
ಹೊಳೆನರಸೀಪುರ: ಬಟ್ಟೆಯ ವಿಚಾರದಲ್ಲಿ ಆತಂಕ ಎದುರಾಗಿದ್ದ ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವವು, ಮಂಗಳವಾರ ಹೂವಿನ ಅಲಂಕಾರದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಗ್ರಹಣದ ದಿನ ಹೊಸ ಬಟ್ಟೆ ಬೇಡ. ಗ್ರಹಣ ಆದರೇನು ಹೊಸಬಟ್ಟೆ ಹಾಕಿ ರಥೋತ್ಸವ ನಡೆಸಿ ಎಂದು ಪಟ್ಟು ಹಿಡಿದಿದ್ದ ಶಾಸಕ, ಸಂಸದರ ಮನವೊಲಿಸುವಲ್ಲಿ ಯಶಸ್ವಿಯಾದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಸೂಚನೆಯಂತೆ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಬೆಳಿಗ್ಗೆ 7 ಗಂಟೆಯಿಂದ ಲಕ್ಷ್ಮೀನರಸಿಂಹಸ್ವಾಮಿಯ ಉತ್ಸವ ಮೂರ್ತಿಯ ಉತ್ಸವವನ್ನು ರಥ ಸಾಗುವ ಮಾರ್ಗದಲ್ಲಿ ನಡೆಸಲಾಯಿತು. 8.45 ರ ವೇಳೆಗೆ ರಥಾರೋಹಣ ಮಾಡಲಾಯಿತು. ರಥದ ಮೇಲೆ ಪೂಜಾ ವಿಧಿ ವಿಧಾನಗಳನ್ನು ನಡೆಸಿ, ಮಕ್ಕಳಿಗಾಗಿ ಹರಕೆ ಹೊತ್ತ ದಂಪತಿಗೆ ಮಡಿಲು ಪ್ರಸಾದ ನೀಡಿದರು. 9.30 ರ ವೇಳೆಗೆ ರಥದ ಮೇಲಿನ ನಗಾರಿ ಬಾರಿಸುತ್ತಿದ್ದಂತೆಯೇ ಸಾವಿರಾರು ಜನರು ಲಕ್ಷ್ಮೀನರಸಿಂಹಸ್ವಾಮಿ ಪಾದಕ್ಕೆ ಗೋವಿಂದಾ, ಗೋವಿಂದಾ ಎಂದು ರಥ ಎಳೆಯಲು ಪ್ರಾರಂಭಿಸಿದರು.
ರಥಬೀದಿಯಲ್ಲಿ ಸಾಗಿದ ರಥ ಸ್ವಸ್ಥಾನಕ್ಕೆ ಬಂದಾಗ 11.30 ಆಗಿತ್ತು. ರಥ ಸಾಗುವ ಮಾರ್ಗದಲ್ಲಿ ಭಕ್ತರು ರಥಕ್ಕೆ ಹಣ್ಣು, ಜವನ ಎಸೆದು ಭಕ್ತಿ ಸಮರ್ಪಿಸಿದರು. ರಥ ಸಾಗುವ ಮಾರ್ಗ ಹಾಗೂ ಕೋಟೆ ಮುಖ್ಯರಸ್ತೆಯಲ್ಲಿ ಸಂಘ– ಸಂಸ್ಥೆಗಳು ಹಾಗೂ ಕೆಲವರು ಮನೆಗಳಲ್ಲಿ ಶರಬತ್ತು, ಮಜ್ಜಿಗೆ, ಪಾನಕ ನೀಡಿದರು.
ಶಾಸಕ ಎಚ್.ಡಿ. ರೇವಣ್ಣ, ಸಂಸದ ಶ್ರೇಯಸ್ ಎಂ. ಪಟೇಲ್, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಉದ್ಯಮಿ ಟಿ. ಶಿವಕುಮಾರ್, ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀನಿವಾಸ್, ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್, ತಹಶೀಲ್ದಾರ್ ರೇಣುಕುಮಾರ್, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ದೇವಾಲಯ ಪ್ರಾಂಗಣದಲ್ಲಿ ದೇವರ ದರ್ಶನ ಪಡೆದ ಭಕ್ತರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಬಾಣಸಿಗ ಸತೀಶ್ ಸಿದ್ದಪಡಿಸಿದ್ದ ಪುಳಿಯೊಗರೆ, ಮೊಸರನ್ನ, ಲಾಡು ಪ್ರಸಾದ ನೀಡಿದರು. ದೇವಾಲಯ ಪ್ರವೇಶಿಸುವ ಭಕ್ತರನ್ನು ನಿಯಂತ್ರಿಸುತ್ತಿದ್ದ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಸ್ವಯಂಸೇವಕರು ಉತ್ತಮ ಸೇವೆ ಒದಗಿಸಿದರು. ರಥೋತ್ಸವದ ಬಗ್ಗೆ ಮಾಹಿತಿ, ಸೂಚನೆಗಳನ್ನು ಶಿಕ್ಷಕ ಸುಜತ್ ಅಲಿ ಧ್ವನಿವರ್ಧಕದ ಮೂಲಕ ನೀಡುತ್ತಿದ್ದರು.
ಹಬ್ಬಹರಿದಿನಗಳಲ್ಲಿ ನಾವು ಹೊಸಬಟ್ಟೆ ಧರಿಸುತ್ತೇವೆ. ರಥಕ್ಕೂ ಹೊಸಬಟ್ಟೆ ಹಾಕಿ ಅಲಂಕರಿಸಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು.ಎಚ್.ಆರ್. ಸುರೇಶ್ ಪಟ್ಟಣದ ನಿವಾಸಿ
ರಥೋತ್ಸವ ನಡೆಯುತ್ತೋ ಇಲ್ಲವೋ ಎಂದು ಆತಂಕಗೊಂಡಿದ್ದವು. ಲಕ್ಷ್ಮೀನರಸಿಂಹನ ದಯೆಯಿಂದ ರಥೋತ್ಸವ ಚೆನ್ನಾಗಿ ನಡೆಯಿತು.ಬೃಂದಾ ಗೃಹಿಣಿ
ಬಿಗಿ ಬಂದೋಬಸ್ತ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ ಡಿವೈಎಸ್ಪಿ ಎಂ.ಎಚ್. ಖಾನ್ ಹಾಸನ ಡಿಎಸ್ಪಿ ಗಂಗಾಧರಪ್ಪ ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ನಗರ ಠಾಣೆ ಸಬ್ ಇನ್‌ಸ್ಪೆಕ್ಟರ್ ಅಭಿಜಿತ್ ಗ್ರಾಮಾಂತರ ಠಾಣೆ ಸಬ್ ಇನ್‌ಸ್ಪೆಕ್ಟರ್ ರಮೇಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರಥಕ್ಕೆ ಅಗತ್ಯಕ್ಕೆ ತಕ್ಕಷ್ಟು ಹೂವನ್ನು ಹಾಕದ ಕಾರಣ ರಥೋತ್ಸವಕ್ಕೆ ಬಂದಿದ್ದ ಅನೇಕರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.