
ಹಳೇಬೀಡು: ಹೊಯ್ಸಳ ಸಾಮ್ರಾಜ್ಯದ ಗತವೈಭವವನ್ನು ನೆನಪು ಮಾಡಿಕೊಳ್ಳುವುದರೊಂದಿಗೆ, ನಾಟ್ಯರಾಣಿಯಾಗಿ ಕಲೆಯನ್ನು ಪೋಷಿಸಿ ಸಾಮ್ರಾಜ್ಯದ ಉನ್ನತಿಗೆ ಶ್ರಮಿಸಿದ ಪ್ರಸಿದ್ಧದ ದೊರೆ ವಿಷ್ಣುವರ್ಧನ ಪಟ್ಟದರಸಿ ಶಾಂತಲೆ ಸ್ಮರಣೆಗಾಗಿ ಶಾಂತಲಾ ಮಹೋತ್ಸವ ಹಾಗೂ ಆಳ್ವಾಸ್ ನುಡಿಸಿರಿ ವೈಭವ ನಡೆಸಲು ಹಳೇಬೀಡು ಸಜ್ಜಾಗುತ್ತಿದೆ.
ಹೊಯ್ಸಳೇಶ್ವರ ಪ್ರವಾಸೋದ್ಯಮ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸ್ಥಳೀಯ ರೈತ ಸಂಘ, ಕನ್ನಡ ಸಾಹಿತ್ಯ ಪರಿಷತ್, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಹಾಗೂ ಮಹೋತ್ಸವ ಸಮಿತಿ ಆಶ್ರಯದಲ್ಲಿ ಶಾಂತಲಾ ಮಹೋತ್ಸವ ನಡೆಸಲು ಸಿದ್ದತೆ ನಡೆಯುತ್ತಿದೆ.
2014ರ ಡಿಸೆಂಬರ್‌ನಲ್ಲಿ ಹಳೇಬೀಡಿನಲ್ಲಿ ಹೊಯ್ಸಳ ಉತ್ಸವ ನಡೆಸಲಿಲ್ಲ ಎಂದು ಜನರು ಬೇಸರಗೊಂಡಿದ್ದರು. 2015ರ ಫೆಬ್ರುವರಿಯಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಸ್ಥಳೀಯ ಸಮಿತಿಯಿಂದ ಶಾಂತಲಾ ಸಂಗೀತ, ನೃತ್ಯೋತ್ಸವ ನಡೆಸಲು ಅವಕಾಶ ದೊರಕಿತ್ತು. ಈಗ ಸರ್ಕಾರ ಹೊಯ್ಸಳ ಉತ್ಸವ ನಡೆಸಲು ಹಿಂದೇಟು ಹಾಕಿದ್ದರಿಂದ ಶಾಂತಲಾ ಮಹೋತ್ಸವ ಹೆಸರಿನಿಂದ ಉತ್ಸವ ನಡೆಸಲು ಸ್ಥಳೀಯರು ಮುಂದಾಗಿದ್ದಾರೆ.
ಡಿ.22 ರಿಂದ 23 ವರೆಗೆ ಎರಡು ದಿನ ಹಳೇಬೀಡಿನಲ್ಲಿ ವೈಭವದ ಉತ್ಸವ ನಡೆಯಲಿದೆ. 22 ರಂದು ಸಂಜೆ 4 ಗಂಟೆಗೆ ಅಂಬೇಡ್ಕರ್ ವೃತ್ತದಿಂದ ಕೆಪಿಎಸ್ ಶಾಲೆ ಆವರಣದವರೆಗೂ ಜನಪದ ಕಲಾ ತಂಡಗಳ ಮೆರವಣಿಗೆ ನಡೆಯುತ್ತದೆ.
ಹೊಯ್ಸಳೇಶ್ವರ ದೇವಾಲಯದ ಪ್ರವೇಶ ದ್ವಾರದ ಬಳಿ ಇರುವ ಕೆಪಿಎಸ್ ಶಾಲೆ ಆವರಣದಲ್ಲಿ ನಿರ್ಮಿಸಲಿರುವ ಬೃಹತ್ ವೇದಿಕೆಯಲ್ಲಿ ಸಂಜೆ 6 ಗಂಟೆಯಿಂದ ವಿವಿಧ ಶಾಲಾ– ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮಿಮಿಕ್ರಿ ಗೋಪಿ ಹಾಸ್ಯದ ಹೊನಲು ಹರಿಸಲಿದ್ದಾರೆ. ಕೃಷಿ ಮೇಳವನ್ನೂ ಆಯೋಜಿಸಲಾಗಿದೆ.
ಡಿ. 23ರಂದು ಸಂಜೆ 4ಗಂಟೆಯಿಂದ 6ರವರೆಗೆ ರೈತ ದಿನಾಚರಣೆ ನಡೆಯುತ್ತದೆ. ನಂತರ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.
ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಎಚ್.ಕೆ.ಸುರೇಶ್ ಉದ್ಘಾಟಿಸಲಿದ್ದು, ಸಮಿತಿ ಅಧ್ಯಕ್ಷ ಕೆ.ಎಸ್.ಲಿಂಗೇಶ್ ಅಧ್ಯಕ್ಷತೆ ವಹಿಸುವರು. ಬಿಜೆಪಿ ಮುಖಂಡ ಕೊರಟಿಕೆರೆ ಪ್ರಕಾಶ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಈ.ಎಚ್.ಲಕ್ಷ್ಮಣ್, ಕಾಂಗ್ರೆಸ್ ಮುಖಂಡರಾದ ಗ್ರಾನೈಟ್ ರಾಜಶೇಖರ್, ವೈ.ಎನ್.ಕೃಷ್ಣಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಸುಮಾ ಪರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಆರ್.ಮಧು ಪಾಲ್ಗೊಳ್ಳಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಮೋಹನ್ ಆಳ್ವ ಅವರನ್ನು ಆಭಿನಂದಿಸಲಾಗುವುದು ಎಂದು ಸಮಿತಿ ಸದಸ್ಯ ಶಿವನಾಗು ಹೇಳಿದರು.
ಶಾಂತಲೆ ಜನರ ಸಮಸ್ಯೆ ಆಲಿಸಿ, ರಾಜನೊಂದಿಗೆ ಚರ್ಚಿಸಿ, ಪರಿಹಾರ ನೀಡುತ್ತಿದ್ದಳು. ಧರ್ಮದ ಬಗ್ಗೆ ಆಸಕ್ತಿ ಹೊಂದಿದ್ದಳು. ಹಳೇಬೀಡಿನ ಬಸ್ತಿಹಳ್ಳಿಯಲ್ಲಿ ಶಾಂತಿನಾಥ ಬಸದಿ ನಿರ್ಮಿಸಿದ್ದಾಳೆ. ಹೊಯ್ಸಳರ ಕಾಲದ ಹಲವು ದೇವಾಲಯಗಳು ನಿರ್ಮಾಣಕ್ಕೆ ಶಾಂತಲೆ ಕಾರಣಕರ್ತಳಾಗಿದ್ದಾಳೆ. ಹೀಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಡಿಗಲ್ಲಿಟ್ಟ ಶಾಂತಲಾ ಸಂಗೀತ ನೃತ್ಯೋತ್ಸವದಂತೆ ಶಾಂತಲಾ ಮಹೋತ್ಸವ ಮುಂದುವರಿಸುವುದು ಅರ್ಥಪೂರ್ಣ ಕೆಲಸ ಎನ್ನುತ್ತಾರೆ ಚಿಕ್ಕಮಗಳೂರು ಐಡಿಎಸ್‌ಜಿ ಕಾಲೇಜಿನ ಇತಿಹಾಸ, ಪ್ರಾಕ್ತನ ಶಾಸ್ತ್ರ ಪ್ರಾಧ್ಯಾಪಕ ಎಚ್.ಎಂ.ಬಸವರಾಜು.
ಪ್ರತಿವರ್ಷ ದಸರಾ ಬಂದರೆ ಮೈಸೂರು ಮೈಕೊಡವಿ ಮೇಲೇಳುತ್ತದೆ. ಸ್ಥಳೀಯರು ಮಾತ್ರವಲ್ಲದೇ ವಿದೇಶಿ ಪ್ರವಾಸಿಗರು ಮೈಸೂರಿನತ್ತ ಹೆಜ್ಜೆ ಹಾಕುತ್ತಾರೆ. ವ್ಯಾಪಾರ ವ್ಯವಹಾರ ಗರಿಗೆದರುತ್ತವೆ. ಆಗಿನ ದೋರಸಮುದ್ರ (ದ್ವಾರಸಮುದ್ರ) ಇಂದಿನ ಹಳೇಬೀಡು ಹೆಚ್ಚು ವರ್ಷ ಹೊಯ್ಸಳರ ರಾಜಧಾನಿಯಾಗಿತ್ತು. ಹಳೇಬೀಡು ಹಾಗೂ ಸುತ್ತ ಲೆಕ್ಕವಿಲ್ಲದಷ್ಟು ಹೊಯ್ಸಳರ ಸ್ಮಾರಕಗಳಿವೆ. ಸರ್ಕಾರ ಹಳೇಬೀಡಿನಲ್ಲಿಯೂ ಒಂದು ನಿರ್ಷಿಷ್ಟ ಉತ್ಸವ ನಡೆಸಬೇಕು ಎನ್ನುತ್ತಾರೆ ಪ್ರವಾಸೋದ್ಯಮ ಆಸಕ್ತರು.
2015 ರ ಫೆಬ್ರುವರಿ 14 15 ರಂದು ಹಳೇಬೀಡಿನ ಪುಷ್ಪಗಿರಿಯಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯವರು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಗೌರವ ಅಧ್ಯಕ್ಷತೆ ಕೆ.ಎಸ್. ಲಿಂಗೇಶ್ ಅಧ್ಯಕ್ಷತೆಯ ಸ್ಥಳೀಯ ಸಮಿತಿ ರಚನೆ ಮಾಡಿ ಶಾಂತಲಾ ಸಂಗೀತ ನೃತ್ಯೋತ್ಸವ ನಡೆಸಿದ್ದರು. ಅಂದು ಅಕಾಡೆಮಿಯ ಸದಸ್ಯರಾಗಿದ್ದ ಗಾಯಕ ಸಿ.ಅಶ್ವತ್ಥ್ ಅವರ ಮಾನಸ ಪುತ್ರ ಕಿಕ್ಕೇರಿ ಕೃಷ್ಣಮೂರ್ತಿ ಆಸಕ್ತಿ ವಹಿಸಿ ಹಳೇಬೀಡಿಗೆ ಉತ್ಸವ ಮಂಜೂರು ಮಾಡಿಸಿದ್ದರು. ಕೃಷ್ಣಮೂರ್ತಿ ಸಹ ಕಲಾವಿದರೊಂದಿಗೆ ಹಾಡಿ ಸಭಿಕರ ಮನತಣಿಸಿದ್ದರು. ಪ್ರವೀಣ್ ಗೋಡಖಿಂಡಿ ಸಹೋದರರ ಕೊಳಲು ತಬಲಾ ಜುಗಲ್ ಬಂದಿ ಸಂಗಿತಾಸಕ್ತರ ಮನ ತಣಿಸಿತ್ತು. ಸಾಂಸ್ಕೃತಿಕ ಕಲೆಯ ಆಸಕ್ತಿ ಮೂಡಿಸಿದ ಕಿಕ್ಕೇರಿ ಕೃಷ್ಣಮೂರ್ತಿ ಅವರನ್ನು ಮರೆಯುವಂತಿಲ್ಲ ಎನ್ನುತ್ತಾರೆ ಕುಂಚ ಕಲಾವಿದ ಶಾಂತರಾಜು.
ಸರ್ಕಾರ ಹೊಯ್ಸಳ ಉತ್ಸವ ಮರೆತಿರುವುದರಿಂದ ಶಾಂತಲಾ ಮಹೋತ್ಸವ ನಡೆಸುತ್ತಿದ್ದೇವೆ. 2014ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಆಶ್ರಯದಲ್ಲಿ ಶಾಂತಲಾ ಸಂಗೀತ ನೃತ್ಯೋತ್ಸವ ನಡೆಸಿದ್ದೆವು–ಕೆ.ಎಸ್.ಲಿಂಗೇಶ್, ಉತ್ಸವ ಸಮಿತಿ ಅಧ್ಯಕ್ಷ
ಸರ್ಕಾರ ಇಲ್ಲವೇ ಸಂಘ– ಸಂಸ್ಥೆ ಹಳೇಬೀಡಿನಲ್ಲಿ ಉತ್ಸವ ನಡೆಸಿದರೆ ಪ್ರವಾಸಿಗರನ್ನು ಸೆಳೆಯುವಂತಿರಬೇಕು. ವರ್ಷಕ್ಕೊಮ್ಮೆ ಉತ್ಸವ ನಡೆದಾಗ ಹಳೇಬೀಡು ಅಭಿವೃದ್ದಿಯತ್ತ ಸಾಗಲಿದೆ–ಪ್ರೇಂಕುಮಾರ್ ಎಚ್.ಆರ್, ಪ್ರವಾಸಿ ಗೈಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.