
ಹಾಸನ: ವಿದ್ಯಾರ್ಥಿ ಜೀವನದಲ್ಲಿ ದೃಢವಾದ ನಿರ್ಧಾರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಎಂದು ಪ್ರಗತಿಪರ ಕೃಷಿಕರು ಹಾಗೂ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಎಂ.ಸಿ.ರಂಗಸ್ವಾಮಿ ಸಲಹೆ ನೀಡಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜೀವನದಲ್ಲಿ ಏರುಪೇರು ಇದ್ದೆ ಇರುತ್ತದೆ. ತಾಳ್ಮೆಯಿಂದ ಇದ್ದು ಯಾವುದೇ ಕಷ್ಟದ ಸಂದರ್ಭದಲ್ಲಿ ಕುಗ್ಗದೆ ಮುಂದೆ ಸಾಗಬೇಕು. ಹೆಣ್ಣುಮಕ್ಕಳು ಕೃಷಿಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳಬೇಕು. ರೈತರು ಕೇವಲ ಸಾಂಪ್ರದಾಯಿಕ ಬೆಳೆಗಳಿಗೆ ಸೀಮಿತವಾಗದೆ ತಂತ್ರಜ್ಞಾನವನ್ನು ಬಳಸಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕ ಲಾಭ ಪಡೆಯಲು ಸಾಧ್ಯವಿದೆ. ಯುವ ಪೀಳಿಗೆ ಕೃಷಿಯನ್ನು ನಂಬಿ ವ್ಯವಸಾಯ ಮಾಡಬೇಕು. ಯಾವುದೇ ಕಾರಣಕ್ಕೂ ಭೂಮಿ ಕಳೆದುಕೊಳ್ಳಬೇಡಿ. ಮುಂದಿನ ದಿನಗಳಲ್ಲಿ ಭೂಮಿಗೆ ಚಿನ್ನದಂತಹ ಬೆಲೆ ಇದೆ ಮತ್ತು ಕೃಷಿಕರು, ರೈತರಿಗೆ ಬೇಡಿಕೆ ಹೆಚ್ಚಲಿದೆ’ ಎಂದರು.
ಪ್ರಾಧ್ಯಾಪಕರಾದ ಎಚ್.ಕೆ.ವೆಂಕಟೇಶ್ ಮಾತನಾಡಿ, ಕನ್ನಡ ನಾಡು, ನುಡಿ, ಜಲದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೆ, ವರ್ಷದ ಎಲ್ಲ ದಿನಗಳು ಕನ್ನಡ ಬಳಸಿ, ಉಳಿಸಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಜಿ.ಕವಿತಾ ಮಾತನಾಡಿ, ರಾಜಧಾನಿಯಲ್ಲಿ ಕನ್ನಡಿಗರಿಗಿಂತ ಕನ್ನಡೇತರರ ಸಂಖ್ಯೆ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ನಾವು ಬೇರೆ ಭಾಷಿಕರಿಗೆ ಕನ್ನಡ ಕಲಿಸಬೇಕು ಮತ್ತು ಕನ್ನಡವನ್ನು ನಾವು ಹೆಚ್ಚು ಬಳಸಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ಇರುವವರೆಲ್ಲರೂ ಕನ್ನಡವನ್ನು ನಿತ್ಯ ಬಳಸಿದರೆ ಸಾಕು ಕನ್ನಡ ಮತ್ತಷ್ಟು ಬೆಳೆಯಲಿದೆ. ಬೇರೆ ಭಾಷಿಕರನ್ನು ಅವರ ಭಾಷೆಯಲ್ಲಿ ಮಾತನಾಡಿಸದೆ ಕನ್ನಡ ಭಾಷೆಯಲ್ಲಿಯೇ ಮಾತನಾಡಿಸುವ ಮೂಲಕ ನಮ್ಮ ಮಾತೃ ಭಾಷೆಯನ್ನು ಉಳಿಸಬೇಕು. ವಿದ್ಯಾರ್ಥಿಗಳು ಕನ್ನಡ ಭಾಷೆಯ ಅಲ್ಪಪ್ರಾಣ, ಮಹಾಪ್ರಾಣ, ವ್ಯಾಕರಣ ಕಲಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಯೋಗೇಶ್, ಕಾಲೇಜಿನ ವ್ಯವಸ್ಥಾಪಕ ಹರ್ಷ, ಪ್ರಾಧ್ಯಾಪಕರು ಭಾಗವಹಿಸಿದ್ದರು. ಸಂಸ್ಕೃತಿಕ ವೇದಿಕೆ ಸಂಚಾಲಕ ಪುರುಷೋತ್ತಮ್ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ರತ್ನ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.