ಹಾಸನ: ‘ನಾನು ರಾಜಕೀಯದಿಂದ ನಿವೃತ್ತಿ ಆಗಲ್ಲ. ಈಗ ವೀಲ್‌ಚೇರ್‌ನಲ್ಲಿ ಬಂದಿದ್ದೇನೆ. ಸಂಸತ್ತಿಗೂ ವೀಲ್‌ಚೇರ್‌ನಲ್ಲಿ ಹೋಗುತ್ತೇನೆ. ನನಗೆ ಶಕ್ತಿ, ಅರ್ಹತೆ ಇದೆ. 65 ವರ್ಷಗಳ ರಾಜಕೀಯ ಜೀವನದಲ್ಲಿ ಹೋರಾಟ ಮಾಡಿದ್ದು, ಮುಂದುವರಿಸುತ್ತೇನೆ’ ಎಂದು ರಾಜ್ಯಸಭೆ ಸದಸ್ಯ ಎಚ್.ಡಿ. ದೇವೇಗೌಡ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಸಂಭವಿಸಿದ ಮೊಸಳೆಹೊಸಳ್ಳಿ ದುರಂತ, ಕಾವೇರಿ, ಕೃಷ್ಣ ನದಿ ನೀರು ಹಂಚಿಕೆ ವಿಚಾರ, ರಸ್ತೆ ಕಾಮಗಾರಿಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದರು.
ಕಾವೇರಿ ವಿಚಾರದಲ್ಲಿ ಪ್ರಧಾನಮಂತ್ರಿಗೆ ಮನವರಿಕೆ ಮಾಡುತ್ತೇನೆ. ಕರ್ನಾಟಕಕ್ಕೆ ಏನು ನಷ್ಟವಾಗಿದೆ ಹೇಳುತ್ತೇನೆ. ಆರು ದಶಕದ ರಾಜಕೀಯ ಅನುಭವದಲ್ಲಿ ಈ ವಿಚಾರದಲ್ಲಿ ಹಲವು ಮಾಹಿತಿ ನನಗೆ ಇದೆ. ಗೋದಾವರಿ ನೀರನ್ನು ಅಂಧ್ರಪ್ರದೇಶ-ತೆಲಂಗಾಣಕ್ಕೆ ಬಿಡುವ ನಿರ್ಣಯದ ವಿರುದ್ಧ ತಮ್ಮ ಧ್ವನಿ ಎತ್ತಿದ್ದೇನೆ. ಸರ್ಕಾರ ಸಲಹೆ ಕೊಟ್ಟರೆ ನಾನು ಸ್ವೀಕರಿಸುತ್ತೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ವಿಶ್ವದ ಮಹಾನಾಯಕರು. ಮಣಿಪುರದಲ್ಲಿ ಶಾಂತಿ ನೆಲೆಸಲು ಅವರು ಪ್ರಯತ್ನಿಸಿದ್ದಾರೆ. ವಿರೋಧ ಪಕ್ಷ ಟೀಕೆ ಮಾಡಿದ್ದರೂ, ನಾನು ಅವರನ್ನು ಗೌರವಿಸುತ್ತೇನೆ ಎಂದರು.
ಚೆನ್ನೈ-ಬೆಂಗಳೂರು ರಸ್ತೆಯ ಬಾಕಿ ಕಾಮಗಾರಿ ತ್ವರಿತ ಪೂರ್ಣಗೊಳಿಸಬೇಕಿದೆ. ಶಿರಾಡಿಘಾಟ್‌ನಲ್ಲಿ 10 ಕಿ.ಮೀ. ಸುರಂಗ ನಿರ್ಮಿಸಬೇಕೆಂದು ಒತ್ತಾಯಿಸಿದ್ದು, ಮೋದಿ, ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿದ್ದೇನೆ. ಹೈದರಾಬಾದ್-ಬೆಂಗಳೂರು ರಸ್ತೆ ಕಾಮಗಾರಿ ಕೂಡ ತ್ವರಿತಗೊಳಿಸುವಂತೆ ಬೇಡಿಕೆ ಇಟ್ಟಿರುವುದಾಗಿ ಹೇಳಿದರು.
ರಾಜ್ಯಸಭಾ ಸದಸ್ಯರ ಅವಧಿ ಇನ್ನೂ 11 ತಿಂಗಳು ಇದೆ. ಅವಧಿ ಮುಗಿದ ಮೇಲೂ ಶಕ್ತಿಮೀರಿ ಹೋರಾಡುತ್ತೇನೆ. ನನ್ನ ಜೀವನದಲ್ಲಿ ಅನೇಕ ನೋವು-ಕಷ್ಟಗಳಿದ್ದರೂ, ಅಭಿವೃದ್ಧಿ ವಿಚಾರದಲ್ಲಿ ಹೋರಾಟ ಬಿಡುವುದಿಲ್ಲ ಎಂದು ತಿಳಿಸಿದರು.
ಮೊಸಳೆಹೊಸಹಳ್ಳಿ ಗಣೇಶ ಮೆರವಣಿಗೆಯ ವೇಳೆ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಜೆಡಿಎಸ್ ಪಕ್ಷದ ವತಿಯಿಂದ ಮೃತರಿಗೆ ತಲಾ ₹1 ಲಕ್ಷ, ತೀವ್ರ ಗಾಯಾಳುಗಳಿಗೆ ₹ 25ಸಾವಿರದಿಂದ ₹15ಸಾವಿರದವರೆಗೆ ಪರಿಹಾರ ನೀಡಲಾಗುವುದು. ಪಕ್ಷದಲ್ಲಿ ಹಣ ಇರಲಿ, ಇಲ್ಲದೇ ಇರಲಿ ಜವಾಬ್ದಾರಿ ಹೊತ್ತುಕೊಂಡಿದ್ದೇನೆ ಎಂದರು.
ಜಿಲ್ಲಾಧಿಕಾರಿಯಿಂದ ಮೃತರ ಮಾಹಿತಿ ಪಡೆದು ಅವರ ಕುಟುಂಬದವರಿಗೆ ಪರಿಹಾರ ಹಣವನ್ನು ಹಸ್ತಾಂತರಿಸಲಾಗುವುದು. ಇಲ್ಲವಾದರೆ ಜಿಲ್ಲಾಧಿಕಾರಿ ಮೂಲಕವೇ ಅರ್ಹರಿಗೆ ಪರಿಹಾರ ಹಣ ತಲುಪಿಸಲಾಗುವುದು ಎಂದರು.
ಶಾಸಕ ಸ್ವರೂಪ್ ಪ್ರಕಾಶ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್, ತಾಲ್ಲೂಕು ಘಟಕದ ಅಧ್ಯಕ್ಷ ದ್ಯಾವೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.