
ಅರಕಲಗೂಡು: ಹಾಸನ ಹಾಲು ಒಕ್ಕೂಟಕ್ಕೆ ಬರುತ್ತಿರುವ ಹೆಚ್ಚಿನ ಹಾಲನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮೆಗಾ ಡೇರಿ ಸ್ಥಾಪನೆ ಮಾಡಲಾಗುತ್ತಿದೆ ಎಂದು ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಕೆ. ಸತೀಶ್ ತಿಳಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಗುರುವಾರ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಕ್ಕೂಟಕ್ಕೆ ಪ್ರತಿ ದಿನ 14.60 ಲಕ್ಷ ಲೀಟರ್ ಹಾಲು ಬರುತ್ತಿದ್ದು, ಮೂರರಿಂದ ನಾಲ್ಕು ಲಕ್ಷ ಲೀಟರ್ ಮಾತ್ರ ಮಾರಾಟವಾಗುತ್ತಿದೆ. ಉಳಿದ ಹಾಲಿನಿಂದ ಹಾಲಿನ ಪುಡಿ ಮತ್ತು ಸಿಹಿ ಖಾದ್ಯಗಳ ತಯಾರಿಕೆ ನಡೆದಿದೆ. ಹೆಚ್ಚಿನ ಹಾಲನ್ನು ಮಹಾ ನಗರಗಳಿಗೆ ಪೂರೈಸುವ ಮತ್ತು ಹೊರದೇಶಗಳಿಗೆ ರಪ್ತು ಮಾಡುವ ಉದ್ದೇಶದಿಂದ ಹಾಸನದ ಸಮೀಪ ಕೌಶಿಕದ ಕೈಗಾರಿಕಾ ಪ್ರದೇಶದಲ್ಲಿ ₹810 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣ ಕಾರ್ಯ ನಡೆದಿದೆ. ಇದು ಜನವರಿ ಅಥವಾ ಫೆಬ್ರುವರಿಯಲ್ಲಿ ಕಾರ್ಯಾರಂಭ ಮಾಡಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಉದ್ಘಾಟಿಸಲು ಸಿದ್ಧತೆಗಳು ನಡೆದಿವೆ ಎಂದರು.
ಜಿಲ್ಲಾ ಸಹಕಾರ ಬ್ಯಾಂಕ್ ವಾರ್ಷಿಕ ₹ 2,300 ಕೋಟಿ ವಹಿವಾಟು ನಡೆಸುತ್ತಿದ್ದು, ಉತ್ತಮ ನಿರ್ವಹಣೆಗಾಗಿ ಎ ಗ್ರೇಡ್ ಪಡೆದು ರಾಜ್ಯದಲ್ಲಿ ಎರಡನೆ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಇದಕ್ಕೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮತ್ತು ಶಾಸಕ ಎಚ್.ಡಿ. ರೇವಣ್ಣ ಅವರ ಕೊಡುಗೆ ಮಹತ್ವದ್ದಾಗಿದೆ ಎಂದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಸ್.ಎನ್. ಪ್ರಕಾಶ್ ಮಾತನಾಡಿ, 1905ರಲ್ಲಿ ರಾಜ್ಯದ ಗದಗ ಜಿಲ್ಲೆಯಲ್ಲಿ ಜನ್ಮ ತಾಳಿದ ಸಹಕಾರ ಕ್ಷೇತ್ರ ವಿಶ್ವದಾದ್ಯಂತ ಪಸರಿಸಿದ್ದು, 130 ರಾಷ್ಟ್ರಗಳು ಇದನ್ನು ಅಳವಡಿಸಿಕೊಂಡಿವೆ. ಜಿಲ್ಲೆಯಲ್ಲಿ ಹಾಲು ಒಕ್ಕೂಟ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಸಹಕಾರ ಕ್ಷೇತ್ರದ ಭದ್ರ ಬುನಾದಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಜಿಲ್ಲಾ ಸಹಕಾರ ಒಕ್ಕೂಟವು ಸಹಕಾರಿ ಸದಸ್ಯರಿಗೆ ವಿಷಯಾಧಾರಿತ ಶಿಕ್ಷಣ ನೀಡಿ ಸಜ್ಜುಗೊಳಿಸುವ ಕಾರ್ಯ ನಡೆಸಿದೆ ಎಂದರು.
ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಶಿವಕುಮಾರ್ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಸಿದ್ದಾಪುರ ಗೇಟ್ ಸರ್ಕಾರಿ ಪದವಿ ಫೂರ್ವ ಕಾಲೇಜಿನ ಪ್ರಾಂಶುಪಾಲರಾದ ಟಿ. ಪದ್ಮ ಸಹಕಾರ ಸಪ್ತಾಹದ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ನಿರ್ದೇಶಕ ಮುತ್ತಿಗೆ ರಾಜೇಗೌಡ, ಕಾವೇರಿ ನೀರಾವರಿ ಮಹಾಮಂಡಳದ ಅಧ್ಯಕ್ಷ ಎಸ್.ಸಿ. ಚೌಡೇಗೌಡ ಮಾತನಾಡಿದರು.
ತಾಲ್ಲೂಕಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಹಿರಿಯ ಸಹಕಾರಿಗಳನ್ನು ಗೌರವಿಸಲಾಯಿತು.
ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಡಿ.ಪಿ. ಸೋಮೇಗೌಡ, ನಿರ್ದೇಶಕರಾದ ಎ.ಎನ್ ರಾಜಣ್ಣ, ಪುಟ್ಟಸ್ವಾಮಿಗೌಡ, ನಾಗರಾಜ್, ಕೆ.ಆರ್. ಪ್ರವೀಣ್, ಸೋಮಣ್ಣ, ಜಿ.ಎಚ್.ಸಿದ್ದೇಶ್, ಎಚ್.ಸಿ.ಗಿರೀಶ್, ಕೆ.ಎನ್ ಪದ್ಮರಾಜ್, ಎಚ್. ಜೆ.ಗಣೇಶ್, ಸಹಕಾರಿ ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್, ಲೆಕ್ಕ ಪರಿಶೋಧನಾ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾಶ್ರೀ, ಜಿಲ್ಲಾ ಸಹಕಾರ ಬ್ಯಾಂಕ್ ಮೇಲ್ವಿಚಾರಕ ಎಂ.ಎಸ್. ಬಸವರಾಜ್, ಹಾಲು ಉತ್ಪಾಧಕ ಸಹಕಾರ ಸಂಘಗಳ ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಎಸ್.ಪಿ.ಗಂಗಾಧರ್, ವೇಣುಗೋಪಾಲ್, ಎಚ್.ಆರ್. ಮೋಹನ್, ಟಿ.ಎ.ಅಶ್ವಥ್, ವೀಣಾ, ಸಹಕಾರ ಸಂಘದ ಸಿಇಒ ನಟೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.