ADVERTISEMENT

ಹಾಸನ | ಮುಗಿಯದ ಹೇಮಾವತಿ ಸಂತ್ರಸ್ತರ ಬವಣೆ: ಜಮೀನು ಕಳೆದುಕೊಂಡವರಿಗೆ ಸಿಗದ ದಾಖಲೆ

ಚಿದಂಬರಪ್ರಸಾದ್
Published 16 ಡಿಸೆಂಬರ್ 2025, 3:26 IST
Last Updated 16 ಡಿಸೆಂಬರ್ 2025, 3:26 IST
<div class="paragraphs"><p><strong>ಚನ್ನರಾಯಪಟ್ಟಣದ ಆಲ್ಫೋನ್ಸ್‌ ನಗರದಲ್ಲಿ ಹೇಮಾವತಿ ಯೋಜನೆ ಸಂತ್ರಸ್ತರು ನಿರ್ಮಿಸಿಕೊಂಡಿರುವ ಮನೆಗಳು.</strong></p></div>

ಚನ್ನರಾಯಪಟ್ಟಣದ ಆಲ್ಫೋನ್ಸ್‌ ನಗರದಲ್ಲಿ ಹೇಮಾವತಿ ಯೋಜನೆ ಸಂತ್ರಸ್ತರು ನಿರ್ಮಿಸಿಕೊಂಡಿರುವ ಮನೆಗಳು.

   

ಹಾಸನ: ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡಿರುವ ಸಂತ್ರಸ್ತರು ಇಂದಿಗೂ ನೆಮ್ಮದಿಯ ಜೀವನ ನಡೆಸುವುದು ಸಾಧ್ಯವಾಗುತ್ತಿಲ್ಲ. ನೆಮ್ಮದಿ ಸಿಗುವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಇದೆಲ್ಲದರ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡರು, ‘ಪರಿಶೀಲನೆಗೆ ಮತ್ತೊಂದು ಸಮಿತಿ ಮಾಡುವುದಾಗಿ’ ಹೇಳಿರುವುದು ಸಮಸ್ಯೆ ಮತ್ತಷ್ಟು ದಿನ ಮುಂದುವರಿಯುವುದು ನಿಶ್ಚಿತವಾಗಿದೆ.

1971ರಲ್ಲಿ ಹೇಮಾವತಿ ಅಣೆಕಟ್ಟು ನಿರ್ಮಿಸಲಾಗಿದ್ದು, ಮುಳುಗಡೆ ಸಂತ್ರಸ್ತರಿಗೆ ವಿತರಿಸಲು ಸರ್ಕಾರವು ಜಿಲ್ಲೆಯ ಆಲೂರು ತಾಲ್ಲೂಕಿನ ಕಸಬಾ ಬ್ಯಾಬ ಅರಣ್ಯ ಪ್ರದೇಶದ 1,500 ಎಕರೆ ಪ್ರದೇಶವನ್ನು 52 ವರ್ಷಗಳ ಹಿಂದೆಯೇ ಮೀಸಲಿಟ್ಟಿದೆ.

ADVERTISEMENT

ಬ್ಯಾಬ ಫಾರೆಸ್ಟ್, ಬ್ಯಾಬ ಫಾರೆಸ್ಟ್ 1ಪಿ, 2ಪಿ, 3ಪಿ ಎಂದು ನಾಲ್ಕು ವಿಭಾಗಗಳನ್ನಾಗಿ ಮಾಡಿದ್ದು, ಸಂತ್ರಸ್ತರಿಗೆ ತಲಾ ನಾಲ್ಕು ಎಕರೆಯಂತೆ ಹಂಚಿಕೆ ಮಾಡಲು 320 ಬ್ಲಾಕ್‌ಗಳನ್ನು ವಿಂಗಡಿಸಲಾಗಿದೆ. ಸಂತ್ರಸ್ತರಲ್ಲಿ ಸಾಗುವಳಿ ಚೀಟಿಗಳು ಮಾತ್ರವಿದ್ದು, ಜಮೀನಿನ ದಾಖಲೆಗಳನ್ನು ಇನ್ನೂ ಸರಿಪಡಿಸಿಲ್ಲ. ಪೋಡಿ ಆಗದೇ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾಗುವಳಿಯ ಚೀಟಿ ಆಧಾರದಲ್ಲಿಯೇ ಹಲವಾರು ಸಂತ್ರಸ್ತರು ತಮ್ಮ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡಿದ್ದು, ಸಾಗುವಳಿ ಮಾಡುತ್ತಿದ್ದಾರೆ. ಅಲ್ಪಸ್ವಲ್ಪ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಆದರೆ, ಇದೆಲ್ಲವೂ ಅಧಿಕೃತವಾಗಿ ನಡೆಯುತ್ತಿಲ್ಲ. ಒಂದು ವೇಳೆ ಸರ್ಕಾರ ಜಮೀನು ವಾಪಸ್‌ ಪಡೆದರೆ, ಸಂತ್ರಸ್ತರು ಕೈ ಬರಿದಾಗಲಿದೆ.

ಸರ್ಕಾರದ ಯಾವುದೇ ಸೌಲಭ್ಯಗಳೂ ಈ ಸಂತ್ರಸ್ತರಿಗೆ ಸಿಗುತ್ತಿಲ್ಲ. ಅವರಿಗೆ ನೀಡಿರುವ ಭೂಮಿಗೆ ಸಂಬಂಧಿಸಿದ ಅಗತ್ಯ ದಾಖಲೆ ಇಲ್ಲದೇ ಇರುವುದರಿಂದ ಬೆಳೆ ಹಾನಿ ಪರಿಹಾರ ಪಡೆಯಲು ಆಗದೇ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರ ಪಿಎಂ ಕಿಸಾನ್‌ ಯೋಜನೆಯಡಿ ₹6 ಸಾವಿರ ಸಹಾಯಧನವೂ ಸಿಗುತ್ತಿಲ್ಲ. ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳ ಮಾರಾಟ ಮಾಡುವುದೂ ಸಾಧ್ಯವಾಗುತ್ತಿಲ್ಲ. ಪಹಣಿಯ ಇಲ್ಲದಿರುವುದರಿಂದ ಈ ಸೌಲಭ್ಯಗಳಿಂದ ರೈತರು ವಂಚಿತರಾಗುತ್ತಿದ್ದಾರೆ.

‘ಬ್ಯಾಬ ನಂ. 1 ಅನ್ನು ಒಟ್ಟುಗೂಡಿಸಿದ್ದೇವೆ. ದಾಖಲೆಗಳು ತಾಳೆ ಆಗುತ್ತಿಲ್ಲ. ಒಂದು ಸಾವಿರ ಎಕರೆ ಜಮೀನು ಇದೆ. 1,500 ಎಕರೆ ಆರ್‌ಟಿಸಿ ಬರುತ್ತಿದೆ. ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು, ಜನಪ್ರತಿನಿಧಿಗಳು ಗ್ರಾಮದಲ್ಲಿ ಒಟ್ಟಾಗಿ ಸೇರಿ ದಾಖಲೆಗಳನ್ನು ಸರಿಪಡಿಸಬೇಕು’ ಎನ್ನುವುದು ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಹೇಳುವ ಮಾತು.

‘ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡ ಜಿಲ್ಲೆಯ ಸುಮಾರು 10 ಸಾವಿರ ರೈತ ಕುಟುಂಬಗಳಿಗೆ ಪರಿಹಾರವಾಗಿ ಜಿಲ್ಲೆಯ ವಿವಿಧೆಡೆ ಹಲವು ದಶಕಗಳ ಹಿಂದೆಯೇ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಲಾಗಿದೆ. ಇದಕ್ಕೆ ಹಣ ಕಟ್ಟಿಸಿಕೊಂಡಿದ್ದು, ಇಲ್ಲಿಯವರೆಗೆ ಬಹುಪಾಲು ಸಂತ್ರಸ್ತ ಕುಟುಂಬಗಳಿಗೆ ಜಮೀನುಗಳನ್ನು ಗುರುತಿಸಿ, ಖಾತೆ, ಪಹಣಿ ಮುಂತಾದ ಹಕ್ಕುಪತ್ರಗಳನ್ನು ನೀಡದೇ ಅನ್ಯಾಯ ಮಾಡಲಾಗುತ್ತಿದೆ’ ಎನ್ನುವ ದೂರು ಸಂತ್ರಸ್ತರದ್ದು.

‘ಜಮೀನಿಗೆ ಪಹಣಿ ಮಾಡದೇ, ಸರ್ಕಾರ ಹಾಗೂ ಬ್ಯಾಂಕ್‌ನಿಂದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂದು ಐದು ನೂರು ಕುಟುಂಬಗಳಿದ್ದವು. ವಿಭಜನೆ ನಂತರ 600 ಕುಟುಂಬಗಳಾಗಿವೆ. ಕೆಲ ಪ್ರಕರಣಗಳು ಹೈಕೋರ್ಟ್‌ವರೆಗೆ ಹೋಗಿವೆ. ಕೂಡಲೇ ಪೋಡಿ ಆಗಬೇಕು’ ಎಂದು ಹೇಮಾವತಿ ಜಲಾಶಯ ಯೋಜನೆ ಸಂತ್ರಸ್ತ ಕೃಷ್ಣೇಗೌಡ ಒತ್ತಾಯಿಸುತ್ತಾರೆ.

ಮಂಜೂರಾತಿಯಲ್ಲೂ ಅಕ್ರಮ

ಹೇಮಾವತಿ ಪುನರ್ವಸತಿ ಯೋಜನೆಯಲ್ಲಿ ಸಂತ್ರಸ್ತರಿಗೆ ಮೀಸಲಿದ್ದ ಜಮೀನನ್ನು ಬೇರೆಯವರಿಗೆ ಅಕ್ರಮ ಭೂ ಮಂಜೂರಾತಿ ಮಾಡಲಾಗಿದೆ.

‘ಹಾಸನ ಜಿಲ್ಲೆಯಲ್ಲಿ 2015 ರಿಂದ 2019 ರವರೆಗೆ ಪತ್ತೆಯಾದ 977 ಪ್ರಕರಣಗಳ ಮಂಜೂರಾತಿ ರದ್ದು ಮಾಡಲಾಗಿದೆ. ಅದರಲ್ಲಿ 135 ಪ್ರಕರಣಗಳ ಮ್ಯುಟೇಶನ್‌ ಕೂಡ ರದ್ದುಗೊಳಿಸಲಾಗಿದೆ. 2005 ರಿಂದ 2015 ರವರೆಗಿನ 288 ಪ್ರಕರಣಗಳಲ್ಲಿ ಸಂಬಂಧಿಸಿದವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

‘ಅಕ್ರಮ ಮಂಜೂರಾತಿ ಮಾಡಿದ ಅಧಿಕಾರಿಗಳ ಪಟ್ಟಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಅವರ ವಿರುದ್ಧ ಕ್ರಮದ ಬಗ್ಗೆ ಸರ್ಕಾರದಿಂದ ಇದುವರೆಗೆ ಯಾವುದೇ ಆದೇಶ ಬಂದಿಲ್ಲ’ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಮತ್ತಷ್ಟು ಅಧ್ಯಯನ ಅಗತ್ಯ

‘ಇದು ನಿನ್ನೆ-ಮೊನ್ನೆ ಸಮಸ್ಯೆ ಅಲ್ಲ. ನೈಜತೆ ಹೊಂದಿರುವ ಹಾಗೂ ಇಲ್ಲದ ಪ್ರಕರಣ ಬೇರ್ಪಡಿಸಬೇಕು. ಇದಕ್ಕೆ ಮತ್ತೊಂದು ಸಮಿತಿ ಮಾಡಬೇಕಿದೆ. ಅರ್ಹರಿಗೆ ನ್ಯಾಯ ಸಿಗಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

‘ಹೇಮಾವತಿ ಮುಳುಗಡೆ ಸಂತ್ರಸ್ತರ ಭೂ ಹಗರಣದ ಹಿಂದೆ ಐಎಎಸ್ ಅಧಿಕಾರಿಗಳ ಸಮಿತಿಯೇ ತನಿಖೆ ಮಾಡಿತ್ತು. 8,600ರ ಪೈಕಿ 1,200 ಪ್ರಕರಣಗಳಲ್ಲಿ ನೈಜತೆ ಇಲ್ಲ. 7 ಗುಂಟೆ ಜಮೀನು ಮುಳುಗಡೆ ಆಗಿದ್ದರೆ, 4 ಎಕರೆ ಪಡೆದಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಐಎಎಸ್‌ ಅಧಿಕಾರಿಗಳ ಸಮಿತಿ ಕೆಲ ಸಲಹೆ ನೀಡಿದೆ. ಅದೆಲ್ಲವನ್ನೂ ಪರಿಶೀಲಿಸಲಾಗುವುದು’ ಎಂದು ಹೇಳಿದ್ದಾರೆ.

‘ನೈಜ ಪ್ರಕರಣಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವರದಿ ಸಿದ್ಧಪಡಿಸಲು ತಿಳಿಸಲಾಗಿದೆ. ಈ ವರದಿ ಬಂದ ಕೂಡಲೇ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಮುಗಿಯದ ಜಂಟಿ ಸಮೀಕ್ಷೆ

ಬಗರಹುಕುಂ, ಹೇಮಾವತಿ ಜಲಾಶಯ ಸಂತ್ರಸ್ತರು ಸೇರಿದಂತೆ ಸರ್ಕಾರ ವಿವಿಧ ಯೋಜನೆಗಳಡಿ ಮಂಜೂರು ಮಾಡಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂಬ ಮಾತು ಅರಣ್ಯ ಅಧಿಕಾರಿಗಳಿಂದ ಕೇಳಿ ಬರುತ್ತಿದೆ. ಆದರೆ, ಇದು ಕಂದಾಯ ಇಲಾಖೆಗೆ ಸೇರಿದ್ದರಿಂದ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ ಎನ್ನುತ್ತಾರೆ ಕಂದಾಯ ಅಧಿಕಾರಿಗಳು.

ಕೆಡಿಪಿ ಸೇರಿದಂತೆ ಹಲವು ಸಭೆಗಳಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು, ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿ ಸರ್ವೆ ಮಾಡಿ, ಜಮೀನು ಗುರುತಿಸುವಂತೆ ಸೂಚನೆ ನೀಡಲಾಗಿದೆ. ಆದರೆ, ಇದುವರೆಗೆ ಸರ್ವೆ ಮಾತ್ರ ಆಗುತ್ತಿಲ್ಲ. ಇದರಿಂದ ನಾವು ತೊಂದರೆ ಅನುಭವಿಸುವಂತಾಗಿದೆ ಎಂದು ಜನರು ದೂರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.