ADVERTISEMENT

ಜೀತ ಪ್ರಕರಣ: ತಪ್ಪಿತಸ್ಥರನ್ನು ಬಂಧಿಸಿ

ಆರ್‌ಡಿಪಿಆರ್‌ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 14:48 IST
Last Updated 21 ಡಿಸೆಂಬರ್ 2018, 14:48 IST
ಹಾಸನದ ಸಾವಂಕನಹಳ್ಳಿ ಜೀತ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅಧಿಕಾರಿಗಳ ಸಭೆ ನಡೆಸಿದರು.
ಹಾಸನದ ಸಾವಂಕನಹಳ್ಳಿ ಜೀತ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅಧಿಕಾರಿಗಳ ಸಭೆ ನಡೆಸಿದರು.   

ಹಾಸನ: ತಾಲ್ಲೂಕಿನ ದುದ್ದ ಹೋಬಳಿ ಸಾವಂಕನಹಳ್ಳಿ ಜೀತ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ, ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆಗೆ ಗುರಿ ಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾವಂಕನಹಳ್ಳಿ ಜೀತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದ ಅವರು, ಈ ಕಾಲದಲಿಯೂ ಇಂತಹ ಘಟನೆ ಸಂಬಂಧಿಸಿರುವುದು ವಿಷಾದನೀಯ ಸಂಗತಿ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

‘ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ, ರಕ್ಷಿಸಲ್ಪಟ್ಟ ಕಾರ್ಮಿಕರಿಗೆ ಕಾಲಮಿತಿಯೊಳಗೆ ಸೌಲಭ್ಯ ಒದಗಿಸಬೇಕು.
ಜೀತ ವಿಮುಕ್ತರಿಗೆ ಆಯಾ ಜಿಲ್ಲೆಗಳಲ್ಲಿ ಸೂಕ್ತ ರೀತಿಯಲ್ಲಿ ಪುನರ್ವಸತಿ ಕಲ್ಪಿಸಲು ಹಾಗೂ ಪರಿಹಾರ ಹಣ ವರ್ಗಾಯಿಸಲು ಖಾತೆ, ಇತರೆ ದಾಖಲೆಗಳನ್ನು ಪಡೆದು ಸಲ್ಲಿಸುವಂತೆ ಕೋರಿ ಎಲ್ಲಾ ಜಿಲ್ಲಾಧಿಕಾರಿಗೆ ಹಾಗೂ ಆಂದ್ರ ಪ್ರದೇಶದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು’ ಎಂದು ಹೇಳಿದರು.

ADVERTISEMENT

ಜಿಲ್ಲೆಯಾದ್ಯಂತ ಇದೇ ರೀತಿಯ ಪ್ರಕರಣಗಳಿವೆಯೇ ಎಂಬುದನ್ನು ಪರಿಶೀಲಿಸಿ ಖಾತರಿ ಪಡಿಸಿಕೊಳ್ಳಬೇಕು. ರಾಜ್ಯ ಸರ್ಕಾರ ₹ 10 ಲಕ್ಷ ಬಿಡುಗಡೆ ಮಾಡಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಪರಿಹಾರ ಕ್ರಮಗಳಿಗೆ ಬಳಿಸಿಕೊಳ್ಳುವಂತೆ ಅವರು ಹೇಳಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜೀತವಿಮುಕ್ತರಿಗೆ ಸೂಕ್ತ ಪುನರ್ ವಸತಿ ಹಾಗೂ ಉದ್ಯೋಗ ಕಲ್ಪಿಸಲಾಗುವುದು. ಅವರೆಲ್ಲರೂ ತಮ್ಮ ಗ್ರಾಮಗಳಿಗೆ ತೆರಳಲು ಬಯಸಿದ್ದರಿಂದ ತಾತ್ಕಾಲಿಕವಾಗಿ ಪ್ರಯಾಣ ವೆಚ್ಚಕ್ಕೆ ಹಣ ನೀಡಿ ಕಳುಹಿಸಿಕೊಡಲಾಗಿದೆ. ಉಳಿದ ಪರಿಹಾರಗಳ ವಿತರಣೆಗೆ ಬ್ಯಾಂಕ್ ಖಾತೆ ಮತ್ತು ಇತರೆ ವಿವರಗಳನ್ನು ಶೀಘ್ರ ಒದಗಿಸಲು ಕೋರಲಾಗಿದೆ ಎಂದು ಹೇಳಿದರು.

ದಲಿತ ದೌರ್ಜನ್ಯ ಕಾಯಿದೆ ಹಾಗೂ ಜೀತ ಪದ್ಧತಿ ನಿರ್ಬಂಧ ಕಾಯಿದೆ, ಕಾರ್ಮಿಕ ಕಾಯಿದೆ ಅಡಿ ಪರಿಹಾರ ಒದಗಿಸಲಾಗುವುದು ಎಂದು ರೋಹಿಣಿ ವಿವರಿಸಿದರು.

ಪ್ರಕರಣದ ಬಗ್ಗೆ ವಿವರ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್. ಪ್ರಕಾಶ್ ಗೌಡ, ‘ತೋಟದ ಮೇಳೆ ದಾಳಿ ಮಾಡಿ 47 ಕಾರ್ಮಿಕರು ಹಾಗೂ 4 ಮಕ್ಕಳನ್ನು ರಕ್ಷಿಸಲಾಗಿದೆ. ಜಮೀನಿನ ಮಾಲೀಕ ಸೇರಿ ಐವರ ವಿರುದ್ಧ ಮೊಕದ್ದಮೆ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ. ಉಳಿದವರ ಪತ್ತೆ ಕಾರ್ಯ ನಡೆದಿದೆ. ನ್ಯಾಯಾಂಗ ಇಲಾಖೆಯು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ’ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕ ಕೃಷ್ಣಪ್ಪ ಕೋಡಿಪಾಳ್ಯ, ಜಿಲ್ಲಾ ಪಂಚಾಯಿತಿ ಪ್ರಭಾರಿ ಮುಖಕಾರ್ಯನಿರ್ವಾಹಕ ಅಧಿಕಾರಿ ಪುಟ್ಟಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಅರಣ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.