ADVERTISEMENT

ಸುವ್ಯವಸ್ಥೆ ನಡುವೆ ಅಲ್ಪ ಅಸಮಾಧಾನ

ಸರದಿಯಲ್ಲಿ ನಿಂತವರಿಗೆ ಪ್ರಸಾದ ವಿತರಿಸಲು ಜನರ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 8:44 IST
Last Updated 18 ಅಕ್ಟೋಬರ್ 2025, 8:44 IST
ಮಧ್ಯಾಹ್ನ ಗರ್ಭಗುಡಿಯ ಬಾಗಿಲು ಹಾಕಿದ ಸಂದರ್ಭದಲ್ಲಿ ಬ್ಯಾರಿಕೇಡ್‌ನಲ್ಲಿ ಕುಳಿತು ವಿಶ್ರಾಂತಿ ಪಡೆದ ಜನರು 
ಮಧ್ಯಾಹ್ನ ಗರ್ಭಗುಡಿಯ ಬಾಗಿಲು ಹಾಕಿದ ಸಂದರ್ಭದಲ್ಲಿ ಬ್ಯಾರಿಕೇಡ್‌ನಲ್ಲಿ ಕುಳಿತು ವಿಶ್ರಾಂತಿ ಪಡೆದ ಜನರು    

ಹಾಸನ: ಹಾಸನನಾಂಬೆಯ ದರ್ಶನಕ್ಕೆ ಬರುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದರ್ಶನದ ಸಮಯವೂ ಹೆಚ್ಚಾಗುತ್ತಿದೆ.
ಗುರುವಾರ ಸಾಮಾನ್ಯ ದರ್ಶನಕ್ಕಾಗಿ ಬೆಳಿಗ್ಗೆ 11 ಗಂಟೆಗೆ ಸರದಿಯಲ್ಲಿ ನಿಂತವರಿಗೆ, ಸಂಜೆ 6.30ಕ್ಕೆ ದರ್ಶನವಾಗಿದೆ. ₹ 300 ಟಿಕೆಟ್ ಪಡೆದು ಮಧ್ಯಾಹ್ನ 1 ಗಂಟೆಗೆ ನಿಂತವರಿಗೆ ಸಂಜೆ 6 ಗಂಟೆಗೆ ದರ್ಶನವಾಗಿದೆ.

‘ವ್ಯವಸ್ಥೆ ಚೆನ್ನಾಗಿದೆ. ಕಳೆದ ವರ್ಷ ದರ್ಶನ ಮಾಡಲು ಸಾಧ್ಯವಾಗದೇ ವಾಪಸ್ ಹೋಗಿದ್ದೆವು. ಈ ಬಾರಿ ದರ್ಶನ ಆಗುವುದು ಖಾತರಿ ಆಗಿದೆ. ನಾವು ಬೆಳಿಗ್ಗೆ 11 ಗಂಟೆಗೆ ಸರದಿಯಲ್ಲಿ ನಿಂತಿದ್ದು, ಈಗ 6 ಗಂಟೆ. ಏನೂ ತಿಂದಿಲ್ಲ. ನಮಗೆ ಇಲ್ಲದಿದ್ದರೂ ಪರವಾಗಿಲ್ಲ. ಹೆಚ್ಚು ಸಮಯ ಸರದಿಯಲ್ಲಿ ನಿಂತಿರುವ ವೃದ್ದರಿಗೆ ಹಾಗೂ ಮಕ್ಕಳಿಗೆ ಸ್ಪಲ್ಪ ಪ್ರಸಾದದ ವ್ಯವಸ್ಥೆ ಮಾಡಿದ್ದರೆ ಚೆನ್ನಾಗಿತ್ತು. ಈಗ ಹೆಚ್ಚು ಜನರಿಗೆ ಸಕ್ಕರೆ ಕಾಯಿಲೆ ಇರುತ್ತಲ್ವಾ’ ಎಂದು ಸರತಿ ಸಾಲಿನಲ್ಲಿ ಬಾಲಕನನ್ನು ಎತ್ತಿಕೊಂಡು ನಿಂತಿದ್ದ ಮಂಡ್ಯ ಜಿಲ್ಲೆಯ ಕಿಕ್ಕೇರಿಯ ಕಾವೇರಮ್ಮ, ಸಣ್ಣ ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು, ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ನೇತೃತ್ವದಲ್ಲಿ ಜಿಲ್ಲೆಯ ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು ಈ ಬಾರಿ ಅತ್ಯುತ್ತಮವಾದ ವ್ಯವಸ್ಥೆ ಮಾಡಿದ್ದಾರೆ. ದೇವಾಲಯದ ಒಳಗಷ್ಟೇ ಅಲ್ಲದೆ ಹೊರಗಡೆ ಕಾರುಗಳ ಪಾರ್ಕಿಂಗ್‌, ಸಂಚಾರ ನಿಯಂತ್ರಣ, ರಸ್ತೆ ಬದಿ ವ್ಯಾಪಾರಿಗಳಿಗೆ ವ್ಯವಸ್ಥೆ, ಅಂಗವಿಕಲರಿಗೆ ನೀಡಿರುವ ಅವಕಾಶ, ಪ್ರಸಾದ, ಲಾಡು ಪ್ರಸಾದ ವಿತರಣೆ ವ್ಯವಸ್ಥೆ ಎಲ್ಲವೂ ಚೆನ್ನಾಗಿದೆ. ಆದರೆ ಪ್ರಸಾದ ಪಡೆದವರು ಅಲ್ಲಲ್ಲೇ ನಿಂತು ತಿನ್ನುತ್ತಿರುವ ಕಾರಣ ಜನರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದೆ. ಪೊಲೀಸರು ಈ ಬಗ್ಗೆ ಗಮನಹರಿಸಬೇಕು ಎಂದು ಹಾಸನದ ಪ್ರದೀಪ್, ಹೊಳೆನರಸೀಪುರದ ಜೈಪ್ರಕಾಶ್ ಸಲಹೆ ನೀಡಿದರು.

ADVERTISEMENT

ಸ್ಕೌಟ್ ಮತ್ತು ಗೈಡ್ಸ್ ಸ್ವಯಂ ಸೇವಕರ ಸೇವೆ ಚೆನ್ನಾಗಿದೆ. ದೇವಿಯ ದರ್ಶನದಿಂದ ಒಳ್ಳೆಯದಾಗುತ್ತದೆ ಎಂದು ನಂಬಿಕೆ ಇದ್ದು, ದೂರದ ಊರುಗಳಿಂದ ಬರುವ ಭಕ್ತರ ಸಂಖ್ಯೆ ಹೆಚ್ಚಾಗಲು ಕಾರಣ ಆಗಿದೆ ಎಂದು ಹುಬ್ಬಳ್ಳಿಯ ರಾಮಯ್ಯ, ಸೋಮಣ್ಣ, ಚಿಂತಾಮಣಿಯ ರಮೇಶ್, ಭರತ್ ಅಭಿಪ್ರಾಯ ವ್ಯಕ್ತಪಡಿಸಿದರು.

7 ಗಂಟೆ ಕಾಲ ಸರದಿಯಲ್ಲಿ ನಿಂತು ಗರ್ಭಗುಡಿಯ ಎದುರು ಹೋದಾಗ ಪೊಲೀಸರು ಒಂದು ಸೆಕೆಂಡ್ ಕೂಡ ದೇವರನ್ನು ನೋಡಲು ಬಿಡದೇ ಎಳೆದು ಹಾಕಿದ್ದು ಬೇಸರ ತರಿಸಿತು.
ರಾಜಮ್ಮ ನಂಜನಗೂಡು

ಚಪ್ಪಲಿ ಕಳೆದುಕೊಂಡವರ ಅಳಲು ‘ನಾವು ಸಾಮಾನ್ಯ ದರ್ಶನದ ಸರದಿಗೆ ನಿಲ್ಲುವ ಮುನ್ನ ನಮ್ಮೆಲ್ಲರ ಚಪ್ಪಲಿಗಳನ್ನು ಇಲ್ಲಿ ಬಿಟ್ಟಿದೆವು. ನಾವು ದರ್ಶನ ಪಡೆದುಕೊಂಡು ಬಂದು ನೋಡಿದರೆ ನಮ್ಮೆಲ್ಲರ ಚಪ್ಪಲಿಗಳ ಜೊತೆಗೆ ಇಲ್ಲಿ ಬಿಟ್ಟದ್ದ ನೂರಾರು ಜನರ ಚಪ್ಪಲಿಗಳನ್ನು ತುಂಬಿ ಎಲ್ಲೋ ಎಸೆದಿದ್ದಾರೆ. ಇಲ್ಲಿ ಚಪ್ಪಲಿ ಬಿಡುವ ಹಾಗಿಲ್ಲ ಎಂದು ಫಲಕ ಹಾಕಿದ್ದರೆ ನಾವು ಬಿಡುತ್ತಿರಲಿಲ್ಲ. ಎಲ್ಲರೂ ಇಲ್ಲಿಯೇ ಬಿಟ್ಟಿದ್ದಾರಲ್ಲಾ ಎಂದು ಬಿಟ್ಟೆವು. ಒಂದೂ ಚಪ್ಪಲಿ ಇಲ್ಲ’ ಎಂದು ಹೊಳೆನರಸೀಪುರ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದ ಆಶಾ ಮಾರನಾಯಕನಹಳ್ಳಿಯ ಸುಚಿತ್ರಾ ಇತರರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.