ಹಳೇಬೀಡು: ದ್ವಾರಸಮುದ್ರ ಕೆರೆ ಮೂಲಕ ವಾಣಿವಿಲಾಸ ಜಲಾಶಯಕ್ಕೆ ಹರಿಸುತ್ತಿರುವ ಎತ್ತಿನಹೊಳೆ ಯೋಜನೆಯ ನೀರು, ಬಂಡಿಲಕ್ಕನಕೊಪ್ಪಲು ಬಳಿಯ ಹಳ್ಳದ ಸೇತುವೆ ಹಾಗೂ ರಸ್ತೆಯನ್ನು ಮುಳುಗಿಸಿದೆ. ಇದರಿಂದ ನೂರಾರು ಎಕರೆ ಕೃಷಿ ಪ್ರದೇಶಕ್ಕೆ ರೈತರು ಸಂಪರ್ಕ ಇಲ್ಲದೆ ಪರದಾಡುವಂತಾಗಿದೆ.
ವಾಣಿವಿಲಾಸ ಜಲಾಶಯದತ್ತ ಹರಿಯುತ್ತಿರುವ ಎತ್ತಿನಹೊಳೆ ನೀರಿನ ರಭಸ ಹೆಚ್ಚಾಗಿದೆ. ಸೇತುವೆಗೆ ಅಳವಡಿಸಿರುವ ಪೈಪ್‌ನಿಂದ ಮೇಲೆ ರಸ್ತೆಯಲ್ಲಿ ವೇಗವಾಗಿ ಹಳ್ಳ ಹರಿಯುತ್ತಿದೆ. ಹಳ್ಳದ ಪಕ್ಕದ ಜಮಿನುಗಳಿಗೆ ನೀರು ನುಗ್ಗುತ್ತಿದೆ. ಪಕ್ಕದ ಜಮೀನುಗಳು ಜಲಾವೃತಗೊಂಡಿದ್ದು, ಬೆಳೆ ಮಾಡಲು ಸಾಧ್ಯವಿಲ್ಲದಂತಾಗಿದೆ.
ಇಲ್ಲಿಯ ತೋಟಗಳಿಗೆ ಕಾಲಿಡಲು ಆಗುತ್ತಿಲ್ಲ. ರೇಷ್ಮೆ ಕೃಷಿಯು ಗ್ರಾಮದ ಪ್ರಮುಖ ಕಸುಬಾಗಿದ್ದು, ಹಳ್ಳ ದಾಟಿಕೊಂಡು ಹಿಪ್ಪು ನೇರಳೆ ಸೊಪ್ಪು ತರಲು ಪಡಬಾರದ ಕಷ್ಟ ಅನುಭವಿಸುವಂತಾಗಿದೆ. ತೆಂಗು, ಬಾಳೆ ಮೊದಲಾದ ತೋಟದ ಬೆಳೆಗಳನ್ನು ಸಹ ತೋಟದಿಂದ ಹೊರ ಸಾಗಿಸುವುದು ಸುಲಭ ಸಾಧ್ಯವಾಗಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಸದಸ್ಯ ಬಿ.ಎಂ. ಸುರೇಶ್ ಹೇಳಿದರು.
‘ಎತ್ತಿನಹೊಳೆ ಯೋಜನೆ ನೀರಿನ ಜೊತೆ ಮಳೆ ನೀರು ಸೇರಿಕೊಂಡು ಹಳ್ಳದಲ್ಲಿ ಹರಿದರೆ, ಹೆಚ್ಚಿನ ಅನಾಹುತ ಆಗುವ ಸಾಧ್ಯತೆ ಇದೆ. ಸಕಲೇಶಪುರದಲ್ಲಿರುವ ಪಂಪ್‌ನಲ್ಲಿಯೇ ನೀರು ಹರಿಸುವ ವೇಗ ಕಡಿಮೆ ಮಾಡಬೇಕಾಗಿದೆ’ ಎಂದು ರೈತ ರಾಮನಾಯ್ಕ ಹೇಳಿದರು.
‘ಜಾನುವಾರು, ಆಡು ಮೇಕೆ ಮೇಯಿಸಲು ಹಳ್ಳ ದಾಟಿಕೊಂಡು ಹೋಗಬೇಕು. ಭೋರ್ಗರೆಯುತ್ತ ಹರಿಯುವ ನೀರಿನಲ್ಲಿ ಜಾನುವಾರು ಕರೆದೊಯ್ಯುವುದು ಕಷ್ಟವಾಗಿದೆ. ಮಳೆ ಬಂದು ಮೇವಿದ್ದರೂ ಮೇಯಿಸಲು ಸಾಧ್ಯವಾಗುತ್ತಿಲ್ಲ. ಜಮೀನಿನಿಂದ ಮನೆಗೆ ಮೇವು ತಂದು ಜಾನುವಾರು ಸಾಕಾಣಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಹೈನುಗಾರಿಕೆಗೂ ಹೊಡೆತ ಬಿದ್ದಿದೆ’ ಎಂದು ರೈತ ಅಶ್ವತ್ಥ್ ಗೌಡ ಹೇಳಿದರು.
‘ಹಳ್ಳದಲ್ಲಿ ನೀರು ಹರಿಯುತ್ತಿರುವುದರಿಂದ ಅಂತರ್ಜಲ ಹೆಚ್ಚಾಗಿದೆ. ಸಾಕಷ್ಟು ಕೊಳವೆ ಬಾವಿಯಲ್ಲಿ ಹೆಚ್ಚಿನ ಜಲ ಉತ್ಪತ್ತಿಯಾಗುತ್ತಿದೆ. ಆದರೆ ಜಮೀನಿಗೆ ಹೋಗಲು ಸಾಧ್ಯ ಇಲ್ಲದಂತಾಗಿದೆ’ ಎಂದು ರೈತ ಲೋಕೇಶ್ ಹೇಳಿದರು.
ಎಐಸಿಸಿ ಸದಸ್ಯ ಬಿ.ಶಿವರಾಂ ಭೇಟಿ: ಸೇತುವೆ ಮುಳುಗಿ ಜಮೀನು ಸಂಪರ್ಕ ಕಡಿತವಾಗಿರುವ ಬಂಡಿಲಕ್ಕಕೊಪ್ಪಲು ಬಳಿಯ ಹಳ್ಳಕ್ಕೆ ಎಐಸಿಸಿ ಸದಸ್ಯ ಬಿ.ಶಿವರಾಂ ಹಾಗೂ ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎನ್.ಶರತ್ ಮೊದಲಾದ ಮುಖಂಡರು ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ.
‘ರೈತರಿಗೆ ಎತ್ತಿನಹೊಳೆ ಯೋಜನೆಯಿಂದ ಹಾನಿಯಾಗಿರುವ ಕುರಿತು ಸರ್ಕಾರದ ಗಮನಕ್ಕೆ ತರುತ್ತೇವೆ. ಪರಿಹಾರ ಕಾರ್ಯ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದು ಬಿ.ಶಿವರಾಂ ತಿಳಿಸಿರುವುದಾಗಿ’ ಎಂದು ರೈತ ಲೋಕೇಶ್ ತಿಳಿಸಿದರು.
ಎತ್ತಿನಹೊಳೆ ಯೋಜನೆ ನೀರನ್ನು ರಭಸವಾಗಿ ಹರಿಸುತ್ತಿಲ್ಲ. ವಾರದಿಂದ ಹಳ್ಳದ ಸಾಲಿನಲ್ಲಿ ಮಳೆ ಬಿದ್ದಿರುವುದರಿಂದ ಹಳ್ಳದಲ್ಲಿ ಹರಿಯುವ ನೀರಿನ ಪ್ರಮಾಣ ಹೆಚ್ಚಾಗಿರಬಹುದುಈರಯ್ಯ ಎತ್ತಿನಹೊಳೆ ಯೋಜನೆ ಎಂಜಿನಿಯರ್
ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧವಿಲ್ಲ. ನಮ್ಮೂರ ಹಳ್ಳದಲ್ಲಿಯೂ ನೀರು ಹರಿಯಲಿ. ಆದರೆ ಬಂಡಿಲಕ್ಕನಕೊಪ್ಪಲು ಹಳ್ಳಕ್ಕೆ ದೊಡ್ಡ ಸೇತುವೆ ನಿರ್ಮಾಣ ಮಾಡಬೇಕು.ಬಿ.ಎಂ. ಸುರೇಶ್ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಸದಸ್ಯ
350 ಎಕರೆ ಕೃಷಿಗೆ ತೊಂದರೆ:
ಬಂಡಿಲಕ್ಕನಕೊಪ್ಪಲು ಬಳಿಯ ಹಳ್ಳದ ಸೇತುವೆ ಮುಳುಗಿರುವುದರಿಂದ ಸುಮಾರು 350 ಎಕರೆ ಕೃಷಿ ಪ್ರದೇಶಕ್ಕೆ ಸಂಪರ್ಕ ಇಲ್ಲದಂತಾಗಿದೆ. ದ್ವಾರಸಮುದ್ರ ಕೆರೆ ಕೋಡಿ ಬಿದ್ದಾಗ ಸೇತುವೆ ಮುಳುಗುವುದು ಮಾಮೂಲಿ. ಆದರೆ ಎತ್ತಿನಹೊಳೆ ನೀರು ಹರಿಸಿದ ನಂತರ ಸಮಸ್ಯೆ ಹೆಚ್ಚಾಗಿದೆ ಎನ್ನುತ್ತಾರೆ ರೈತರು.
ತೆಂಗಿನಕಾಯಿ ಹಿಪ್ಪುನೇರಳೆ ಸೊಪ್ಪು ಹತ್ತಿ ಹಾಗೂ ತರಕಾರಿ ಸಾಗಿಸಲು ಕಷ್ಟವಾಗಿದೆ. ಕಳೆದ ವರ್ಷ ಹತ್ತಿ ಹಿಪ್ಪುನೇರಳೆ ಸೊಪ್ಪು ಸಾಗಿಸುತ್ತಿದ್ದ ಎತ್ತಿನ ಗಾಡಿ ಬಿದ್ದ ಘಟನೆಗಳು ನಡೆದಿವೆ. ಹಿಪ್ಪು ನೇರಳೆ ಸಾಗಿಸಿ ರೇಷ್ಮೆ ಕೃಷಿ ನಡೆಸಲು ಸಾಧ್ಯವಾಗುತ್ತಿಲ್ಲ. ಕೆಲವರು ಹೊಲದಲ್ಲಿ ದನ ಮೇಯಿಸುತ್ತಿದ್ದಾರೆ. ಮತ್ತಷ್ಟು ಮಂದಿ ಸಿಕ್ಕಿದಷ್ಟು ಹಣಕ್ಕೆ ಸೊಪ್ಪು ಮಾರಿಕೊಂಡು ರೇಷ್ಮೆ ಕೃಷಿ ಕೈಬಿಟ್ಟಿದ್ದಾರೆ ಎಂದು ರೈತರು ತಿಳಿಸಿದರು. ಹಳ್ಳದ ಪಕ್ಕದ ಜಮೀನುಗಳು ಊರಿನಿಂದ 3 ಕಿ.ಮೀ. ದೂರದಲ್ಲಿವೆ. ಹಳೇಬೀಡು ಮಾಯಗೊಂಡನಹಳ್ಳಿ ಕಡೆಯಿಂದ 12 ಕಿ.ಮೀ. ಕ್ರಮಿಸಿ ಕೃಷಿ ನಡೆಸುವ ಪರಿಸ್ಥಿತಿ ನಮ್ಮದಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.