
ಹೊಳೆನರಸೀಪುರ (ಹಾಸನ ಜಿಲ್ಲೆ): ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಮಂಗಳವಾರ (ಮಾರ್ಚ್ 3) ನಡೆಯಲಿದ್ದು, ರಥಕ್ಕೆ ಬಟ್ಟೆ ಹಾಕುವ ವಿಚಾರವು ಕಾಂಗ್ರೆಸ್–ಜೆಡಿಎಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಇದರಿಂದಾಗಿ ರಥೋತ್ಸವ ನಡೆಸಲು ತಾಲ್ಲೂಕು ಆಡಳಿತಕ್ಕೆ ಸಂಕಷ್ಟ ಎದುರಾಗಿದೆ.
ಈ ಬಾರಿ ಮಂಗಳವಾರ ಗ್ರಹಣ ಇರುವುದರಿಂದ ಹೊಸಬಟ್ಟೆ ಹಾಕುವುದು ಬೇಡ ಎಂದು ಶಾಸಕ ಎಚ್.ಡಿ. ರೇವಣ್ಣ ನೇತೃತ್ವದ ಸಭೆಯಲ್ಲಿ ನಿರ್ಧಾರವಾಗಿತ್ತು.
ಆದರೆ, ಸೋಮವಾರ ರಥಕ್ಕೆ ಕಾಂಗ್ರೆಸ್ ಮುಖಂಡರು ಹೊಸಬಟ್ಟೆ ಹಾಕಲು ಯತ್ನಿಸಿದರು. ಜೆಡಿಎಸ್ ಅದನ್ನು ತಡೆದು, ಹಳೆಯ ಬಟ್ಟೆ ಹಾಕಿದರು. ಮಧ್ಯಪ್ರವೇಶಿಸಿದ ಉಪ ವಿಭಾಗಾಧಿಕಾರಿ ಜಗದೀಶ್ ಗಂಗಣ್ಣವರ, ‘ಜಿಲ್ಲಾಧಿಕಾರಿ ಸೂಚನೆಯಂತೆ ಈ ಬಾರಿ ರಥಕ್ಕೆ ಕೇವಲ ಹೂವಿನ ಅಲಂಕಾರ ಮಾಡಲಾಗುವುದು’ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಭಯ ಬಣಗಳು, ತಮ್ಮ ವಾದಕ್ಕೆ ಅಂಟಿಕೊಂಡಿವೆ. ಇತ್ತ ದೇಗುಲಕ್ಕೆ ಬಂದಿದ್ದ ಶಾಸಕ ಎಚ್.ಡಿ. ರೇವಣ್ಣ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ವಿರುದ್ಧ ಹಕ್ಕುಚ್ಯುತಿ ಮಂಡಿಸುವೆ’ ಎಂದು ಎಚ್ಚರಿಕೆ ನೀಡಿದರು.
ನಂತರ ಸ್ಥಳಕ್ಕೆ ಬಂದ ಸಂಸದ ಶ್ರೇಯಸ್ ಪಟೇಲ್, ‘ಜಿಲ್ಲಾಧಿಕಾರಿ ಸೂಚನೆಯಂತೆ ಹೂವಿನ ಅಲಂಕಾರದಲ್ಲಿ ರಥೋತ್ಸವ ನಡೆಸಬೇಕು’ ಎಂದು ಉಪ ವಿಭಾಗಾಧಿಕಾರಿಗೆ ಸೂಚಿಸಿದರು.
‘ಶಾಸಕರು–ಸಂಸದರು ಒಮ್ಮತದ ತೀರ್ಮಾನಕ್ಕೆ ಬಂದು, ರಥೋತ್ಸವ ನಡೆಸಲು ಅವಕಾಶ ಮಾಡಿಕೊಡಬೇಕು’ ಎಂದು ಉಪವಿಭಾಗಾಧಿಕಾರಿ ಕೋರಿದರು. ಸಂಜೆಯ ವೇಳೆಗೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ರಥಕ್ಕೆ ಹಾಕಿದ್ದ ಹಳೆಯ ಬಟ್ಟೆಗಳನ್ನು ತೆಗೆಯಲಾಗಿದ್ದು, ಹೂವಿನ ಅಲಂಕಾರ ಮಾಡಲಾಯಿತು.
‘ಹೂವಿನ ಅಲಂಕಾರದಲ್ಲೇ ಬಿಗಿ ಭದ್ರತೆಯಲ್ಲಿ ರಥೋತ್ಸವ ನಡೆಯಲಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.