ADVERTISEMENT

ವಿಜಯಾ ದಬ್ಬೆ ಆದರ್ಶ ಅನುಕರಣೀಯ: ಎಂ.ಮಮತಾ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 13:00 IST
Last Updated 15 ಜೂನ್ 2025, 13:00 IST
ಬೇಲೂರಿನಲ್ಲಿ ಆಯೋಜಿಸಿದ್ದ ಸಾಹಿತಿ ಡಾ.ವಿಜಯಾ ದಬ್ಬೆ ಜನ್ಮದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ತಹಶೀಲ್ದಾರ್ ಎಂ.ಮಮತಾ ಉದ್ಘಾಟಿಸಿದರು
ಬೇಲೂರಿನಲ್ಲಿ ಆಯೋಜಿಸಿದ್ದ ಸಾಹಿತಿ ಡಾ.ವಿಜಯಾ ದಬ್ಬೆ ಜನ್ಮದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ತಹಶೀಲ್ದಾರ್ ಎಂ.ಮಮತಾ ಉದ್ಘಾಟಿಸಿದರು   

ಬೇಲೂರು: ‘ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ನೀಡದ ಸಂದರ್ಭದಲ್ಲಿ ಧ್ವನಿಯಾಗಿ ನಿಂತು, ಹೆಣ್ಣು ಅಬಲೆಯಲ್ಲ ಸಬಲೆ ಎಂದು ತೋರಿಸಿಕೊಟ್ಟ ಧೀಮಂತ ನಾಯಕಿ ವಿಜಯಾ ದಬ್ಬೆ’ ಎಂದು ತಹಶೀಲ್ದಾರ್ ಎಂ.ಮಮತಾ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಸಾಹಿತಿ ಡಾ. ವಿಜಯಾ ದಬ್ಬೆ ಜನ್ಮದಿನಾಚರಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿಜಯಾ ದಬ್ಬೆಯವರು ತಮ್ಮ ಸಾಹಿತ್ಯದ ಮೂಲಕ, ಹೆಣ್ಣು ಎಂದರೆ ಕೇವಲ ಸಾಂಸಾರಿಕ ಜೀವನಕ್ಕೆ ಸೀಮಿತವಲ್ಲ. ಹೊರ ಪ್ರಪಂಚದಲ್ಲಿ ಏನನ್ನಾದರೂ ಸಾಧಿಸಬಲ್ಲಳು ಎಂದು ತೋರಿಸಿದ್ದಾರೆ. ಹೆಣ್ಣಿನ ಸಮಸ್ಯೆಗಳನ್ನು ಹೇಳಿಕೊಳ್ಳಲು ಒಂದು ವೇದಿಕೆಯನ್ನು ತಮ್ಮ ಸಾಹಿತ್ಯದ ಮೂಲಕ ನಿರ್ಮಿಸಿದ್ದಾರೆ’ ಎಂದರು.

ADVERTISEMENT

‘ವಿಜಯಾ ದಬ್ಬೆ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಅವರು ತಮ್ಮ ಸಾಹಿತ್ಯದ ಮೂಲಕ ಕನ್ನಡದಲ್ಲಿ ಸ್ತ್ರೀವಾದಿ ವಿಮರ್ಶೆಗೆ ಅಡಿಪಾಯ ಹಾಕಿದ್ದು, ಮಹಿಳೆಯರ ಅಸ್ಮಿತೆ, ಶೋಷಣೆ, ಹಕ್ಕುಗಳನ್ನು ಚಲಾಯಿಸುವಂಥ ವೀರ ಮಹಿಳೆಯಾಗಿದ್ದರು. ಅವರ ಆದರ್ಶ, ತತ್ವಗಳನ್ನು ಪ್ರತಿಯೊಬ್ಬ ಪ್ರಜೆ ಮೈಗೂಡಿಸಿಕೊಳ್ಳಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಮಾ.ನ. ಮಂಜೇಗೌಡ ಮಾತನಾಡಿ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಹುರಿದುಂಬಿಸಬೇಕು’ ಎಂದರು.

ಪಾಲಿಟೆಕ್ನಿಕ್ ಹಿರಿಯ ಶ್ರೇಣಿ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಮಾತನಾಡಿದರು. ಪುರಸಭೆ ಪ್ರಭಾರ ಅಧ್ಯಕ್ಷೆ ಉಷಾ ಸತೀಶ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಮ. ಶಿವಮೂರ್ತಿ, ರಾಜೇಗೌಡ. ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಜಾವಗಲ್ ಪ್ರಸನ್ನಕುಮಾರ್‌, ಸಾಹಿತಿ ಇಂದಿರಮ್ಮ, ಕಸಾಪ ತಾಲ್ಲೂಕು ಘಟಕದ ಉಪಾಧ್ಯಕ್ಷ ಎಚ್.ಆರ್. ಚಂದ್ರು, ಕಾರ್ಯದರ್ಶಿ ಮಹೇಶ್, ಸಂಘಟನಾ ಕಾರ್ಯದರ್ಶಿ ಬೊಮ್ಮಡಿಯಹಳ್ಳಿ ಕುಮಾರಸ್ವಾಮಿ, ಕೋಶಾಧ್ಯಕ್ಷ ಗುರುರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.