲ್ಲೂಕಿನ ಜಗಬೋರನಹಳ್ಳಿಯಲ್ಲಿ ಭಾನುವಾರ ಮದಗಜಗಳು ಕಾದಾಡಿದ್ದು, ದೈತ್ಯ ಕಾಡಾನೆ ‘ಭೀಮ’ನ ಒಂದು ದಂತ ತುಂಡಾಗಿದೆ.
ಬಿಕ್ಕೋಡು ಹೋಬಳಿಯಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಹುಡುಕಿಕೊಂಡು ‘ಭೀಮ’ ಆನೆ ಹೊರಟಿತ್ತು. ಸಾಕಾನೆಯಂತೆ ರಸ್ತೆಯಲ್ಲಿಯೇ ನಡೆದುಕೊಂಡು ಹೋಗುತ್ತಿದ್ದ ಆನೆಯನ್ನು ಜನರು ವೀಕ್ಷಿಸುತ್ತಾ ನಿಂತಿದ್ದರು. ಇನ್ನೊಂದೆಡೆ ಆನೆ ಕಾರ್ಯಪಡೆಯ ತಂಡ ಜೀಪಿನೊಂದಿಗೆ ಆನೆಗೆ ಎಸ್ಕಾರ್ಟ್ ನೀಡಿತ್ತು.
ಇತ್ತ ಜಗಬೋರನಹಳ್ಳಿ ಗ್ರಾಮಕ್ಕೆ ಬರುತ್ತಿದ್ದಂತೆಯೇ ‘ಭೀಮ’ನಿಗೆ ಮತ್ತೊಂದು ಆನೆ ‘ಕ್ಯಾಪ್ಟನ್’ ಎದುರಾಗಿದೆ. ಈ ವೇಳೆ ಎರಡೂ ಆನೆಗಳ ನಡುವೆ ಕಾದಾಟ ಶುರುವಾಗಿದೆ. ಇದರಿಂದ ಭೀಮನ ಒಂದು ದಂತ ಮುರಿದಿದೆ. ಮದದಲ್ಲಿದ್ದ ಕಾಡಾನೆ ‘ಕ್ಯಾಪ್ಟನ್’, ಮನೆಯ ಎದುರು ಇಟ್ಟಿದ್ದ ಪ್ಲಾಸ್ಟಿಕ್ ಪೈಪ್ ಹಾಗೂ ನೀರು ತುಂಬಿದ್ದ ಡ್ರಮ್ ಒಡೆದು ಹಾಕಿದೆ. ಪಕ್ಕದಲ್ಲಿದ್ದ ಚಕ್ಕಡಿಗೂ ಹಾನಿ ಮಾಡಿದೆ.
ಕಾಳಗ ನೋಡುತ್ತಿದ್ದ ಗ್ರಾಮಸ್ಥರು ಭೀತಿಯಿಂದ, ‘ಹೋಗು ನಮ್ಮಪ್ಪ ಸಾಕು ನಮ್ಮಪ್ಪ’ ಎಂದು ಕೂಗುತ್ತಿದ್ದರು. ಕಾರ್ಯಪಡೆ ಸಿಬ್ಬಂದಿ ಆನೆಗಳನ್ನು ಪ್ರತ್ಯೇಕಿಸಿ ಓಡಿಸಿ ಜಗಳಕ್ಕೆ ಅಂತ್ಯಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.