ADVERTISEMENT

ಹಾಸನ: ಭಾರಿ ಮಳೆ, ವಿದ್ಯುತ್ ತಂತಿ ಬಿದ್ದು ನಾಲ್ಕು ಹಸು ಸಾವು

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 9:08 IST
Last Updated 23 ಜುಲೈ 2021, 9:08 IST
ಆಲೂರು ತಾಲ್ಲೂಕಿನ ವಾಟೆಹೊಳೆ ಜಲಾಶಯದಿಂದ ನೀರು ಬಿಡಲಾಗಿದೆ.
ಆಲೂರು ತಾಲ್ಲೂಕಿನ ವಾಟೆಹೊಳೆ ಜಲಾಶಯದಿಂದ ನೀರು ಬಿಡಲಾಗಿದೆ.   

ಹಾಸನ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಮೂರು ಮನೆಗಳು ಕುಸಿದು ಬಿದ್ದಿವೆ.

ಸಕಲೇಶಪುರ ತಾಲ್ಲೂಕಿನ ನಾಗರ ಗ್ರಾಮದಲ್ಲಿ ಗಾಳಿ , ಮಳೆಯಿಂದ ವಿದ್ಯುತ್ ತಂತಿ ಬಿದ್ದು ನಾಲ್ಕು ಹಸುಗಳು ಸಾವನ್ನಪ್ಪಿವೆ. ಹೇಮಾವತಿ ಜಲಾಶಯದ ಒಳ ಹರಿವು 20 ಸಾವಿರ ಕ್ಯುಸೆಕ್ ಗೆ ಏರಿಕೆಯಾಗಿದೆ. ವಾಟೆಹೊಳೆ ಜಲಾಶಯ ಭರ್ತಿಯಾಗಿದೆ.

ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಸಕಲೇಶಪುರ, ಆಲೂರು ತಾಲ್ಲೂಕಿನ ಕಾಫಿ, ಅಡಿಕೆ ತೋಟ, ಭತ್ತ ದ ಗದ್ದೆ ಜಲಾವೃತಗೊಂಡಿದೆ.

ಬಿತ್ತನೆಗಾಗಿ ಸಿದ್ದಪಡಿಸಿಕೊಂಡಿದ್ದ ಭತ್ತದ ಪೈರು ಮತ್ತು ನಾಟಿ ಮಾಡಿದ್ದ ಗದ್ದೆಗಳೂ ಜಲಾವೃತಗೊಂಡಿದೆ. ಸಕಲೇಶಪುರ ತಾಲ್ಲೂಕಿನ ಈಶ್ವರಹಳ್ಳಿಯಲ್ಲಿ ಚಕ್ರತೀರ್ಥ ಉಕ್ಕಿ ಹರಿದಿದೆ. ಮಠಸಾಗರ -ಹಣ್ಣಳ್ಳಿ ನಡುವೆ ಸೇತುವೆ ತುಂಬಿ ಹರಿಯುತ್ತಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ.

ಬೇಲೂರು ತಾಲ್ಲೂಕಿನ ಇಂಟಿತೊಳಲು ಗ್ರಾಮದಲ್ಲಿ ದನದ ಕೊಟ್ಟಿಗೆ ಕುಸಿದು ಬಿದ್ದಿದೆ. ಆಲೂರು ತಾಲ್ಲೂಕಿನ ಹೊಸ ಹಳ್ಳಿಯಲ್ಲಿ ಸೋಮೆಗೌಡರ ಮನೆ ಕುಸಿದಿದೆ.

ADVERTISEMENT

ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಶಿರಾಡಿಘಾಟ್ ರಸ್ತೆಯಲ್ಲಿ ಶುಕ್ರವಾರದಿಂದ ಮುಂದಿನ ಆದೇಶದವರೆಗೂ ಬೃಹತ್ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಲಘು ವಾಹನಗಳು ಬೆಳ್ಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.

ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಎಲ್ಲಾ ವಾಹನ ಸಂಚಾರ ನಿಷೇಧಿಸಲಾಗಿದೆ. ಕಾರು, ಜೀಪ್, ದ್ವಿಚಕ್ರ ವಾಹನಗಳು, ಮಿನಿ ಟೆಂಪೋ, ಸಾರಿಗೆ ಬಸ್ ಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.

ಟ್ಯಾಂಕರ್, ರಾಜಹಂಸ, ಐರಾವತ ಕಂಟೈನರ್ ವಾಹನಗಳಿಗೆ ಸಂಪೂರ್ಣ ನಿಷೇಧಿಸಲಾಗಿದೆ. ಹಾಸನ-ಬೇಲೂರು-ಮೂಡಿಗೆರೆ ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿಗೆ ತೆರಳುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.