ADVERTISEMENT

ವಿದ್ಯುತ್‌ ಮಾರ್ಗ ಸ್ಥಳಾಂತರಕ್ಕೆ ಕ್ರಮ

ವಿಮಾನ ನಿಲ್ದಾಣ ಸ್ಥಳ ಪರಿಶೀಲನೆ ನಡೆಸಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 4:55 IST
Last Updated 1 ಮಾರ್ಚ್ 2021, 4:55 IST
ಹಾಸನ ನಗರ ಸಮೀಪದ ಬೂವನಹಳ್ಳಿಯ ಉದ್ದೇಶಿತ ವಿಮಾನ ನಿಲ್ದಾಣದ ಕಾಯ್ದಿರಿಸಿರುವ ಸ್ಥಳಕ್ಕೆ ಇಂಧನ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಭೇಟಿ ನೀಡಿ ಪರಿಶೀಲಿಸಿದರು
ಹಾಸನ ನಗರ ಸಮೀಪದ ಬೂವನಹಳ್ಳಿಯ ಉದ್ದೇಶಿತ ವಿಮಾನ ನಿಲ್ದಾಣದ ಕಾಯ್ದಿರಿಸಿರುವ ಸ್ಥಳಕ್ಕೆ ಇಂಧನ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಭೇಟಿ ನೀಡಿ ಪರಿಶೀಲಿಸಿದರು   

ಹಾಸನ: ‘ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಡ್ಡಿಯಾಗಿರುವ ಹೈಟೆನ್ಷನ್‌ ವಿದ್ಯುತ್‌ ಮಾರ್ಗ ಬದಲಾವಣೆ ಸೇರಿದಂತೆ ಇತರೆ ಅಡೆತಡೆಗಳನ್ನು ನಿವಾರಣೆ ಮಾಡಿ ಮುಂದಿನ ವರ್ಷದ ವೇಳೆಗೆ ಜಿಲ್ಲೆಯ ಜನರಿಗೆ ಶುಭ ಸುದ್ದಿ ನೀಡಲಾಗುವುದು’ ಎಂದು ಇಂಧನ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಹೇಳಿದರು.

ನಗರ ಸಮೀಪದ ಬೂವನಹಳ್ಳಿಯಲ್ಲಿ ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಭೂಮಿ ಸ್ವಾಧೀನಮಾಡಿ ಕಾಯ್ದಿರಿಸಿರುವ ಸ್ಥಳಕ್ಕೆ ಭಾನುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಅಡೆತಡೆಗಳ ನಿವಾರಣೆ ಕುರಿತು ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆಮಾತನಾಡಿದರು.

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಲಬುರ್ಗಿ, ಬೀದರ್‌, ವಿಜಯಪುರ ವಿಮಾನ ನಿಲ್ದಾಣಗಳಿಗೆ ಚಾಲನೆ ನೀಡಿದ್ದೇವೆ. ಕಾರವಾರದಲ್ಲಿ ಭಾರತೀಯ ನೌಕಾಪಡೆ ಸಹಯೋಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತಿದ್ದೇವೆ. ಉತ್ತರ ಕರ್ನಾಟಕ, ರಾಜಧಾನಿಬೆಂಗಳೂರು ಹಾಗೂ ರಾಜ್ಯದ ಎಲ್ಲಾ ಪಟ್ಟಣಗಳ ಸಂಪರ್ಕ ಮಾಡುವ ಕಾರ್ಯ ಆಗುತ್ತಿದೆ. ಶಿವಮೊಗ್ಗದಲ್ಲಿ ಕೆಲಸ ಪ್ರಾರಂಭ ಮಾಡಿದ್ದು, ಈಗಾಗಲೇ ಅರ್ಧ ಮುಕ್ತಾಯಗೊಂಡಿದೆ’ ಎಂದು ತಿಳಿಸಿದರು.

ADVERTISEMENT

‘ಬಳ್ಳಾರಿ, ರಾಯಚೂರು ಹಾಗೂ ಹಾಸನದಲ್ಲಿ ಭೂಮಿ ಸ್ವಾಧೀನ ಮಾಡಲಾಗಿದೆ. ಹಾಸನ ವಿಮಾನ ನಿಲ್ದಾಣದಲ್ಲಿ ಕೆಲಸ ಪ್ರಾರಂಭ ಮಾಡಲು ಸರ್ಕಾರದ ಹಂತದಲ್ಲಿ ಯೋಜನೆ ನಡೆದಿದೆ. ಅದಕ್ಕಾಗಿ ಹಾಸನಕ್ಕೆ ಭೇಟಿ ನೀಡಿದ್ದೇನೆ. ಇಲ್ಲಿ ಕೆಲವು ತೊಂದರೆಗಳು ಇದ್ದವು. ಕೆರೆ ಹಾಗೂ ಕೆಲವು ಕಡೆ ಭೂಮಿಯನ್ನು ಅಗೆದಿದ್ದಾರೆ. ಹೈಟೆನ್ಷನ್‌ ಲೈನ್‌ ವಿಮಾನ ನಿಲ್ದಾಣ ಭೂಮಿಯಲ್ಲಿಯೇ ಹಾದುಹೋಗಿದೆ’ ಎಂದು ತಿಳಿಸಿದರು.

‘ವಿಮಾನ ನಿಲ್ದಾಣ ಎಂದರೆ ಕೇವಲ ರನ್‌ ವೇ ಮತ್ತು ಕಟ್ಟಡ ನಿರ್ಮಾಣ ಮಾತ್ರ ಅಲ್ಲ. ರನ್‌ ವೇನ ಎರಡೂ ಬದಿಯಲ್ಲಿ ಮೂರು ಕಿ.ಮೀ ವರೆಗೂ ಯಾವುದೇ ಅಡಚಣೆ ಇರಬಾರದು. ಇಲ್ಲದಿದ್ದರೆ ನಾವು ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಲು ಆಗುವುದಿಲ್ಲ. ಅದಕ್ಕಾಗಿ ಅಧಿಕಾರಿಗಳ ಜೊತೆಗೆ ಬಂದು ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸುತ್ತಿದ್ದೇವೆ’ಎಂದರು.

‘ವಿಮಾನ ನಿಲ್ದಾಣ ಜಾಗದಲ್ಲಿ ಸೆಸ್ಕ್‌ ವಿದ್ಯುತ್‌ ಲೈನ್‌ ಇದೆ. ಜೊತೆಗೆ ಕೆಲವು ಅಡ್ಡಿಗಳೂ ಇವೆ. ಅದನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಹೈಟೆನ್ಷನ್‌ ಲೈನ್‌ ಮಾರ್ಗ ಬದಲಾವಣೆಗೆ ಕೆಪಿಟಿಸಿಎಲ್‌ ಅವರು ಈಗಾಗಲೇ ಶೇಕಡಾ 80 ರಷ್ಟು ಕೆಲಸ ಮಾಡಿದ್ದಾರೆ. ಮಾರ್ಗ ಬದಲಾವಣೆಗೆ ಭೂ ಸ್ವಾಧೀನ ಏನು ಇಲ್ಲ. ಆದರೆ, ವಿದ್ಯುತ್‌ ಲೈನ್‌ ರೈತರ ಭೂಮಿ ಮೇಲೆ ಹಾದು ಹೋಗುತ್ತದೆ, ಅವರಿಗೆ ಸ್ವಲ್ಪ ಪರಿಹಾರ ನೀಡಬೇಕಾಗುತ್ತದೆ. ಅದನ್ನು ನಾವು ಮಾಡುತ್ತೇವೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸದ್ಯಕ್ಕೆಹೆಚ್ಚುವರಿ ಭೂಮಿ ಸ್ವಾಧೀನಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಈ ವೇಳೆ ಹಾಸನದ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ತಹಶೀಲ್ದಾರ್ ಶಿವಶಂಕರಪ್ಪ ಹಾಗೂ ಇತರೆ ಅಧಿಕಾರಿಗಳುಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.