ADVERTISEMENT

ಹಳೇಬೀಡು: ಪಕ್ಷಿಗಳ ಕಾಟ, ಅತಿವೃಷ್ಟಿಯಿಂದ ಸೂರ್ಯಕಾಂತಿ ಉಳಿಸಲು ರೈತನ ಪ್ರಯತ್ನ

ಎಚ್.ಎಸ್.ಅನಿಲ್ ಕುಮಾರ್
Published 7 ಆಗಸ್ಟ್ 2025, 3:04 IST
Last Updated 7 ಆಗಸ್ಟ್ 2025, 3:04 IST
ಹಳೇಬೀಡು ಸಮೀಪದ ಕೆ.ಮಲ್ಲಾಪುರ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆ ಉಳಿಸಿಕೊಂಡಿರುವ ರೈತ ಚೆನ್ನಕೇಶವ ಮೂರ್ತಿ.
ಹಳೇಬೀಡು ಸಮೀಪದ ಕೆ.ಮಲ್ಲಾಪುರ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆ ಉಳಿಸಿಕೊಂಡಿರುವ ರೈತ ಚೆನ್ನಕೇಶವ ಮೂರ್ತಿ.   

ಹಳೇಬೀಡು: ಪಕ್ಷಿಗಳ ಕಾಟ, ಅತಿವೃಷ್ಟಿ, ಅನಾವೃಷ್ಟಿ ಮೊದಲಾದ ಕಾರಣಗಳಿಂದ ಸೂರ್ಯಕಾಂತಿ ಬೆಳೆಯನ್ನು ರೈತರು ಕೈಬಿಟ್ಟಿರುವ ಕಾಲದಲ್ಲಿ, ಕೆ.ಮಲ್ಲಾಪುರ ಗ್ರಾಮದ ಅತಿ ಸಣ್ಣ ರೈತ ಚನ್ನಕೇಶವ ಮೂರ್ತಿ ಬೆಳೆ ಉಳಿಸಿಕೊಂಡು ಬಂದಿದ್ದಾರೆ.

ಕೇವಲ ಒಂದು ಎಕರೆ ಜಮೀನು ಹೊಂದಿರುವ ರೈತ ಚೆನ್ನಕೇಶವ ಮೂರ್ತಿ ಕಷ್ಟದಲ್ಲಿಯೂ ಎಣ್ಣೆಕಾಳಿನ ಸೂರ್ಯಕಾಂತಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ನಿಟ್ಟಿನಲ್ಲಿ 14 ಗುಂಟೆ ಸೂರ್ಯಕಾಂತಿ ಬೆಳೆದಿದ್ದಾರೆ.

3 ವರ್ಷದ ಹಿಂದೆ ಗ್ರಾಮದ ಹೊಲದ ಬಯಲಿನಲ್ಲಿ ಸುಮಾರು 50 ರಿಂದ 60 ಎಕರೆ ಸೂರ್ಯಕಾಂತಿ ಬೆಳೆಯುತ್ತಿದ್ದರು. ಗ್ರಾಮದ ಸುತ್ತ ಸೂರ್ಯಕಾಂತಿಯ ಸೊಬಗು ರಾರಾಜಿಸುತ್ತಿತ್ತು. ಕಣ್ಣು ಹಾಯಿಸಿದಷ್ಟು ದೂರ ಸೂರ್ಯಕಾಂತಿಯ ಚೆಲುವು ಮನಸ್ಸನ್ನು ಸೆಳೆಯುತ್ತಿತ್ತು. ಈಗ ಗ್ರಾಮದ ಸುತ್ತಲಿನ ಹಳ್ಳಿ ಸುತ್ತಾಡಿದರೂ ಚೆನ್ನಕೇಶವ ಮೂರ್ತಿ ಅವರ ಜಮೀನು ಹೊರತು ಪಡಿಸಿ, ಬೇರೆಲ್ಲಿಯೂ ಸೂರ್ಯಕಾಂತಿ ಬೆಳೆ ನೋಡಲು ಕಾಣ ಸಿಗುವುದಿಲ್ಲ.

ADVERTISEMENT

‘ನಾನೊಬ್ಬ ಮಾತ್ರ ಸೂರ್ಯಕಾಂತಿ ಬೆಳೆದಿರುವುದರಿಂದ ಹಕ್ಕಿಗಳು ನಿಯಂತ್ರಣ ಕಷ್ಟವಾಗಿದೆ. 50 ಎಕರೆ ಹೊಲವನ್ನು ಹಂಚಿಕೊಂಡು ಹಾಲು ತುಂಬಿದ ಸೂರ್ಯಕಾಂತಿ ಬೀಜವನ್ನು ಮೇಯುತ್ತಿದ್ದ ಹಕ್ಕಿಗಳು ಈಗ ನಮ್ಮ ಜಮೀನಿಗೆ ಲಗ್ಗೆ ಇಟ್ಟಿವೆ. ಛಲ ಬಿಡದೇ ಹಕ್ಕಿಗಳನ್ನು ಓಡಿಸಿಕೊಂಡು ಬೆಳೆ ಉಳಿಸಿಕೊಂಡಿದ್ದೇನೆ’ ಎಂದು ಚೆನ್ನಕೇಶವ ಮೂರ್ತಿ ತಿಳಿಸಿದರು.

‘ಸೂರ್ಯಕಾಂತಿಗೆ ವಿವಿಧ ಹಕ್ಕಿಗಳು ಲಗ್ಗೆ ಇಡುತ್ತವೆ. ಸ್ಥಳೀಯ ಹಕ್ಕಿಗಳು ಮಾತ್ರವಲ್ಲದೇ, ವಲಸೆ ಹಕ್ಕಿಗಳು ಸೂರ್ಯಕಾಂತಿ ತಿನ್ನಲು ಬರುವ ಸಾಧ್ಯತೆ ಇರುತ್ತದೆ. ಅದರಲ್ಲಿಯೂ ಗಿಳಿಗಳಿಗೆ ಸೂರ್ಯಕಾಂತಿ ಎಂದರೆ ಪಂಚಪ್ರಾಣ. ಅದೇನೂ ಸೂರ್ಯಕಾಂತಿ ಬೆಳೆ ಕೈ ಬಿಡಲು ಮನಸ್ಸಿಲ್ಲದೆ‌ ಹೋರಾಡುತ್ತಿದ್ದೇನೆ’ ಎಂದು ಹೇಳಿದರು.

‘ಒಂದು ಎಕರೆ ಸೂರ್ಯಕಾಂತಿ ಬೆಳೆಯಲು ₹ 5ಸಾವಿರ ವೆಚ್ಚವಾಗುತ್ತದೆ. ಪೂರಕ ವಾತಾವರಣ ಇದ್ದರೆ, ಒಂದು ಎಕರೆಗೆ ಕನಿಷ್ಠ 20 ಕ್ವಿಂಟಲ್ ಸೂರ್ಯಕಾಂತಿ ಉತ್ಪಾದಿಸಬಹುದು. ಬೆಳೆಗೆ ಒಂದು ಬಾರಿ ಗೊಬ್ಬರ ಹಾಕಿದರೆ ಸಾಕು. ರೋಗ ಬಾಧೆ ತುಂಬಾ ಕಡಿಮೆ. ಕೀಟ ಬರುವ ಸಾಧ್ಯತೆ ಇರುತ್ತದೆ. ಆದರೂ ಹೆಚ್ಚಿನ ಪ್ರಮಾಣದ ಔಷಧ ಸಿಂಪಡಣೆ ಅಗತ್ಯವಿಲ್ಲ. ಹೂವಾದ ನಂತರ ಜೇನುನೋಣ ಪರಾಗಸ್ಪರ್ಶ ನಡೆಸುತ್ತೇವೆ. ಈ ಸಂದರ್ಭದಲ್ಲಿ ಕೀಟನಾಶಕ ಸಿಂಪಡಣೆ ಮಾಡಿದರೆ, ಜೇನುನೋಣ ನಾಶವಾಗುತ್ತವೆ. ರೈತರು ಜೇನುನೋಣ ಉಳಿಸಿಕೊಳ್ಳುವುದು ಅಗತ್ಯ’ ಎಂದು ಹೇಳಿದರು.

ತೆಂಗಿನ ಎಣ್ಣೆ ಬೆಲೆ ₹400ಕ್ಕೆ ಮುಟ್ಟಿದೆ. ಎಣ್ಣೆಕಾಳಿನ ಸೂರ್ಯಕಾಂತಿ ಶೇಂಗಾ ಉಳಿಸಿಕೊಳ್ಳಬೇಕಾಗಿದೆ. ಚೆನ್ನಕೇಶವ ಮೂರ್ತಿ ಪ್ರಯತ್ನ ಮೆಚ್ಚುವಂಥದ್ದು.
ಎಸ್.ಎನ್. ಯೋಗೀಶಪ್ಪ ರೈತ
ಎಣ್ಣೆಕಾಳಿನ ಸೂರ್ಯಕಾಂತಿ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾಗಿದೆ. ಬೆಳೆ ಉಳಿಸಿಕೊಳ್ಳಲು ರೈತರಿಗೆ ಜಾಗೃತಿ ಮೂಡಿಸಲಾಗುವುದು.
ತೇಜಸ್ ಕುಮಾರ್ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.