ADVERTISEMENT

ಹಳೇಬೀಡು | ಬಿಸಿಲಿಲ್ಲದೇ ಬೆಳವಣಿಗೆ ಕುಂಠಿತ: ಕೊಳೆಯುತ್ತಿರುವ ಬೆಳೆ

ಎಚ್.ಎಸ್.ಅನಿಲ್ ಕುಮಾರ್
Published 26 ಅಕ್ಟೋಬರ್ 2025, 2:14 IST
Last Updated 26 ಅಕ್ಟೋಬರ್ 2025, 2:14 IST
ಹಳೇಬೀಡು ಸಮೀಪದ ಘಟ್ಟದಹಳ್ಳಿಯಲ್ಲಿ ನಿರಂತರ ಮಳೆಯಿಂದ ಬೀನ್ಸ್ ಬೆಳೆದ ಹೊಲ ಜಲಾವೃತವಾಗಿದೆ
ಹಳೇಬೀಡು ಸಮೀಪದ ಘಟ್ಟದಹಳ್ಳಿಯಲ್ಲಿ ನಿರಂತರ ಮಳೆಯಿಂದ ಬೀನ್ಸ್ ಬೆಳೆದ ಹೊಲ ಜಲಾವೃತವಾಗಿದೆ   

ಹಳೇಬೀಡು: ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದ ಹಳೇಬೀಡು, ಮಾದಿಹಳ್ಳಿ ಹೋಬಳಿಯಲ್ಲಿ ವಿವಿಧ ಬೆಳೆಗಳು ಜಲಾವೃತವಾಗಿವೆ. ಹೊಲದಲ್ಲಿ ನೀರು ನಿಂತಿರುವುದರಿಂದ ಬೆಳೆಗಳು ಕೊಳೆತು ಹೋಗುವ ಸ್ಥಿತಿಗೆ ತಲುಪಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

‘ತರಕಾರಿ ಬೆಳೆದ ಹೊಲಗಳಿಗೆ ಕಾಲಿಡಲು ಸಾಧ್ಯವಾಗದಂತೆ ನೀರು ನಿಂತಿದೆ. ಬೆಳೆಗಳಿಗೆ ತೇವಾಂಶ ಹೆಚ್ಚಾಗಿದ್ದು, ಬಿಸಿಲು ಬಾರದೇ ಮೋಡ ಕವಿದ ವಾತಾವರಣ ಇರುವುದರಿಂದ ಜಮೀನಿನಲ್ಲಿ ನಿಂತ ನೀರು ಒಣಗುತ್ತಿಲ್ಲ. ಕೊಳೆಯುವ ಸ್ಥಿತಿಯಲ್ಲಿರುವ ಬೆಳೆ ತೆರವು ಮಾಡಿ ಬೇರೆ ಬೆಳೆ ಮಾಡುವುದಕ್ಕೂ ಅವಕಾಶ ಇಲ್ಲದಂತಾಗಿದೆ. ಯಾವ ಬೆಳೆಯೂ ಕೈಹಿಡಿಯದೇ ನಷ್ಟ ಅನುಭವಿಸುವಂತಾಗಿದೆ. ರೈತರ ಸ್ಥಿತಿಗತಿ ಕೇಳುವವರೇ ಇಲ್ಲ’ ಎಂದು ರೈತ ಮಹಿಳೆ ಮಂಜುಳಾ ಅಳಲು ತೋಡಿಕೊಂಡರು.

‘ಪಂಪ್‌ಸೆಟ್‌ನಿಂದ ನೀರುಣಿಸಿ ಬೆಳೆಯುತ್ತಿದ್ದ ಬೆಳೆಗಳಿಗೆ ಬಿಡುವಿಲ್ಲದಂತೆ ಸುರಿದ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿದೆ. ಜಮೀನಿನ ಸುತ್ತ ಚರಂಡಿ ತೆಗೆದು ನೀರು ಬಸಿಯುವಂತೆ ಮಾಡುವುದಕ್ಕೂ ಅವಕಾಶ ಆಗುತ್ತಿಲ್ಲ. ಗದ್ದೆಗಳು ಹಾಗೂ ತೆಗ್ಗು ಪ್ರದೇಶದ ಜಮೀನುಗಳ ಸ್ಥಿತಿ ಹೇಳಲು ಅಸಾಧ್ಯವಾಗಿದೆ’ ಎಂದು ಹಳೇಬೀಡಿನ ರೈತ ಎಚ್.ಎಸ್. ಮಂಜುನಾಥ ಹೇಳಿದರು.

ADVERTISEMENT

‘ಅರಳಿದ ಹತ್ತಿ ಬಿಡಿಸುವುದಕ್ಕೆ ಮಳೆ ಬಿಡುವು ಕೊಡುತ್ತಿಲ್ಲ. ಮಳೆ ಹೊಡೆತಕ್ಕೆ ಹತ್ತಿ ಮಣ್ಣು ಪಾಲಾಗುತ್ತಿದೆ. ಕಾಯಿ ಒಡೆದು ಹತ್ತಿ ಅರಳದೇ ಉದುರುತ್ತಿವೆ. ಅತಿವೃಷ್ಟಿಯಿಂದ ಹೊಸ ಚಿಗುರಿನಲ್ಲಿ ಅರಳಿದ ಹೂವು, ಕಾಯಿ ಕಟ್ಟದೇ ಉದುರುತ್ತಿದೆ. ಯಾವ ಹಂತದಲ್ಲಿಯೂ ಹತ್ತಿ ಕೈಗೆ ಸಿಗದಂತಾಗಿದೆ’ ಎಂದು ರಾಜನಶಿರಿಯೂರು ರೈತ ಯಶೋಧರ ಹೇಳಿದರು.

‘ಟೊಮೆಟೊ ಹೂವು, ಕಾಯಿ, ಹಣ್ಣು ಎಲ್ಲವೂ ಉದುರಿ ಮಣ್ಣು ಪಾಲಾಗುತ್ತಿವೆ. ಸಾಕಷ್ಟು ಜಮೀನುಗಳಲ್ಲಿ ಮರದ ಕೋಲು ನೆಟ್ಟು, ತಂತಿಯ ಮೇಲೆ ಬೆಳೆಸಿದ ಟೊಮೆಟೊ ಗಿಡಗಳು ನೆಲಕ್ಕೆ ಬಾಗಿವೆ.  ಮಳೆಯಿಂದ ಬೆಳೆಗೆ ರೋಗ ಬಾಧೆ ಸಹ ಕಾಡುತ್ತಿದೆ’ ಎಂದು ಬೆಳೆಗಾರ ಮಧು ಹೇಳಿದರು.

‘ಶುಂಠಿ ಬೆಳೆಗೆ ಅಂಟಿದ ಕೊಳೆರೋಗ, ಬಿಳಿಸುಳಿ ರೋಗ, ಮಳೆ ಆರಂಭವಾದ ನಂತರ ಮತ್ತಷ್ಟು ಉಲ್ಬಣವಾಗಿದೆ. ಶುಂಠಿ ಕೊಳೆಯುತ್ತಿರುವುದರಿಂದ ಅವಧಿಗೆ ಮೊದಲೇ ಕೊಯ್ಲು ಮಾಡಲಾಗುತ್ತಿದೆ. ನಾಟಿ ಮಾಡಿದ ಟೊಮೆಟೊ, ಬೀನ್ಸ್, ಮೆಣಸಿನಕಾಯಿ, ಎಲೆಕೋಸು ಮೊದಲಾದ ತರಕಾರಿ ಗಿಡಗಳು ಮೇಲೇಳುತ್ತಿಲ್ಲ. ಮೋಡದ ವಾತಾವರಣದಿಂದ ನಾಟಿ ಮಾಡಿದ ಬೆಳೆಯನ್ನು ಮದುರುಗುಡಿ ರೋಗ ಕಾಡುತ್ತಿದೆ’ ಎಂದು ರೈತ ಘಟ್ಟದಹಳ್ಳಿ ಸಂತೋಷ್ ಹೇಳಿದರು.

ನಿರಂತರ ಮಳೆ ಹಾಗೂ ಮೋಡ ಮುಸುಕಿರುವುದರಿಂದ ಬೆಳೆಗಳ ಬೆಳವಣಿಗೆಗೆ ಪೂರಕ ವಾತಾವರಣ ಇಲ್ಲದಂತಾಗಿದೆ. ಬಿಸಿಲು ಬಂದು ಮಳೆ ಬಂದಿದ್ದರೆ ಅನುಕೂಲವಾಗುತ್ತಿತ್ತು
ಹಿರೇಹಳ್ಳಿ ದೇವರಾಜು ಬಸ್ತಿಹಳ್ಳಿ ರೈತ
ಮಳೆಯಿಂದ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದೆ. ಫಸಲು ಕೈಗೆ ಸಿಗದೇ ಖರ್ಚಿಗೆ ಕಾಸಿಲ್ಲದಂತಾಗಿದೆ. ಸರ್ಕಾರ ಪರಿಹಾರ ಕೊಟ್ಟರೆ ಮಾತ್ರ ರೈತ ಉಸಿರಾಡಬಹುದು
ಎಲ್.ಈ.ಶಿವಪ್ಪ ರೈತಸಂಘದ ಜಿಲ್ಲಾ ಮುಖಂಡ.

ತೋಟಗಾರಿಕೆಗೂ ತೊಡಕು

ತೆಂಗಿನ ತೋಟಗಳಲ್ಲಿ ಮರದಿಂದ ಬಿದ್ದ ಕಾಯಿಯನ್ನು ಮನೆಗೆ ತರಲು ಸಾಧ್ಯವಾಗದಂತೆ ಮಳೆ ಸುರಿಯುತ್ತಿದೆ. ಸ್ವಲ್ಪ ಸಮಯ ಮಳೆ ಬಿಡುವು ಕೊಟ್ಟರೂ ತೋಟಕ್ಕೆ ತಲುಪುವ ಹೊತ್ತಿಗೆ ಮಳೆ ಆರಂಭವಾಗುತ್ತದೆ. ತೋಟದಲ್ಲಿ ಕಾಲಿಡಲು ಸಾಧ್ಯವಿಲ್ಲದಂತಾಗಿದೆ. ಎರೆ ಮಣ್ಣಿನ ಕೆಲವು ತೋಟದಲ್ಲಿ ಮಂಡಿವರೆಗೂ ಕಾಲು ಹೂತುಕೊಳ್ಳುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ. ಬಾಳೆ ಬೆಳೆದ ಸಾಕಷ್ಟು ರೈತರ ಊಟದ ಎಲೆ ಉತ್ಪಾದನೆ ಮಾಡುತ್ತಾರೆ. ಎಲೆ ಹರಿದು ಚಿಂದಿ ಆಗಿರುವುದರಿಂದ ಊಟದ ಎಲೆ ಪೂರೈಕೆ ಮಾಡಲು ಸಾಧ್ಯವಿಲ್ಲದಂತಾಗಿದೆ. ಸಾಕಷ್ಟು ಕಡೆ ಬಾಳೆಗಿಡಗಳು ಮುರಿದು ಬಿದ್ದಿವೆ. ಕಾಯಿ ಬಲಿಯುವ ಮೊದಲೇ ಬಾಳೆಕಾಯಿ ನೆಲದ ಪಾಲಾಗುತ್ತಿವೆ ಎಂದು ರೈತರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.