ADVERTISEMENT

ಪರಿಷತ್‌ ಚುನಾವಣೆ: ಡಾ.ಸೂರಜ್‌ ರೇವಣ್ಣ ನಾಮಪತ್ರ ಸಲ್ಲಿಕೆ

ಪಟಾಕಿ ಸಿಡಿಸಿ, ಅಭ್ಯರ್ಥಿಗೆ ಸಿಹಿ ತಿನ್ನಿಸಿ ಸ್ವಾಗತಿಸಿದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 15:24 IST
Last Updated 19 ನವೆಂಬರ್ 2021, 15:24 IST
ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದ ಜೆಡಿಎಸ್ ಅಭ್ಯರ್ಥಿ ಡಾ.ಸೂರಜ್‌ ರೇವಣ್ಣ ಅವರಿಗೆ ಕ್ರೇನ್‌ ಮೂಲಕ ಸೇಬಿನ ಹಾರ ಹಾಕುತ್ತಿರುವ ದೃಶ್ಯ
ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದ ಜೆಡಿಎಸ್ ಅಭ್ಯರ್ಥಿ ಡಾ.ಸೂರಜ್‌ ರೇವಣ್ಣ ಅವರಿಗೆ ಕ್ರೇನ್‌ ಮೂಲಕ ಸೇಬಿನ ಹಾರ ಹಾಕುತ್ತಿರುವ ದೃಶ್ಯ   

ಹಾಸನ: ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಗೆ ಶುಕ್ರವಾರ ಮೊದಲ ನಾಮಪತ್ರ ಸಲ್ಲಿಕೆಯಾಗಿದೆ.

ಜೆಡಿಎಸ್ ಅಭ್ಯರ್ಥಿಯಾಗಿ ಡಾ.ಸೂರಜ್‌ ರೇವಣ್ಣ ಅವರು ಎರಡು ಸೆಟ್‌ ನಾಮಪತ್ರಗಳನ್ನು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆರ್‌.ಗಿರೀಶ್ ಅವರಿಗೆ ಪ್ರತ್ಯೇಕವಾಗಿ ಮಧ್ಯಾಹ್ನ 12.11ಕ್ಕೆ ಸಲ್ಲಿಸಿದರು. ನಾಮಪತ್ರ ಸ್ವೀಕರಿಸಿದ ಆರ್. ಗಿರೀಶ್, ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ವೇಳೆ ಶಾಸಕರಾದ ಎಚ್.ಡಿ.ರೇವಣ್ಣ, ಎ.ಟಿ.ರಾಮಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಕೆ.ಎಸ್. ಲಿಂಗೇಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ, ಸಂಸದ ಪ್ರಜ್ವಲ್‌ ರೇವಣ್ಣ ಹಾಜರಿದ್ದರು.

ADVERTISEMENT

ಇದಕ್ಕೂ ಮುನ್ನ ಬೆಳಿಗ್ಗೆ ಸೂರಜ್‌ ಅವರು ಮಾವಿನಕೆರೆ ರಂಗನಾಥ ಸ್ವಾಮಿ, ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ನಂತರ ನಗರದ ಎನ್.ಆರ್‌.ವೃತ್ತಕ್ಕೆ ಬಂದ ಸೂರಜ್‌ ಅವರನ್ನು ಕಾರ್ಯಕರ್ತರು,ಅಭಿಮಾನಿಗಳು ಸ್ವಾಗತಿಸಿದರು. ಎನ್‌.ಆರ್‌ ಸರ್ಕಲ್‌ನಲ್ಲಿ ಅವರಿಗೆ ಕ್ರೇನ್ ಮೂಲಕ ಸೇಬಿನಹಾರ ಹಾಕಿ, ಜೆಸಿಬಿಯಲ್ಲಿ ಹೂವಿನ ಮಳೆಗೆರೆದರು.

ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ಪಟಾಕಿ ಸಿಡಿಸಿ, ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು. ಡಿ.ಸಿ ಕಚೇರಿ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಡಾ.ಸೂರಜ್ ರೇವಣ್ಣ ಮಾತನಾಡಿ, ‘ನಾನು ಆಕಸ್ಮಿಕವಾಗಿರಾಜಕೀಯಕ್ಕೆ ಬಂದಿದ್ದೇನೆ. ಶೇಕಡಾ 70ರಷ್ಟು ಕಾರ್ಯಕರ್ತರು ಭವಾನಿ ಅವರನ್ನು ಅಭ್ಯರ್ಥಿಮಾಡಬೇಕು ಎಂದು ಹೇಳಿದ್ದರು. ಶಾಸಕರು, ತಂದೆ, ತಾತ ಎಲ್ಲರು ನಿರ್ಧಾರ ತೆಗೆದುಕೊಂಡುಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ನಿಟ್ಟಿನಲ್ಲಿ ಯುವಕನಿಗೆ ಟಿಕೆಟ್‌ನೀಡಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬಳಿಕ ಯಾರು ಪ್ರತಿಸ್ಪರ್ಧಿ ಎಂಬುದು ತಿಳಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾಮಪತ್ರ ಸಲ್ಲಿಕೆವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು.ಎನ್.ಆರ್. ವೃತ್ತ, ಜಿಲ್ಲಾಧಿಕಾರಿ ಕಚೇರಿ ಮುಂದಿನ ರಸ್ತೆ, ತಹಶೀಲ್ದಾರ್‌ ಕಚೇರಿ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದರು. ಇದರಿಂದಾಗಿ ಎರಡು ತಾಸು ಟ್ರಾಫಿಕ್‌ ಜಮ್‌ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.