ಹಾಸನ: ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ವಿರೋಧಿಸಿ ಜೆಸಿಟಿಯು, ಸಿಐಟಿಯು ಹಾಗೂ ಇತರೆ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ಕಾರ್ಮಿಕರು ನಗರದಲ್ಲಿ ಬೃಹತ್ ಮೆರವಣಿಗೆ ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಸಾಮೂಹಿಕ ಬಂಧನಕ್ಕೆ ಒಳಗಾದರು.
ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಆರಂಭಿಸಿದ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ, ಗುತ್ತಿಗೆ ನೌಕರರು ಹಾಗೂ ವಿವಿಧ ಸಂಘಟನೆಗಳ ನೂರಾರು ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಎನ್.ಆರ್. ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲ ಮುಖಂಡರನ್ನು ಪೊಲೀಸರು ಬಂಧಿಸಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ಮಾತನಾಡಿ, ಜೆಸಿಟಿಯು, ಎಸ್‌ಕೆಎಂ ಕರೆಯ ಮೇರೆಗೆ ಜಿಲ್ಲೆಯ ವಿವಿಧ ಕಾರ್ಮಿಕ ಸಂಘಟನೆಗಳು ಸೇರಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಂಡಿದ್ದೇವೆ. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ 4 ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಜಿಲ್ಲಾ ಕೇಂದ್ರ ಸೇರಿದಂತೆ ಪ್ರತಿ ತಾಲ್ಲೂಕಿನಲ್ಲಿಯೂ ಪ್ರತಿಭಟನೆ. ರಸ್ತೆ ತಡೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುತ್ತಿದೆ ಎಂದರು.
ಹಲವು ಬಾರಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರಿಗೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರವನ್ನು ಎಚ್ಚರಿಸಲು ಮುಷ್ಕರ ಮಾಡಲಾಗಿದೆ ಎಂದರು.
‘ದೇಶದಲ್ಲಿ 4 ಸಂಹಿತೆಯನ್ನು ಜಾರಿಗೆ ತರುವ ಮೂಲಕ ಕಾರ್ಮಿಕ ಇಲಾಖೆಯನ್ನು ಅಪ್ರಸ್ತುತ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ನಾಲ್ಕು ಸಂಹಿತೆಯನ್ನು ಜಾರಿ ಮಾಡಲು ಬಿಡುವುದಿಲ್ಲ. 12 ಗಂಟೆ ದುಡಿಮೆಯನ್ನು ಕಡ್ಡಾಯಗೊಳಿಸಿ ಕಾರ್ಮಿಕರನ್ನು ಗುಲಾಮರಾಗಿ ಮಾಡಲು ಹೊರಟಿದ್ದಾರೆ. ಕಾರ್ಮಿಕರ ವೇತನವನ್ನು ಕನಿಷ್ಠ ₹5,500 ನಿಗದಿ ಮಾಡಿದ್ದಾರೆ’ ಎಂದು ದೂರಿದರು.
ಮೋದಿ ಸರ್ಕಾರ ದೇಶವನ್ನು ಮಾರಲು ಹೊರಟಿದ್ದು ಕಾರ್ಮಿಕ ಸಂಹಿತೆ ಜಾರಿ ಮೂಲಕ ಕಾರ್ಪೊರೇಟ್ ಬಂಡವಾಳಶಾಹಿಗಳ ಗುಲಾಮರಂತೆ ವರ್ತಿಸುತ್ತಿದ್ದಾರೆ. ಇದನ್ನು ವಿರೋಧಿಸಿ ಮುಷ್ಕರ ನಡೆಸಿದ್ದೇವೆ ಎಂದರು.
ಎಂ.ಸಿ. ಡೋಂಗ್ರೆ, ಎಂ.ಬಿ. ಪುಷ್ಪಾ, ವಸಂತಕುಮಾರ್, ರಮೇಶ್, ಜಯಂತಿ, ಸಂತೋಷ್, ಜಯಲಕ್ಷ್ಮಿ, ಮೀನಾಕ್ಷಿ, ಪ್ರಕಾಶ್ ಇದ್ದರು.
ಔಷಧಿ ಮಾರಾಟ ಪ್ರತಿನಿಧಿಗಳ ಪ್ರತಿಭಟನೆ
ಕಾರ್ಮಿಕ ಸಂಹಿತೆ ರದ್ದತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಔಷಧಿ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ಕಾರ್ಮಿಕ ಸಂಹಿತೆಯಿಂದ ವೈದ್ಯಕೀಯ ಪ್ರತಿನಿಧಿಗಳ ಮಾರಾಟ ಪ್ರಚಾರ ನೌಕರರ ಕೆಲಸಕ್ಕೆ ತೀವ್ರ ತೊಂದರೆಯಾಗಿದೆ. ಕೇಂದ್ರ ಸರ್ಕಾರ ಕೂಡಲೇ 4 ಸಂಹಿತೆ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ರಾಜು ಶ್ರೀಧರ್ ಪುನೀತ್ ಕೃಷ್ಣ ವೇಣುಗೋಪಾಲ್ ಶಿವು ಪುಟ್ಟರಾಜು ಮಂಜು ಪುರುಷೋತ್ತಮ್ ಸುನಿಲ್ ಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.