ADVERTISEMENT

ಎತ್ತಿನಹೊಳೆ ಯೋಜನೆ ಕುಂಠಿತ

ಜೆಡಿಎಸ್‌ ನಾಯಕರ ನಿರಾಸಕ್ತಿ: ಶಿವರಾಂ ಆರೋಪ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 13:12 IST
Last Updated 13 ಡಿಸೆಂಬರ್ 2018, 13:12 IST
ಬಿ.ಶಿವರಾಂ
ಬಿ.ಶಿವರಾಂ   

ಹಾಸನ: ರಾಜ್ಯದ ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಸಾಕಾರಕ್ಕೆ ಜೆಡಿಎಸ್ ನಾಯಕರಿಗೆ ಆಸಕ್ತಿ ಇಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಆರೋಪಿಸಿದ್ದಾರೆ.

‘ಯೋಜನೆಗೆ ಜೆಡಿಎಸ್ ಕಾಳಜಿ ಇಲ್ಲದೇ ಇರುವುದು ಬಹಿರಂಗ ಸತ್ಯ. ರೇವಣ್ಣ ಅವರು ಈವರೆಗೂ, ಒಮ್ಮೆಯೂ ಯೋಜನೆಯ ಸ್ಥಳ ಪರಿಶೀಲನೆ ಮಾಡಿಲ್ಲ. ಹಿಂದೆ ಸಂಸದ ಎಚ್.ಡಿ.ದೇವೇಗೌಡರು, ಎಚ್‌.ಡಿ. ಕುಮಾರಸ್ವಾಮಿ ಸೇರಿ ಜೆಡಿಎಸ್ ನಾಯಕರು ಅಪಸ್ವರ ಎತ್ತಿದ್ದರು. ಈಗ ಯೋಜನೆ ವಿಳಂಬವಾಗುತ್ತಿರುವುದನ್ನು ನೋಡಿದರೆ ಅನೇಕ ರೀತಿಯ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

‘ಸಕಲೇಶಪುರ ಸೇರಿದಂತೆ ಅನೇಕ ಕಡೆ ಆರಂಭವಾಗಿದ್ದ ಕಾಮಗಾರಿ ಕುಂಠಿತವಾಗಿದೆ. ಹಣಕಾಸಿನ ಸಮಸ್ಯೆ ಇಲ್ಲದೇ ಹೋದರೂ ಜಿಲ್ಲಾಡಳಿತ ತ್ವರಿತ ಕಾಮಗಾರಿ ನಡೆಸಲು ವಿಫಲವಾಗಿದೆ. ಎಷ್ಟೋ ಕಡೆ ಯೋಜನೆಗೆ ಬೇಕಾದ ಭೂ ಸ್ವಾಧೀನವೇ ನಡೆದಿಲ್ಲ. ಇದೆಲ್ಲವನ್ನೂ ನೋಡಿದರೆ ಯೋಜನೆ ಸಕಾಲದಲ್ಲಿ ಅನುಷ್ಠಾನ ಆಗುವ ಬಗ್ಗೆ ಅನುಮಾನವಿದೆ’ ಎಂದರು.

ADVERTISEMENT

ಈ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿಶೇಷ ಗಮನ ಹರಿಸುವಂತೆ ಸ್ವ ಪಕ್ಷೀಯ ನಾಯಕರನ್ನು ಆಗ್ರಹಿಸಿದರು.

‘ಯೋಜನೆಗೆ 2014ರಲ್ಲಿ ₹ 12,912.36 ಕೋಟಿ ಮಂಜೂರಾತಿ ದೊರೆತಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ₹ 6,037.10 ಕೋಟಿ ವೆಚ್ಚದ ಕಾಮಗಾರಿ ಪೈಕಿ ಕೇವಲ ₹ 3011 ಕೋಟಿ ಖರ್ಚಾಗಿದೆ. ಉಳಿದ ₹ 3025 ಕೋಟಿ ಕೆಲಸ ನಡೆಯದೇ ಇರುವುದಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ’ ಎಂದು ದೂರಿದರು.

‘ಭೂ ಸ್ವಾಧೀನ, ನೇರ ಖರೀದಿ, ಪರಿಹಾರ ವಿತರಣೆ ಆಗಿಲ್ಲ. ಜಿಲ್ಲೆಯಲ್ಲಿ ಭೂ ಸ್ವಾಧೀನ ಇಲಾಖೆ ಕಚೇರಿಗಳ ಪ್ರಮುಖ ಹುದ್ದೆಗಳು ಖಾಲಿ ಇವೆ. ₹ 12 ಸಾವಿರ ಕೋಟಿ ಮೊತ್ತದ ಕಾಮಗಾರಿಯನ್ನು ಮೂರು ಹಂತದಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ಆದರೆ ಭೂ ಖರೀದಿಯಲ್ಲಿ ಯಾವ ಕಾನೂನನ್ನು ಇಲಾಖೆ ಪಾಲಿಸಿಲ್ಲ. ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾದರೆ ಮೊದಲನೆಯದಾಗಿ ಸಾಮಾಜಿಕ ಪರಿಣಾಮ ಅಧ್ಯಯನ ಮಾಡಿ ವರದಿ ಸಿದ್ಧಪಡಿಸಬೇಕು. ಸಕಲೇಶಪುರ ತಾಲ್ಲೂಕಿನ 139 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಈವರೆಗೆ ಸಾಧ್ಯವಾಗಿಲ್ಲ. ಯೋಜನೆ ಆರಂಭವಾಗಿ ಮೂರು ವರ್ಷ ನಂತರ ಎಸ್ಐಎ ಕಮಿಟಿ ಮಾಡಿದ್ದಾರೆ. ಅದರಲ್ಲಿ ಕರ್ನಾಟಕ ನೀರು ಸರಬರಾಜು, ಒಳಚರಂಡಿ ಮಂಡಳಿ ಮುಖ್ಯ ಎಂಜಿನಿಯರ್, ಸಕಲೇಶಪುರ ತಾಲ್ಲೂಕಿನ ಮಡಬಲು ಹಾಗೂ ಬೇಲೂರಿನ ಹಗರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಬಾದಾಮಿಯ ತಜ್ಞ ರಾಘವೇಂದ್ರ ಹಾಗೂ ಐಎಎಸ್ ಅಧಿಕಾರಿ ಎಸ್.ಬಿ.ಬಿರಾದಾರ ನೇತೃತ್ವದ ಸಮಿತಿಯನ್ನು 2018ರ ನ. 14ರಂದು ರಚಿಸಲಾಗಿದೆ. ಈಗ ಸಮಿತಿ ರಚಿಸಿದರೆ ಅವರು ಸ್ಥಳ ಪರಿಶೀಲನೆ ನಡೆಸಿ, ಭೂಮಿಗೆ ಬೆಲೆ ನಿಗದಿ ಮಾಡುವುದು ಯಾವಾಗ’ ಎಂದು ಪ್ರಶ್ನಿಸಿದರು.

‘ಜೆಡಿಎಸ್ ಆರಂಭದಿಂದಲೂ ಈ ಯೋಜನೆಯನ್ನು ವಿರೋಧಿಸುತ್ತಿದೆ. ಆದ್ದರಿಂದಲೇ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರು ರಸ್ತೆ ಕೆಲಸಕ್ಕೆ ನೀಡುತ್ತಿರುವ ಆದ್ಯತೆಯನ್ನು ಕುಡಿಯುವ ನೀರಿಗೆ ನೀಡುತ್ತಿಲ್ಲ’ ಎಂದು ದೂರಿದರು.

‘ಅಕ್ರಮ ಸಕ್ರಮ ಅಡಿ ಸಾಗುವಳಿ ಜಮೀನು ಖಾತೆ ಮಾಡಿಕೊಡಬೇಕೆಂಬ ನಿಯಮವಿದೆ. 2005 ರಿಂದ ಈಚೆಗೆ ಸಾಗುವಳಿ ಮಾಡಿಕೊಂಡಿರುವವರಿಗೆ ಭೂಮಿ ನೀಡಬೇಕು. ಫಾರಂ ನಂ. 50, 52, 17 ಅರ್ಜಿಗಳು ವಿಲೇವಾರಿಯಾಗಿಲ್ಲ. ಕಂದಾಯ ಇಲಾಖೆಯವರು ಇದಕ್ಕೆ ಉತ್ತರಿಸಬೇಕು’ ಎಂದರು.

‘18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಗಡುವು ಇರುವ ಕಾರಣ ಗುತ್ತಿಗೆದಾರರು ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇದರಿಂದ ರೈತರಿಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಸಕಲೇಶಪುರ ವ್ಯಾಪ್ತಿಯಲ್ಲಿ ಮಾತ್ರ ಪೈಪ್‌ಲೈನ್ ಹಾಕಬೇಕಿದ್ದು, ಹನಿಕೆ, ಹಗರೆ ಕಡೆಗೆ ಕಾಲುವೆ ಮಾಡಬೇಕಾಗುತ್ತದೆ. ಹೀಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವುದು ಸರ್ಕಾರದ ಕರ್ತವ್ಯ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.