ADVERTISEMENT

ಹಾಸನಾಂಬ ದರ್ಶನೋತ್ಸವ: ಮಧ್ಯಾಹ್ನದ ನಂತರ ಭಕ್ತರ ಸಂಖ್ಯೆ ಇಳಿಕೆ

ಶನಿವಾರ ರಾತ್ರಿಯಿಂದಲೇ ಸರದಿಯಲ್ಲಿ ನಿಂತಿದ್ದ ಜನರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 7:23 IST
Last Updated 20 ಅಕ್ಟೋಬರ್ 2025, 7:23 IST
<div class="paragraphs"><p>ಹಾಸನಾಂಬೆಯ ಗರ್ಭಗುಡಿಗೆ ಸರದಿಯಲ್ಲಿ ತೆರಳುತ್ತಿರುವ ಭಕ್ತರು</p></div>

ಹಾಸನಾಂಬೆಯ ಗರ್ಭಗುಡಿಗೆ ಸರದಿಯಲ್ಲಿ ತೆರಳುತ್ತಿರುವ ಭಕ್ತರು

   

ಹಾಸನ: ಹಾಸನಾಂಬ ದರ್ಶನೋತ್ಸವದ ಹತ್ತನೇ ದಿನವಾದ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಇತ್ತ ಜೆಡಿಎಸ್ ಪ್ರತಿಭಟನೆ ನಡೆಯುತ್ತಿದ್ದಂತೆ ಮಧ್ಯಾಹ್ನದ ನಂತರ ಧರ್ಮದರ್ಶನ ಸೇರಿದಂತೆ, ಟಿಕೆಟ್ ಸಾಲಿನಲ್ಲಿ ಜನರ ಸಂಖ್ಯೆ ಕಡಿಮೆಯಾಗಿತ್ತು.

ಬಹುತೇಕ ಬೇರೆ ಊರುಗಳಿಂದ ಬಂದಿದ್ದ ಜನರು, ಶನಿವಾರ ರಾತ್ರಿಯಿಂದಲೇ ಸರದಿಯಲ್ಲಿ ನಿಂತಿದ್ದರು. ಶನಿವಾರ ರಾತ್ರಿ 12 ಗಂಟೆಗೆ ದರ್ಶನ ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಬೆಳಿಗ್ಗೆ 6 ಗಂಟೆಗೆ ದರ್ಶನ ಆರಂಭವಾಯಿತು.

ADVERTISEMENT

ಭಾನುವಾರ ಮಧ್ಯಾಹ್ನ 2ರಿಂದ 3.30ರವರೆಗೆ ನೈವೇದ್ಯಕ್ಕಾಗಿ ಗರ್ಭಗುಡಿಯ ಬಾಗಿಲು ಹಾಕಿದ್ದು, ಮಧ್ಯಾಹ್ನ 3.30 ರಿಂದ 8 ಗಂಟೆವರೆಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಯಿತು. ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಶನಿವಾರ ಸಂಜೆಯಿಂದ ಎಡಬಿಡದೇ ಮಳೆ ಸುರಿದಿದ್ದು, ಭಾನುವಾರ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಹಾಗೂ ಜಿಟಿಜಿಟಿ ಮಳೆಯಿಂದಾಗಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿಯೂ ಗಣನೀಯವಾಗಿ ಇಳಿಕೆಯಾಗಿತ್ತು.

ದೇವಾಲಯದಲ್ಲಿ ಮೊಕ್ಕಾ ಹೂಡಿದ್ದ ಕೃಷ್ಣ ಬೈರೇಗೌಡ: ಶನಿವಾರ ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೂ ಹಾಸನಾಂಬ ದೇವಾಲಯದಲ್ಲೇ ಮೊಕ್ಕಾಂ ಹೂಡಿದ್ದ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು, ಭಾನುವಾರ ಬೆಳಿಗ್ಗೆಯೂ ದೇವಾಲಯಕ್ಕೆ ಬಂದು, ಪರಿಶೀಲನೆ ನಡೆಸಿದರು. ಪ್ರತಿಯೊಂದು ಸರತಿ ಸಾಲನ್ನು ಗಮನಿಸಿ, ಜನರ ಸಮಸ್ಯೆ ಆಲಿಸಿದರು. ನಂತರ ದರ್ಶನ ಪಡೆದ ಜನರಿಂದ ವ್ಯವಸ್ಥೆಯ ಕುರಿತು ಮಾಹಿತಿ ಪಡೆದರು.

ಹಲವು ಗಣ್ಯರಿಂದ ದರ್ಶನ: ಭಾನುವಾರ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್, ಮಾಜಿ ಸಚಿವೆ ಉಮಾಶ್ರೀ, ಎಚ್.ಡಿ. ದೇವೇಗೌಡರ ಪುತ್ರಿ ಅನುಸೂಯ, ಚಿತ್ರನಟ ಶಿವರಾಜ್ ಕುಮಾರ್, ಪತ್ನಿ ಗೀತಾ, ಮದ್ದೂರು ಶಾಸಕ ಉದಯ್ ಗೌಡ, ಚಿತ್ರನಟ ರಿಷಬ್ ಶೆಟ್ಟಿ ಸೇರಿದಂತೆ ಇತರೆ ಗಣ್ಯರು ಹಾಸನಾಂಬ ದರ್ಶನ ಪಡೆದರು.

ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಅವರೊಂದಿಗೆ ಶಾಸಕ ಸ್ವರೂಪ್ ಪ್ರಕಾಶ್ ಅವರ ಮನೆಗೆ ಭೇಟಿ ನೀಡಿದರು. ಬಳಿಕ ದೇವಾಲಯಕ್ಕೆ ಬಂದು ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು. ಇದೇ ವೇಳೆ ದೇವಾಸ್ಥಾನದ ಆವರಣಕ್ಕೆ ಬಂದ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು, ಶಿವರಾಜ್ ಕುಮಾರ್ ಅವರನ್ನು ಮಾತನಾಡಿಸಿದರು.

ಮದ್ದೂರು ಶಾಸಕ ಉದಯ್‌ಗೌಡ ಪತ್ನಿಯೊಂದಿಗೆ ಬಂದಿದ್ದರು. ದರ್ಶನದ ಬಳಿಕ ಮಾತನಾಡಿದ ಅವರು, ‘ಇಂದು ದೇವಿಯ ದರ್ಶನ ಪಡೆದಿದ್ದೇನೆ. ಜಾತ್ರಾ ಮಹೋತ್ಸವದ ಜೊತೆಗೆ ವರುಣನ ಕೃಪೆಯು ಆಗುತ್ತಿದೆ. ದರ್ಶನೋತ್ಸವಕ್ಕೆ ಜಿಲ್ಲಾಡಳಿತ ಅಧಿಕಾರಿಗಳು ಉತ್ತಮ ವ್ಯವಸ್ಥೆ ಮಾಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದರು.

ಚಿತ್ರ ನಟ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ, ಮಗಳು ಪ್ರವತಿ ಹಾಗೂ ಸ್ನೇಹಿತರ ಜೊತೆ ಬಂದು ದೇವಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರ ಅಂಗರಕ್ಷಕನನ್ನು ದೇವಾಲಯದ ಬಳಿಯೇ ತಡೆದು ನಿಲ್ಲಿಸಲಾಯಿತು.

ಹಾಸನಾಂಬ ದೇಗುಲದ ಆವರಣದಲ್ಲಿ ಸಿದ್ಧೇಶ್ವರ ಸ್ವಾಮಿ ವೀರಭದ್ರ ಸ್ವಾಮಿ ಉತ್ಸವ ನಡೆಯಿತು
ಭಾನುವಾರ ಬೆಳಿಗ್ಗೆ ಸರದಿ ಸಾಲಿನಲ್ಲಿ ಸಾಗಿದ ಭಕ್ತಸಮೂಹ

‘ಪ್ರಾರ್ಥನೆ ನಮ್ಮ ಮತ್ತು ದೇವರ ಮಧ್ಯೆ ಇರಬೇಕು’

ಪ್ರತಿಯೊಬ್ಬ ಮನುಷ್ಯನಿಗೂ ಪ್ರಾರ್ಥನೆ ಇದ್ದೇ ಇರುತ್ತದೆ. ಪ್ರಾರ್ಥನೆಯನ್ನು ದೇವರಲ್ಲಿ ಮಾಡಿಯೇ ಮಾಡುತ್ತಾರೆ. ಆ ಪ್ರಾರ್ಥನೆ ನಮ್ಮ ಮತ್ತು ದೇವರ ಮಧ್ಯೆ ಇರಬೇಕು ಅಷ್ಟೇ. ಅದನ್ನು ಯಾರಿಗೂ ಹೇಳಬಾರದು ಎಂದು ನಟ ರಿಷಭ್‌ ಶೆಟ್ಟಿ ಹೇಳಿದರು.

ಅಧ್ಯಾತ್ಮ ದೈವತ್ವ ದೇವರ ಬಗ್ಗೆ ಸಿನಿಮಾ ಮಾಡುತ್ತೇವೆ ಎಂದರೇ ಒಂದು ನಂಬಿಕೆ ಇಟ್ಟುಕೊಂಡೇ ಮಾಡುತ್ತೇವೆ. ನಂಬಿಕೆ ಇದ್ದರೇ ಮಾತ್ರ ಅದು ಸಾಧ್ಯ. ಆಗ ಅದು ಸರಿಯಾದ ರೀತಿಯಲ್ಲಿ ಬರುತ್ತದೆ ಎಂದು ತಿಳಿಸಿದರು. ನಾನಷ್ಟೆ ಅಲ್ಲ ನಮ್ಮ ತಂಡ ಮತ್ತು ಕುಟುಂಬ ನಿರ್ಮಾಪಕರು ಸೇರಿದಂತೆ ಪ್ರತಿಯೊಬ್ಬರೂ ನಂಬಿ ಸಿನಿಮಾ ಮಾಡಿದ್ದೇವೆ. ಜನರ ಆಶೀರ್ವಾದ ಮತ್ತು ದೈವ ಆಶೀರ್ವಾದದಿಂದ ಇಷ್ಟೊಂದು ದೊಡ್ಡ ಮಟ್ಟದಲ್ಲಿ ತಲುಪಿದೆ. ಚಿತ್ರದ ಯಶಸ್ಸಿನ ನಂತರ ಜನರ ಬಳಿಯೂ ಹೋಗುತ್ತಿದ್ದು ದೇವಸ್ಥಾನದ ಬಳಿಯೂ ಬರುತ್ತಿದ್ದೇನೆ ಎಂದರು.

ಮುಂದಿನ ಸಿನಿಮಾ ಬಗ್ಗೆ ಈಗಾಗಲೇ ಹೇಳಲಾಗಿದೆ. ನಿರ್ಮಾಪಕರು ಪ್ರಚಾರ ಮಾಡುತ್ತಾರೆ. ಆಗ ಗೊತ್ತಾಗುತ್ತದೆ ಎಂದಷ್ಟೇ ಹೇಳಿದರು. ನಿಮ್ಮ ಚಿತ್ರಗಳೆಲ್ಲ ಆಧ್ಯಾತ್ಮಿಕವಾಗಿ ಇರುತ್ತದೆಯೇ ಎಂದು ಪ್ರಶ್ನೆಗೆ ಉತ್ತರಿಸಿದ ಅವರು ನಾಯಕ ನಟ ಮೊದಲು ಇರಲಿಲ್ಲ. ಈಗ ಕಾಂತಾರ ಚಿತ್ರವಷ್ಟೇ ಆಧ್ಯಾತ್ಮಿಕವಾಗಿದೆ. ಸಿನಿಮಾ ಎಂದ ಮೇಲೆ ಬೇರೆ ಬೇರೆ ರೀತಿ ನಿರ್ಮಿಸುವುದು ಇದ್ದೇ ಇರುತ್ತದೆ ಎಂದರು.

ಹಾಸನ ಎಂದರೇ ಒಂದು ವಿಶೇಷ. ನಮ್ಮ ಇಡೀ ತಂಡಕ್ಕೆ ಬಹಳ ಯಶಸ್ಸು ಸಿಕ್ಕಿದೆ. ಕಿರಿಕ್ ಪಾರ್ಟಿ ಸಿನಿಮಾ ಹಾಸನದಲ್ಲಿ ಚಿತ್ರೀಕರಣ ಮಾಡಿದ್ದು ಇಲ್ಲಿ ಹೆಚ್ಚಿನ ಸ್ನೇಹಿತರು ಹಿರಿಯರು ಅಧಿಕಾರಿಗಳು ನಮಗೆ ಸಹಕಾರ ಮಾಡಿದ್ದಾರೆ. ಇಷ್ಟು ಅದ್ಭುತವಾಗಿ ದರ್ಶನ ಮಾಡಿಕೊಂಡು ಬರುವುದಕ್ಕೆ ದೇವಸ್ಥಾನದವರು ಸೇರಿ ಎಲ್ಲರೂ ಅವಕಾಶ ಮಾಡಿಕೊಟ್ಟಿದ್ದಾರೆ. ಅದಕ್ಕೆ ಅಭಿನಂದನೆ ಹೇಳುತ್ತೇನೆ. ಕುಟುಂಬ ಸಮೇತ ಹಾಸನಾಂಬೆ ದೇವಿ ದರ್ಶನ ಸಿಕ್ಕಿರುವುದು ಬಹಳ ಖಷಿಯಾಗಿದೆ ಎಂದು ಹೇಳಿದರು.

ಭಾನುವಾರ ರಾತ್ರಿ 8 ಗಂಟೆಗೆ ದೇವಾಲಯದ ಗೇಟ್‌ ಮುಚ್ಚಲಾಗಿದ್ದು ಮಧ್ಯರಾತ್ರಿ 12 ಗಂಟೆವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸೋಮವಾರ ಬೆಳಿಗ್ಗೆ 5 ಗಂಟೆಗೆ ದರ್ಶನ ಮತ್ತೆ ಆರಂಭವಾಗಲಿದೆ.
–ಕೃಷ್ಣ ಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.