ಹಾಸನ: ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನದ ಏಳನೇ ದಿನವಾದ ಗುರುವಾರ ಧರ್ಮದರ್ಶನ ಸೇರಿದಂತೆ ಬಹುತೇಕ ಎಲ್ಲ ಸರದಿ ಸಾಲುಗಳು ತುಂಬಿ ತುಳುಕುತ್ತಿದ್ದವು. ಏಳು ದಿನದಲ್ಲಿ ಗುರುವಾರ ಬೆಳಿಗ್ಗೆಯವರೆಗೆ 11.30 ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದಿದ್ದಾರೆ.
ಗುರುವಾರವೂ ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದರು. ಬುಧವಾರ ಮಧ್ಯಾಹ್ನ 3.30 ರಿಂದ ನಿರಂತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಗುರುವಾರ ಮಧ್ಯಾಹ್ನ 2 ರಿಂದ 3.30 ರವರೆಗೆ ನೈವೇದ್ಯಕ್ಕಾಗಿ ಗರ್ಭಗುಡಿ ಬಾಗಿಲು ಬಂದ್ ಮಾಡಲಾಗಿತ್ತು. ಗುರುವಾರ ಮಧ್ಯಾಹ್ನ 3.30 ರಿಂದ ಶುಕ್ರವಾರ ಬೆಳಗಿನ ಜಾವ 3 ಗಂಟೆಯವರೆಗೂ ನಿರಂತರ ದರ್ಶನ ಇರಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಅಪಾರ ಸಂಖ್ಯೆಯ ಭಕ್ತಾದಿಗಳಿಗೆ ಸುಗಮ ದರ್ಶನ ಕಲ್ಪಿಸಲು ಖುದ್ದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಸರದಿ ಸಾಲಿನ ಬಳಿ ನಿಂತು ಮೈಕ್ ಹಿಡಿದು ಪರಿಸ್ಥಿತಿ ನಿಯಂತ್ರಿಸಿದರು.
‘ದೇವಸ್ಥಾನದ ಬಾಗಿಲು ಬಳಿಯಿಂದ ದೇವರನ್ನು ನೋಡುತ್ತ ಯಾರೂ ನಿಲ್ಲಬೇಡಿ. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಒಬ್ಬೊಬ್ಬರು ನಿಂತರೆ ಎಲ್ಲರಿಗೂ ತೊಂದರೆ ಆಗಲಿದೆ. ಬೇಗ ಬೇಗ ಸಾಗುತ್ತ ದೇವರ ದರ್ಶನ ಪಡೆಯಿರಿ’ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಜನರಲ್ಲಿ ಮನವಿ ಮಾಡಿದರು.
ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಸಿದ್ದೇಶ್ವರ ಸ್ವಾಮಿ ಗುಡಿಯ ಬಾಗಿಲು ಬಂದ್ ಮಾಡಲಾಗಿತ್ತು. ಬಳಿಕ ಭಕ್ತರ ಮನವಿ ಮೇರೆಗೆ ಸಿದ್ದೇಶ್ವರ ಸ್ವಾಮಿ ದೇವಾಲಯದ ಬಾಗಿಲು ತೆರೆಸಿದ ಜಿಲ್ಲಾಧಿಕಾರಿ, ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟರು.
ಶಿಷ್ಟಾಚಾರ ಸಂಕಷ್ಟ: ದೇವರ ದರ್ಶನಕ್ಕೆ ಮತ್ತೆ ಶಿಷ್ಟಾಚಾರ ಸಂಕಷ್ಟ ಎದುರಾಗಿದ್ದು, ಶಿಷ್ಟಾಚಾರದ ವ್ಯವಸ್ಥೆಯಲ್ಲಿ ಬರುವ ಗಣ್ಯರಿಂದಾಗಿ ಧರ್ಮದರ್ಶನ ಹಾಗೂ ಇತರೆ ಸಾಲಿನ ಭಕ್ತರಿಗೆ ಕೆಲಕಾಲ ಅಡ್ಡಿ ಉಂಟಾಯಿತು.
ಗಣ್ಯರು ನೇರವಾಗಿ ಗರ್ಭಗುಡಿ ಪ್ರವೇಶದಿಂದ ಸಾರ್ವಜನಿಕ ದರ್ಶನಕ್ಕೆ ಸ್ವಲ್ಪ ತೊಡಕಾಗಿತ್ತು. ಶಿಷ್ಟಾಚಾರದಡಿ ಬರುವ ಗಣ್ಯರು ನಿಂತಲ್ಲೇ ನಿಲ್ಲುತ್ತಿದ್ದ ಕಾರಣ ಸರದಿ ಸಾಲಿನಲ್ಲಿ ಬರುತ್ತಿದ್ದ ಭಕ್ತರಿಗೆ ದೇವರ ದರ್ಶನಕ್ಕೆ ಅಡ್ಡಿಯಾಯಿತು.
ದರ್ಶನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ ಬರುವ ಗಣ್ಯರ ಸಂಖ್ಯೆಯೂ ದುಪ್ಪಟ್ಟಾಗಿದೆ. ನಿಯಮದ ಪ್ರಕಾರ ಒಬ್ಬರು ಗಣ್ಯರ ಜೊತೆಗೆ ನಾಲ್ವರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಒಂದು ತಂಡದಲ್ಲಿ 10–15 ಮಂದಿ ಬರುತ್ತಿರುವುದು ಕಂಡುಬಂತು. ಕಟ್ಟುನಿಟ್ಟಿನ ನಿಯಮಗಳ ನಡುವೆಯೂ ಶಿಷ್ಟಾಚಾರ ವ್ಯವಸ್ಥೆ ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.
ಸುಗಮ ದರ್ಶನಕ್ಕೆ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ದರ್ಶನೋತ್ಸವ ಪ್ರಾರಂಭವಾದ ದಿನದಿಂದಲೂ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಸಂದೇಶ ನೀಡುತ್ತಿದ್ದಾರೆ. ದರ್ಶನಕ್ಕೆ ತಗಲುವ ಸಮಯ, ಭಕ್ತಾದಿಗಳು ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಜನರಿಗೆ ಸಲಹೆ ನೀಡುತ್ತಿದ್ದಾರೆ.
ಬುಧವಾರ ಸುಮಾರು 2.46 ಲಕ್ಷ ಮಂದಿ ವೇಗವಾಗಿ ಹಾಸನಾಂಬ ದರ್ಶನ ಪಡೆದಿದ್ದರು. ಗುರುವಾರ ಬೆಳಿಗ್ಗೆಯಿಂದಲೇ ಭಾರಿ ಜನದಟ್ಟಣೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಧರ್ಮದರ್ಶನ ಮತ್ತು ವಿಶೇಷ ಟಿಕೆಟ್ ದರ್ಶನದ ಸಾಲುಗಳು ದೇಗುಲದ ಪ್ರದೇಶವನ್ನು ದಾಟಿ ಬೀದಿಗಳಿಗೆ ವಿಸ್ತರಿಸಿವೆ. ಸಾಮಾನ್ಯ ದರ್ಶನಕ್ಕೆ ಗುರುವಾರ ಸುಮಾರು 4–5 ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮುಂದುವರಿಯಲಿದ್ದು, ಜನಸಂದಣಿ ಹೆಚ್ಚಾಗುತ್ತದೆ. ದರ್ಶನದ ಸಮಯವೂ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎರಡು ಪಟ್ಟು ಜನಸಂದಣಿ ಹೆಚ್ಚಾಗಿದೆ. ಕಳೆದ ವರ್ಷ ದರ್ಶನಕ್ಕೆ 10–15 ಗಂಟೆ ಬೇಕಾಗಿತ್ತು. ಈ ಬಾರಿ 4–5 ಗಂಟೆಗೆ ಇಳಿಸಿದ್ದೇವೆ. ಹೀಗಾಗಿ ಭಕ್ತಾದಿಗಳು ಹೆಚ್ಚಿನ ಸಮಯಕ್ಕೆ ಸಿದ್ಧರಾಗಬೇಕು ಎಂದು ಮನವಿ ಮಾಡಿದ್ದಾರೆ.
ಒಂದು ದಿನದಲ್ಲಿ 3 ಲಕ್ಷ ಜನರಿಗೆ ದರ್ಶನ ನೀಡುವುದು ಸವಾಲಿನ ಕೆಲಸ. ಸಾರ್ವಜನಿಕರ ಹಿತದೃಷ್ಟಿಯಿಂದ ಜನರ ಸಹಕಾರ ಅಗತ್ಯವಾಗಿದೆ.ಕೃಷ್ಣ ಬೈರೇಗೌಡ
ಈ ದರ್ಶನ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದ್ದು ಮತ್ತಷ್ಟು ಸುಧಾರಣೆ ಆಗಬೇಕಿದೆ ಜಿಲ್ಲಾಡಳಿತ ಉಸ್ತುವಾರಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಸಿ.ಟಿ. ರವಿ ವಿಧಾನ ಪರಿಷತ್ ಸದಸ್ಯ
ಹಾಸನದ ಹಾಸನಾಂಬ ದೇವಿಯ ದರ್ಶನೋತ್ಸವ ಹಾಗೂ ಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ತನ್ನದೇ ಆದ ಮಹತ್ವವಿದೆ. ಎಲ್ಲ ವರ್ಗದ ಭಕ್ತರು ಬಂದು ದೇವಿಯ ದರ್ಶನ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧೇಶ್ ನಾಗೇಂದ್ರ ಹೇಳಿದರು.
ದೇವಿಯ ದರ್ಶನಕ್ಕಾಗಿ ಒಂದು ವರ್ಷ ಕಾಯಬೇಕಾಗುತ್ತದೆ. ಆ ಕಾಲ ಈಗ ಕೂಡಿ ಬಂದಿದೆ. ಹಾಸನಾಂಬೆಯ ಮಹಿಮೆ ಹಾಗೂ ಪವಾಡವನ್ನು ತಿಳಿದಿರುವ ರಾಜ್ಯ, ಹೊರ ರಾಜ್ಯ, ವಿದೇಶಗಳಿಂದಲೂ ಭಕ್ತರು ಬರುತ್ತಿದ್ದಾರೆ. ಇತ್ತೀಚೆಗೆ ಅಮೆರಿಕದ ದಂಪತಿ ಕೂಡ ದೇವಿಯ ದರ್ಶನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಗಣ್ಯರು, ಸಾಮಾನ್ಯ ಜನರು, ಟಿಕೆಟ್ ದರ್ಶನದ ಸಾಲುಗಳಲ್ಲಿ ಜನರ ಸಂಖ್ಯೆ ಹೆಚ್ಚಾಗಿದೆ. ಆದಾಗ್ಯೂ ಎಲ್ಲರೂ ದೇವಿಯ ದರ್ಶನ ಪಡೆಯುವಂತಾಗಿದೆ. ಈ ಬಾರಿ ಒಳ್ಳೆಯ ಮಳೆ, ಬೆಳೆಯಾಗಲಿ. ರೈತಾಪಿ ಜನರು ನೆಮ್ಮದಿಯಾಗಿ ಬದುಕುವಂತಾಗಲಿ. ಸಮಸ್ತ ಮನುಕುಲಕ್ಕೆ ಸುಖ, ಶಾಂತಿ, ನೆಮ್ಮದಿ ದೊರೆಯಲಿ ಎಂದು ದೇವಿಯನ್ನು ಪ್ರಾರ್ಥಿಸಿದ್ದೇನೆ ಎಂದು ಅವರು ಹೇಳಿದರು.
ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬ ದರ್ಶನೋತ್ಸವ ಆರಂಭವಾಗಿದ್ದು, ಏಳು ದಿನ ಕಳೆದಿವೆ. ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಿಯ ದರ್ಶನ ಪಡೆಯಬೇಕು ಎಂದು ವೀರಶೈವ ಲಿಂಗಾಯತ ಮಹಾಸಭಾ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮನವಿ ಮಾಡಿದ್ದಾರೆ.
ಜಿಲ್ಲಾಡಳಿತದಿಂದ ಈ ಬಾರಿ ಹಲವು ಹೊಸ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಕ್ತರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಹಾಸನಾಂಬೆ ದೇವಿಗೆ ತನ್ನದೇ ಆದ ಮಹತ್ವವಿದ್ದು, ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ವಿಶಿಷ್ಟ ಸಂಪ್ರದಾಯ ಇಲ್ಲಿದೆ. ಹಾಗಾಗಿ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿಯನ್ನು ಕಣ್ತುಂಬಿಕೊಳ್ಳಲು ಜನರು ಅಪಾರ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಎಲ್ಲರಿಗೂ ದರ್ಶನ ಲಭ್ಯವಾಗಲಿದ್ದು, ನಿಶ್ಚಿಂತರಾಗಿ ದೇವಿಯ ದರ್ಶನ ಮಾಡಿ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.