ADVERTISEMENT

ಕೊಣನೂರು | ಹಸಿರು ಸಿರಿ ಹೊದ್ದ ಅರಸೀಕಟ್ಟೆ ಕ್ಷೇತ್ರ: ಆಹ್ಲಾದಕರ ವಾತಾವರಣ ನಿರ್ಮಾಣ

ಭಕ್ತರಿಗೆ ತಂಪು ನೀಡುತ್ತಿರುವ ಮರಗಿಡಗಳು

ಬಿ.ಪಿ.ಗಂಗೇಶ್‌
Published 5 ಜುಲೈ 2025, 6:47 IST
Last Updated 5 ಜುಲೈ 2025, 6:47 IST
ಕೊಣನೂರು ಸಮೀಪದ ಆರಸೀಕಟ್ಟೆಯ ಅಮ್ಮ ದೇವಿಯ ಕ್ಷೇತ್ರದಲ್ಲಿ ನೆಟ್ಟಿ ಬೆಳೆಸಿರುವ ಬಾಟಲ್ ಬ್ರಷ್‌ ಗಿಡಗಳು ಹೂ ಬಿಟ್ಟು ಗಮನ ಸೆಳೆಯುತ್ತಿವೆ
ಕೊಣನೂರು ಸಮೀಪದ ಆರಸೀಕಟ್ಟೆಯ ಅಮ್ಮ ದೇವಿಯ ಕ್ಷೇತ್ರದಲ್ಲಿ ನೆಟ್ಟಿ ಬೆಳೆಸಿರುವ ಬಾಟಲ್ ಬ್ರಷ್‌ ಗಿಡಗಳು ಹೂ ಬಿಟ್ಟು ಗಮನ ಸೆಳೆಯುತ್ತಿವೆ   

ಕೊಣನೂರು: ಲಕ್ಷಾಂತರ ಭಕ್ತರ ಇಷ್ಟ ದೇವತೆ ಆರಸೀಕಟ್ಟೆಯ ಅಮ್ಮ ದೇವಿಯ ದೇವಾಲಯದ ಆವರಣದಲ್ಲಿನ ಪ್ರಕೃತಿ ಸೊಬಗಿನಿಂದಾಗಿ ಕ್ಷೇತ್ರವು ಭಕ್ತರ ಮತ್ತು ನೋಡುಗರ ಮೆಚ್ಚುಗೆಯ ಕ್ಷೇತ್ರವಾಗಿದೆ.

ಸಮೀಪದ ಮುದ್ದನಹಳ್ಳಿಯಲ್ಲಿರುವ ಶಕ್ತಿ ದೇವತೆ ಆರಸೀಕಟ್ಟೆಯ ಅಮ್ಮ ದೇವಿಯ ಕ್ಷೇತ್ರವು ಹಸಿರು ಮತ್ತು ಹೂಗಳಿಂದ ನಳನಳಿಸುತ್ತಿದೆ. ಕ್ಷೇತ್ರದ ತುಂಬೆಲ್ಲ ಸೊಂಪಾಗಿ ಬೆಳೆದಿರುವ ಹಸಿರಿನ ಹೊದಿಕೆಯಿಂದ, ಬರುವ ಭಕ್ತರ ಪಾಲಿಗೆ ನೆಮ್ಮದಿಯ ಮತ್ತು ಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿಗೆ ಬರುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

5 ವರ್ಷಗಳ ಹಿಂದೆ ಅವ್ಯವಸ್ಥೆ ಮತ್ತು ಅನೈರ್ಮಲ್ಯಕ್ಕೆ ಹೆಸರಾಗಿದ್ದ ಆರಸೀಕಟ್ಟೆಯ ಅಮ್ಮ ದೇವಿಯ ಕ್ಷೇತ್ರಕ್ಕೆ ಇದೀಗ ಹೊಸ ಚೈತನ್ಯ ಬಂದಂತಾಗಿದೆ. ದೇವಾಲಯ ಸಮಿತಿಯು ಕೈಗೊಂಡ ಜನಸ್ನೇಹಿ ಸೌಲಭ್ಯಗಳು ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದ ವಿವಿಧೆಡೆಗಳಿಂದ ಕ್ಷೇತ್ರಕ್ಕೆ ಬರುವ ಸಾವಿರಾರು ಭಕ್ತರ ಪಾಲಿನ ಸಂತೋಷಕ್ಕೆ ಕಾರಣವಾಗಿವೆ.

ADVERTISEMENT

ಕ್ಷೇತ್ರದಲ್ಲಿ ಸಮಿತಿಯು ಮೊದಲ ಆದ್ಯತೆಯಾದ ಸ್ವಚ್ಛ ಮತ್ತು ಸುಂದರ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕ್ಷೇತ್ರದ ಹೇಮಾವತಿ ಸಭಾಂಗಣದ ಎದುರು ಮತ್ತು ಪಕ್ಕದಲ್ಲಿದ್ದ 5 ಎಕರೆ ಖಾಲಿ ಜಾಗದಲ್ಲಿ ವಿವಿಧ ಗಿಡಗಳನ್ನು ನೆಡಲಾಗಿದೆ. 5 ವರ್ಷಗಳಿಂದ ಇಲ್ಲಿ ನೆಟ್ಟು ಪೋಷಿಸಿದ ವಿವಿಧ ಗಿಡಗಳು ಇದೀಗ ಹೂ, ಹಣ್ಣು, ಕಾಯಿ ಬಿಟ್ಟು ಇಡೀ ಕ್ಷೇತ್ರಕ್ಕೆ ಮೆರುಗು ನೀಡುತ್ತಿವೆ.

ಮಧ್ಯದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಲಾಗಿದೆ. ಸಾಲಾಗಿ ನೆಟ್ಟು ಬೆಳೆಸಿರುವ ಹೊಳೆ ಮತ್ತಿ, ಅತ್ತಿ, ಮಹಾಗನಿ, ಹೊಳೆ ದಾಸವಾಳ, ಬಾಟಲ್ ಪ್ರೆಶ್, ಬಸವನ ಪಾದ, ಕಾಡು ಬಾದಾಮಿ, ನೇರಳೆ, ಹೊಂಗೆ, ಹಲಸು, ಗೋಣಿ, ಕೂಳಿ, ಮಾವು, ಅರಳಿ ಮರ, ಬೇವು, ಕಾಡುನೆಲ್ಲಿ ಸೇರಿದಂತೆ ಸುಮಾರು 500 ಕ್ಕೂ ಅಧಿಕ ಮರಗಳು ವಾಹನಗಳಿಗೆ ಮತ್ತು ಜನರಿಗೆ ನೆರಳು ನೀಡುತ್ತಿವೆ. ಹಚ್ಚ ಹಸುರಿನ ವಾತಾವರಣದೊಂದಿಗೆ ಗಮನ ಸೆಳೆಯುತ್ತಿವೆ.

ಮೊದಲ ಸಾಲಿನಲ್ಲಿರುವ ಬಾಟಲ್ ಬ್ರಷ್‌ ಗಿಡಗಳು ಕೆಂಪನೆಯ ಹೂವುಗಳಿಂದ ತುಂಬಿದ್ದು. ಬರುವ ಭಕ್ತರನ್ನು ಸ್ವಾಗತಿಸಲು ಹೂವಿನಿಂದ ಅಂಲಕಾರ ಮಾಡಿದಂತೆ ಕಾಣುತ್ತಿವೆ. ಸಂಪಿಗೆ ಮರದ ಹೂಗಳ ಸುವಾಸನೆಯು ಅಹ್ಲಾದಕರವಾಗಿದೆ. ನೇರಳೆ, ಮಾವು ಮತ್ತು ಹಲಸು ಮರಗಳು, ಕಾಯಿ ಮತ್ತು ಹಣ್ಣು ಬಿಡಲು ಪ್ರಾರಂಭಿಸಿದ್ದು, ನೆಟ್ಟು ಬೆಳೆಸಿದವರಿಗೆ ಸಂತೃಪ್ತಿ ಮತ್ತು ನೋಡುಗರ ಕಣ್ಮನ ಸೆಳೆಯುತ್ತಿವೆ.

ಕೆರೆಯ ಏರಿಯ ಮೇಲೆ ನೆಲೆಸಿರುವ ದೇವಿಯ ದರ್ಶನಕ್ಕೆ ಹೋಗುವ ಕೆರೆ ಏರಿಯ ಇಕ್ಕೆಲಗಳಲ್ಲಿ ಬೆಳೆಸಿರುವ ಸಾಲು ಗಿಡ ಮರಗಳು ಸೊಂಪಾಗಿ ಬೆಳೆದಿದ್ದು, ಕ್ಷೇತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಕೆರೆಯ ಬದಿಯಲ್ಲಿನ ಮರಗಳಂತೂ ಛತ್ರಿಯಾಕಾರದಲ್ಲಿ ಬೆಳೆದಿದ್ದು, ಗಾಳಿಗೆ ತೂಗುತ್ತಿವೆ.
ಗಿಡಗಳನ್ನು ರಕ್ಷಿಸಲು ನಿರ್ಮಿಸಿರುವ ಬೇಲಿಯಲ್ಲಿ ಹೆಮಿಲಿಯಾ, ಆಕೇಲಿಪಾ, ಬರ್ಡ ಆಫ್ ಪ್ಯಾರಡೈಸ್, ಜತ್ರೋಪಾ, ಕಣಗಲೆ, ಲಕ್ಕಿಗಿಡಗಳು ಹೂ ಬಿಟ್ಟಿರುವುದು ಆಕರ್ಷಕವಾಗಿ ಕಾಣುತ್ತಿವೆ. ಕೆಲ ಸಸ್ಯಗಳು ವಿಶೇಷ ಬಣ್ಣದ ಎಲೆಗಳನ್ನು ಹೊಂದಿರುವುದು ವಿಶೇಷವಾಗಿದೆ.

ಹಸಿರು ವಾತಾವರಣದ ನಡುವೆ ವಿಶ್ರಾಂತಿಗಾಗಿ ನಿರ್ಮಿಸಿರುವ ಪರಗೋಲ
ಮಕ್ಕಳಿಗಾಗಿ ಆಟಿಕೆಗಳನ್ನು ಜೋಡಿಸಿರುವ ಸ್ಥಳ

ಸಮಿತಿ ಶ್ರಮದ ಪ್ರತೀಕ

ಕ್ಷೇತ್ರದಲ್ಲಿ ಬರುವ ಜನರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಪ್ರಯತ್ನ ಮಾಡಿದ್ದು ಬೆಳೆದು ನಿಂತಿರುವ ಗಿಡಮರಗಳು ಸಮಿತಿಯ ಶ್ರಮದ ಪ್ರತೀಕವಾಗಿವೆ ಎಂದು ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಹೇಳಿದರು. ಅವ್ಯವಸ್ಥೆಯ ಆಗರವಾಗಿದ್ದ ಆರಸೀಕಟ್ಟೆಯ ಅಮ್ಮ ದೇವಿಯ ಕ್ಷೇತ್ರವನ್ನು ಸ್ವಚ್ಛ ಸುಂದರ ಮತ್ತು ಧಾರ್ಮಿಕ ಸಾಮರಸ್ಯದ ಕ್ಷೇತ್ರವನ್ನಾಗಿ ಮಾಡಬೇಕೆಂದು 5 ವರ್ಷಗಳ ಹಿಂದೆ ಸಮಿತಿ ರಚಿಸಿಕೊಂಡು ಪಣ ತೊಟ್ಟಿದ್ದೆವು. ಸಮಿತಿಯ ವತಿಯಿಂದ ಸಮಾಜಕ್ಕೆ ಉಪಯುಕ್ತ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮೊದಲಿಗೆ ದುರ್ವಾಸನೆ ಬರುತ್ತಿತ್ತು. ಈಗ ದೇವಾಲಯ ಸಾಲು ಅಂಗಡಿಗಳು ಅಡುಗೆ ಮನೆಗಳು ಬಲಿಪೀಠ ಎಡೆಪೀಠ ರಸ್ತೆ ಸೇರಿದಂತೆ ಇಡೀ ಕ್ಷೇತ್ರವೇ ಸ್ವಚ್ಛವಾಗಿದೆ. ಇಲ್ಲಿನ ಹಸಿರಿನ ವಾತಾವರಣ ಖುಷಿ ಕೊಡುತ್ತಿದೆ.
–ರಮೇಶ, ಸೋಮವಾರಪೇಟೆಯ ಭಕ್ತ
ಸಸ್ಯಾಹಾರಿಯಾದ ನಾನು ಕೆಲ ವರ್ಷಗಳ ಹಿಂದೆ ಅರಸೀಕಟ್ಟೆಯಲ್ಲಿನ ಕೊಳಕನ್ನು ನೋಡಿ ಇಲ್ಲಿಗೆ ಬರಲು ಇಷ್ಟಪಡುತ್ತಿರಲಿಲ್ಲ ಇದೀಗ ಇಲ್ಲಿನ ಉತ್ತಮ ವ್ಯವಸ್ಥೆ ಸ್ವಚ್ಛತೆ ಉತ್ತಮ ಪರಿಸರ ನಿರ್ಮಾಣ ಮಾಡಿರುವುದರಿಂದ ಆಗಾಗ ಬಂದು ಹೋಗುತ್ತೇವೆ.
–ರಾಜಶೇಖರ, ಬಸವನಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.