ADVERTISEMENT

ಎಚ್‌ಆರ್‌ಪಿ ಹಗರಣದ ತನಿಖೆ ಪ್ರಗತಿಯಲ್ಲಿ: ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 15:10 IST
Last Updated 19 ಅಕ್ಟೋಬರ್ 2021, 15:10 IST
ಕೆ.ಗೋಪಾಲಯ್ಯ
ಕೆ.ಗೋಪಾಲಯ್ಯ   

ಹಾಸನ: ‘ಹೇಮಾವತಿ ಜಲಾಶಯ ಯೋಜನೆ (ಎಚ್‌ಆರ್‌ಪಿ) ಮುಳುಗಡೆ ಸಂತ್ರಸ್ತರ ಪುನರ್ವಸತಿಗಾಗಿ ಮೀಸಲಿಟ್ಟ ಭೂಮಿಯ ಅಕ್ರಮ ಮಂಜೂರಾತಿ ಪ್ರಕರಣದಲ್ಲಿ ಅಧಿಕಾರಿ ಅಥವಾ ರಾಜಕಾರಣಿ ಭಾಗಿಯಾಗಿದ್ದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ನಗರದ ಎಚ್‌.ಎಂ.ಟಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೇಮಾವತಿ ಜಲಾಶಯಕ್ಕೆ ಭೂಮಿ ನೀಡಿದ ಸಂತ್ರಸ್ತರಿಗೆ ಭೂಮಿ ಹಂಚಿಕೆ ವಿಚಾರದಲ್ಲಿ ಅಕ್ರಮ ಮಂಜೂರಾತಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಂದಾಯ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ, ತನಿಖಾ ತಂಡ ರಚಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ಸಂಪೂರ್ಣ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶೀಘ್ರ ವರದಿ ಸಲ್ಲಿಕೆ ಆಗಲಿದೆ’ ಎಂದು ತಿಳಿಸಿದರು.

‘ದೇಶದಲ್ಲಿ ಬಿಜೆಪಿಗೆ ಕಾಂಗ್ರೆಸ್ ಎದುರಾಳಿ. ಮೋದಿ ಪ್ರಧಾನಿ ಆದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಯಾವ ಸ್ಥಿತಿ ಬಂದಿದೆ ಎಂಬುದು ಎಲ್ಲರಿಗೂ ಗೊತ್ತು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಇತರೆ ಪಕ್ಷಗಳು ಆರೋಪ ಮಾಡುವುದು ಸಾಮಾನ್ಯ. ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಉತ್ತಮ ಕೆಲಸಗಳು ಆಗಿವೆ. ಹಾಸನಕ್ಕೆ ವಿಮಾನ ನಿಲ್ದಾಣ ಕಾಮಗಾರಿಗೆ ಅನುದಾನ ಮಂಜೂರು ಮಾಡಲಾಗಿದೆ. ಬೇಲೂರಿಗೆ ₹121 ಕೋಟಿ ಮೊತ್ತದ ಯೋಜನೆ ನೀಡಲಾಗಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ನಿಯಮ ಪ್ರಕಾರ ಸಿ.ಎಲ್ –7 ಪರವಾನಗಿ ನೀಡಲಾಗಿದೆ. ನಿಯಮ ಉಲ್ಲಂಘಿಸಿ ಮದ್ಯಮಾರಾಟಕ್ಕೆ ಅವಕಾಶ ನೀಡಿದ್ದರೇ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು
ಗೆಲ್ಲುವುದು ಖಚಿತ. ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾತೇ ಇಲ್ಲ. ಸ್ಪರ್ಧೆ ಮೂಲಕ ಗೆಲುವು ಪಡೆಯುವುದು ನಿಶ್ಚಿತ’ ಎಂದು ವಿಶ್ವಾಸ
ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಕೋವಿಡ್‌ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಹಾಗಾಗಿ ಈ ಬಾರಿಯೂ ಸರಳವಾಗಿ ಹಾಸನಾಂಬ ಜಾತ್ರಾ ಮಹೋತ್ಸವ ಮಾಡಲಾಗುವುದು. ವಿಐಪಿ ಪಾಸ್‌ಗಳನ್ನು ವಿತರಣೆ ಮಾಡುವುದಿಲ್ಲ. ಸಾರ್ವಜನಿಕ ದರ್ಶನಕ್ಕೂ ಅವಕಾಶವಿಲ್ಲ. ಕಳೆದ ಬಾರಿಯಂತೆಯೇ ಆನ್‌ಲೈನ್‌ ದರ್ಶನ ಹಾಗೂ ನಗರದ ವಿವಿಧೆಡೆ ಎಲ್‌.ಇ.ಡಿ ಪರದೆ ಅಳವಡಿಸಿ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಭಕ್ತರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲಳ್ಳಿ ಸುರೇಶ್, ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.