
ಹಾಸನ: ‘ಸ್ವಾತಂತ್ರ್ಯ ನಮಗೆ ಸುಲಭವಾಗಿ ಬಂದಿದ್ದಲ್ಲ. ಅದರ ಹಿಂದೆ ಸಾವಿರಾರು ಹೋರಾಟಗಾರರ ತ್ಯಾಗವಿದೆ. ಹುತಾತ್ಮರ ದಿನ ಕೇವಲ ಒಂದು ದಿನದ ಆಚರಣೆಯಾಗದೇ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಬೇಕು’ ಎಂದು ಸಮಾಜ ವಿಜ್ಞಾನ ಶಿಕ್ಷಕ ಚಿದಾನಂದ ಕೆ.ಎನ್. ಹೇಳಿದರು.
ನಗರದ ಆರ್.ಸಿ. ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರಧಾನ) ಪ್ರೌಢಶಾಲಾ ವಿಭಾಗದಲ್ಲಿ ಬೆಳಗಿನ ಪ್ರಾರ್ಥನಾ ಅವಧಿಯ ಸಚೇತನ ಕಾರ್ಯಕ್ರಮದಲ್ಲಿ ಸರ್ವೋದಯ ದಿನಾಚರಣೆಯಲ್ಲಿ ಮಾತನಾಡಿದರು.
‘ನನ್ನ ಜೀವನವೇ ನನ್ನ ಸಂದೇಶ ಎನ್ನುತ್ತಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು 1948ರಲ್ಲಿ ಜನವರಿ 30ರಂದು ನಾಥೂರಾಮ್ ಗೋಡ್ಸೆಯಿಂದ ಹತ್ಯೆಗೀಡಾದರು. ಅವರ ಪುಣ್ಯತಿಥಿಯ ನೆನಪಿಗಾಗಿ ಈ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ’ ಎಂದರು.
ಹುತಾತ್ಮರ ಬಲಿದಾನ ನೆನೆಯುವ ಮೂಲಕ ಯುವ ಪೀಳಿಗೆಯಲ್ಲಿ ದೇಶಪ್ರೇಮ ಜಾಗೃತಗೊಳಿಸುವುದು ಈ ದಿನದ ಮುಖ್ಯ ಉದ್ದೇಶ. ಈ ದಿನವನ್ನು ಹುತಾತ್ಮರ ದಿನವೆಂದು, ಸರ್ವೋದಯ ದಿನವೆಂದೂ ಮತ್ತು ಸೌಹಾರ್ದ ಸಂಕಲ್ಪ ದಿನವೆಂದೂ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸೇವಾದಳದ ವಲಯ ಸಂಘಟಕಿ ರಾಣಿ ವಿ.ಎಸ್. ಮಾತನಾಡಿ, ‘ಗಾಂಧೀಜಿ ವಿಶ್ವಕ್ಕೆ ಶಾಂತಿದೂತರಾಗಿದ್ದಾರೆ. ಇಂದು ವಿಶ್ವ ಶಾಂತಿ ಇಡೀ ಜಗತ್ತಿಗೆ ಅಗತ್ಯವಾಗಿದೆ. ಗಾಂಧೀಜಿಯವರ ಆಶಯದಂತೆ ನಾವೆಲ್ಲರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜ ಸೇವೆ ನಮ್ಮ ಜೀವನದ ಧ್ಯೇಯವಾಗಬೇಕು. ಸೇವಾದಳವು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸೇವಾ ಮನೋಭಾವ ಬೆಳೆಸುತ್ತದೆ’ ಎಂದರು.
ಸಂಗೀತ ಶಿಕ್ಷಕ ಬಿ.ಎನ್.ಎಸ್. ಮುರಳಿ ಶಾಂತಿಮಂತ್ರಗಳನ್ನು ಹೇಳಿಕೊಟ್ಟರು. ಶಿಕ್ಷಕರಾದ ಎಚ್.ಪಿ.ಮಂಜುಳ, ಎ.ವಿ.ಗೀತಾರಾಣಿ, ರುದ್ರೇಶ್, ಎಂ.ಆರ್. ರಂಗಾಮಣಿ, ಎಸ್.ಕೆ.ಪೂರ್ಣಿಮಾ, ಪಿ. ಮಧು, ತೈಬಾ ಕೌಸರ್, ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.