ಹಾಸನ: ಇಲ್ಲಿನ ಪಾಂಚಜನ್ಯ ಹಿಂದೂ ಗಣಪತಿ ಸಮಿತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ಬುಧವಾರ ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಪೂಜಿಸಿ ಗಣೇಶ ಪ್ರತಿಷ್ಠಾಪನೆ ಮಾಡಲಾಯಿತು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಪಾಂಚಜನ್ಯ ಗಣಪತಿ ಸಮಿತಿ ನೇತೃತ್ವದಲ್ಲಿ ಎಲ್ಲ ಸ್ವಯಂ ಸೇವಕರು ಸೇರಿ ವಿಘ್ನೇಶ್ವರನ ಪ್ರತಿಷ್ಠಾಪನೆ ಮಾಡಿದ್ದು, ಜಿಲ್ಲೆ ಮತ್ತು ರಾಜ್ಯದ ಜನತೆಗೆ ಆರೋಗ್ಯ, ಆಯಸ್ಸು, ಐಶ್ವರ್ಯ, ಶಾಂತಿ, ನೆಮ್ಮದಿ ನೀಡಿ ದೇವರು ಕಾಪಾಡಲಿ. ಉತ್ತಮ ಮಳೆ, ಬೆಳೆ ಆಗಿ ರೈತರಲ್ಲಿ ಸಂತೋಷ ಉಂಟು ಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ರಾಜ್ಯದ ಜನರು ಮೆಚ್ಚುವಂತಹ ಗಣೇಶ ಪ್ರತಿಷ್ಠಾಪನೆಯನ್ನು ಹಾಸನ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರಲಾಗಿದೆ. ನಾಡಿನಲ್ಲಿ ಉತ್ತಮ ಮಳೆ, ಬೆಳೆ ಸಿಗಲಿ. ಸಮಾಜದಲ್ಲಿ ಸೌಹಾರ್ದ ಇನ್ನಷ್ಟು ಹೆಚ್ಚಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ಗೌರವಾಧ್ಯಕ್ಷ, ನಗರ ಪಾಲಿಕೆ ಸದಸ್ಯ ದಯಾನಂದ್ ಮಾತನಾಡಿ, ಸೆ. 3ರ ವರೆಗೂ ಗಣಪತಿ ಇಡಲಾಗಿದ್ದು, ನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಸೆ.3 ರಂದು ಮಧ್ಯಾಹ್ನ 2 ಗಂಟೆಗೆ ಬೃಹತ್ ಶೋಭಯಾತ್ರೆ ಆರಂಭಗೊಂಡು ನಗರದಾದ್ಯಂತ ಪ್ರಮುಖ ಬೀದಿಗಳಲ್ಲಿ ಸಾಗಲಿದೆ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ಅಧ್ಯಕ್ಷ ವಾಸು, ಕಾರ್ಯದರ್ಶಿ ವೇಣುಗೋಪಾಲ್, ವಿಜಯ್ ಕುಮಾರ್ ನಾರ್ವೆ, ಹಿಂದೂ ಜಾಗರಣ ವೇದಿಕೆಯ ಲೋಕೇಶ್, ವಿಶ್ವಹಿಂದೂ ಪರಿಷತ್ ವಿಭಾಗೀಯ ಕಾರ್ಯದರ್ಶಿ ಮಹಿಪಾಲ್, ಕಂಚಮಾರನಹಳ್ಳಿ ಕಾಂತಣ್ಣ, ಸಮಿತಿಯ ಮೋಹನ್, ಮಹೇಶ್, ಲಾವಣ್ಯ, ಶ್ವೇತಾ, ಅನಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪೆಂಡಾಲ್ ಗಣಪತಿ ಪ್ರತಿಷ್ಠಾಪನೆ
ಹಾಸನ: ನಗರದ 71ನೇ ವರ್ಷದ ಪೆಂಡಾಲ್ ಗಣಪತಿ ಪ್ರತಿಷ್ಠಾಪನಾ ಮಹೋತ್ಸವವು ಗಣ್ಯರ ಮತ್ತು ಭಕ್ತರ ಸಮ್ಮುಖದಲ್ಲಿ ಬುಧವಾರ ಮಧ್ಯಾಹ್ನ ನಡೆಯಿತು.
ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ನಾಡಿನ ಹಾಗೂ ಹಾಸನದ ಜನತೆಗೆ ಆರೋಗ್ಯ, ಆಯುಷ್ಯ ನೀಡಿ ಕಾಪಾಡಲಿ. ಮಳೆ, ಬೆಳೆ, ಸುಖ, ಶಾಂತಿ ಕೊಡಲೆಂದು ಗಣೇಶನಲ್ಲಿ ಪ್ರಾರ್ಥಿಸಲಾಗಿದೆ ಎಂದರು.
ಇತಿಹಾಸವಿರುವ ಪೆಂಡಾಲ್ ಗಣಪತಿ ಸೇವಾ ಸಮಿತಿಯ 71ನೇ ವರ್ಷದ ಗಣೇಶ ಪ್ರತಿಷ್ಠಾಪನೆ ನೆರವೇರಿದೆ. 24 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಾರ್ವಜನಿಕರು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಗಣಪತಿ ಸೇವಾ ಸಮಿತಿ ಅಧ್ಯಕ್ಷ ಡಾ.ಎಚ್. ನಾಗರಾಜು ಮಾತನಾಡಿ, ಸೆ. 19ರವರೆಗೆ ಗಣೇಶ ಮೂರ್ತಿ ಇಡಲಾಗುತ್ತದೆ. ಈ ವರ್ಷ 10 ಅಡಿಯ ಮೂಷಿಕನ ಮೇಲೆ ಕುಳಿತಿರುವ ಮಹಾಗಣಪತಿಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದರು.
ಕೊನೆಯ ದಿವಸ ಬೆಳಿಗ್ಗೆ 10 ಗಂಟೆಗೆ ಮಹಾಗಣಪತಿಯ ಮತ್ತು ಸ್ವರ್ಣಗೌರಿಯವರ ಉತ್ಸವವು ಪ್ರಾರಂಭವಾಗಲಿದ್ದು, ಸಾಂಸ್ಕೃತಿಕ, ಜಾನಪದ ಕಲಾತಂಡಗಳೊಂದಿಗೆ ರಾಜ ಬೀದಿಗಳಲ್ಲಿ ಸಂಚರಿಸಿ ಸಂಜೆ 6.30ಕ್ಕೆ ದೇವಿಗೆರೆ ತಲುಪಲಿದೆ. ರಾತ್ರಿ 8 ಗಂಟೆ ದೇವಿಗೆರೆಯಲ್ಲಿ ತೆಪ್ಪೋತ್ಸವದೊಂದಿಗೆ ವಿಸರ್ಜಿಸಲಾಗುತ್ತದೆ.
ಮೇಯರ್ ಹೇಮಲತಾ, ಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ಚನ್ನವೀರಪ್ಪ, ಎಚ್.ಎಂ. ಸುರೇಶ್, ಲೀಲಾಕುಮಾರ್, ವೈ.ಎಸ್. ಮುರುಘೇದ್ರ, ಎಚ್.ಟಿ. ಶೇಖರ್, ಗಿರೀಶ್ ಚನ್ನವೀರಪ್ಪ, ಎಚ್.ಎಸ್. ಅನಂತನಾರಾಯಣ, ಎನ್.ಎಸ್. ಶಂಕರರಾವ್, ಎಚ್.ಪಿ. ಕಿರಣ್, ಎಂ.ಕೆ. ಕಮಲ್ ಕುಮಾರ್, ಸಿ.ಆರ್.ಶಂಕರ್, ಎಚ್.ಡಿ. ದೀಪಕ್, ಕಸಾಪ ಮಾಜಿ ಅಧ್ಯಕ್ಷ ರವಿ ನಾಕಲಗೂಡು, ನಗರಸಭೆ ಮಾಜಿ ಅಧ್ಯಕ್ಷೆ ನೇತ್ರಾವತಿ ಗಿರೀಶ್, ಕಾಂಗ್ರೆಸ್ ಮುಖಂಡ ಗೌಡಗೆರೆ ಪ್ರಕಾಶ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.