ADVERTISEMENT

ಹಿರಿಯನ ಮುಂದೆ ಎಳೆಯನ ಪೈಪೋಟಿ; ಜೆಡಿಎಸ್‌ಗೆ ದೂರವಾಗದ ಮೈತ್ರಿ ಒಳೇಟಿನ ಭೀತಿ

ಕೆ.ಎಸ್.ಸುನಿಲ್
Published 2 ಮೇ 2019, 15:41 IST
Last Updated 2 ಮೇ 2019, 15:41 IST
ಪ್ರಜ್ವಲ್‌ ರೇವಣ್ಣ
ಪ್ರಜ್ವಲ್‌ ರೇವಣ್ಣ   

ಹಾಸನ: 1998ರ ನಂತರ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕಣದಲ್ಲಿಲ್ಲದ ಪ್ರಥಮ ಲೋಕಸಭಾ ಚುನಾವಣೆ ಇದಾಗಿದೆ.

ತಮ್ಮ ಉತ್ತರಾಧಿಕಾರಿಯಾಗಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್‌ ಅವರನ್ನು ದೊಡ್ಡಗೌಡರು ಕಣಕ್ಕಿಳಿಸಿದ್ದು, ಮೊದಲಿನಿಂದಲೂ ಗೌಡರ ಕುಟುಂಬದ ವಿರೋಧಿಯಾಗಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಎ.ಮಂಜು ಎದುರಾಳಿಯಾಗಿ ನಿಂತಿದ್ದಾರೆ.

ದೇವೇಗೌಡರ ಕುಟುಂಬ ರಾಜಕಾರಣವನ್ನೇ ಚುನಾವಣಾ ವಿಷಯವಾಗಿಸಿಕೊಂಡು, ಟೀಕಾ ಪ್ರಹಾರ ನಡೆಸಿ ಮತಯಾಚಿಸಿದ್ದಾರೆ.

ADVERTISEMENT

ಕುಟುಂಬ ರಾಜಕಾರಣದ ವಿಚಾರವೂ ಹೆಚ್ಚು ಚರ್ಚಿತ ವಿಷಯವಾಗಿದೆ. ಜತೆಗೆ ಜೆಡಿಎಸ್‌ಗೆ ಕಾಂಗ್ರೆಸ್‌ನ ಒಳ ಏಟಿನ ಆತಂಕವೂ ಕಾಡುತ್ತಿದೆ.

ಕೆಲವು ಕಾಂಗ್ರೆಸ್‌ ಮುಖಂಡರು ಮೇಲ್ನೋಟಕ್ಕೆ ಜೆಡಿಎಸ್‌ ಪರ ಪ್ರಚಾರದಲ್ಲಿದ್ದರೂ ಒಳಗೊಳಗೆ ಮಂಜು ಅವರನ್ನು ಬೆಂಬಲಿಸುವ ಕಾರ್ಯತಂತ್ರ ಅನುಸರಿಸುತ್ತಿದ್ದಾರೆ. ಕಾಂಗ್ರೆಸ್‌ನ ಒಳ ಏಟು ಪ್ರಜ್ವಲ್‌ ಓಟಕ್ಕೆ ಧಕ್ಕೆ ಉಂಟು ಮಾಡುವ ಆತಂಕ ದೂರವಾಗಿಲ್ಲ.

ಏಳೆಂಟು ವರ್ಷಗಳಿಂದ ಸಕ್ರಿಯವಾಗಿ ಜೆಡಿಎಸ್‌ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಯುವ ಉತ್ಸಾಹಿ ಪ್ರಜ್ವಲ್‌ಗೆ ಬೆಂಬಲವಾಗಿ ತಾತ ಎಚ್.ಡಿ.ದೇವೇಗೌಡ, ತಂದೆ ಸಚಿವ ಎಚ್.ಡಿ.ರೇವಣ್ಣ, ತಾಯಿ ಭವಾನಿ, ಸಹೋದರ ಡಾ.ಸೂರಜ್‌ ಟೊಂಕ ಕಟ್ಟಿ ನಿಂತಿದ್ದಾರೆ.

ಜೆಡಿಎಸ್‌ ಕಾರ್ಯಕರ್ತರ ಪಡೆ, ಕ್ಷೇತ್ರದ ಮೇಲೆ ಹಿಡಿತ ಹೊಂದಿರುವುದು, ತಂದೆ ರೇವಣ್ಣ ಅವರ ಅಭಿವೃದ್ಧಿ ಕಾರ್ಯ, ಆರು ಕ್ಷೇತ್ರಗಳಲ್ಲಿ ಶಾಸಕರಿರುವುದು ಅವರಿಗೆ ಸಹಕಾರಿ ಆಗಬಹುದು ಎನ್ನುವ ಲೆಕ್ಕಾಚಾರ ನಡೆದಿದೆ.

ಗೌಡರಿಲ್ಲದ ಚುನಾವಣೆ ಜಿದ್ದಾಜಿದ್ದಿಯ ಕಣವಾಗಿದ್ದರೂ, ಅತಿರೇಖದ ಭಾಷಣ, ಆರೋಪ-ಪ್ರತ್ಯಾರೋಪ ಹೊರತು ಪಡಿಸಿದರೆ ಯಾವುದೇ ಅಹಿತಕರ ಅಥವಾ ಸಂಘರ್ಷ ನಡೆಯಲಿಲ್ಲ.

ಆರಂಭದಲ್ಲಿ ಹೈವೋಲ್ಟೇಜ್ ಚುನಾವಣೆ ಎಂದು ಬಿಂಬಿತವಾಗಿದ್ದ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಹಿರಿಯ ಮುಖಂಡರಾದ ಎಸ್.ಎಂ.ಕೃಷ್ಣ, ಆರ್. ಅಶೋಕ್, ಸಿ.ಟಿ.ರವಿ, ಬಿ.ಸೋಮಶೇಖರ್, ನಟಿಯರಾದ ಮಾಳವಿಕಾ, ತಾರಾ ಹೊರತು ಪಡಿಸಿದರೆ, ಬೇರೆ ಯಾರೂ ಜಿಲ್ಲೆಯತ್ತ ಮುಖ ಮಾಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬರುತ್ತಾರೆಂಬ ಎಂಬ ನಿರೀಕ್ಷೆ ಇತ್ತು.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಪೈಕಿ 6 ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಕಡೂರು ಮತ್ತು ಹಾಸನ ಕ್ಷೇತ್ರಗಳಷ್ಟೇ ಶಾಸಕರನ್ನು ಹೊಂದಿರುವ ಬಿಜೆಪಿ ಮೋದಿ ನಾಮಬಲದಲ್ಲಿ ಮತ ಸಳೆಯುತ್ತಿದೆ. ಬಹುತೇಕ ಸ್ಥಳೀಯ ಸಂಸ್ಥೆಗಳು ಜೆಡಿಎಸ್ ಇಲ್ಲವೇ ಕಾಂಗ್ರೆಸ್‌ ತೆಕ್ಕೆಯಲ್ಲಿವೆ.

ಜಿಲ್ಲೆಯಿಂದ ಏಳು ಚುನಾವಣೆ ಎದುರಿಸಿ ನಾಲ್ಕು ಬಾರಿ ಸೋತು, ಮೂರು ಬಾರಿ ಜಯದ ನಗೆ ಬೀರಿರುವ ಮಂಜು ಅವರಿಗೆ, ಯಾವುದೇ ಹುದ್ದೆ ನಿಭಾಯಿಸಿದ ಅನುಭವವಿಲ್ಲದ ಯುವಕ ಪ್ರಜ್ವಲ್‌ ಪೈಪೋಟಿ ಕೊಡುವರೇ ಎನ್ನುವ ಚರ್ಚೆ ಎಲ್ಲೆಡೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.