ADVERTISEMENT

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೊ ಹಾಕಿ ಬ್ಲಾಕ್‌ಮೇಲ್‌: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 12:13 IST
Last Updated 7 ಡಿಸೆಂಬರ್ 2019, 12:13 IST
ಪ್ರಶಾಂತ್ ರಾಜಶೇಖರ ವಾಮ
ಪ್ರಶಾಂತ್ ರಾಜಶೇಖರ ವಾಮ   

ಹಾಸನ: ಯುವತಿಯರ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬ್ಲಾಕ್‌ಮೇಲ್‌ ಮಾಡಿ ಹಣ ವಸೂಲು ಮಾಡುತ್ತಿದ್ದ ಆರೋಪಿಯನ್ನು ಅಪರಾಧ ಠಾಣೆ ಪೊಲಿಸರು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಕೇಡಿಗೆ ಗ್ರಾಮದ, ಕಾರು ಚಾಲಕ ಪ್ರಶಾಂತ್ ರಾಜಶೇಖರ್ ವಾಮ (24) ಬಂಧಿತ ಆರೋಪಿ. ಕೃತ್ಯದಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಮುಂಬೈ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಈ ಜಾಲ ಹರಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.

‌ಫೇಸ್‌ಬುಕ್‌ನಿಂದ ಕದ್ದ ಫೋಟೋವನ್ನು ಪ್ರಶಾಂತ್‌, ಅಶ್ಲೀಲವಾಗಿ ಎಡಿಟ್‌ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ. ನಂತರ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ.

ADVERTISEMENT

ಹಾಸನದ ಯುವತಿಯೊಬ್ಬಳು ಏ.7 ರಂದು ಪೊಲೀಸರಿಗೆ ದೂರು ನೀಡಿದ್ದಳು. ಈ ಯುವತಿಗೆ ಪವಿತ್ರಾ ಎಂಬಾಕೆ ಕರೆ ಮಾಡಿ, 'ಮಹೇಶ್‌ ಕುಲಕರ್ಣಿ ಎಂಬಾತ ನಿನ್ನ ಅಶ್ಲೀಲ ಫೋಟೊಗಳನ್ನು ನನಗೆ ಕಳುಹಿಸಿದ್ದಾನೆ. ಆ ಫೋಟೊಗಳನ್ನು ತೆಗೆದು ಹಾಕಬೇಕೆಂದರೆ ಸ್ವಾತಿ ಎಂಬಾಕೆಗೆ ಕರೆ ಮಾಡುವಂತೆ ನಂಬರ್‌ ಕೊಟ್ಟು' ಕರೆ ಕಟ್‌ ಮಾಡಿದ್ದಾಳೆ. ‌

ಪವಿತ್ರಾ ಎಂಬಾಕೆಯೇ ಸ್ವಾತಿ ಪಾತ್ರ ಸೃಷ್ಟಿಸಿದ್ದಳು. ಆತಂಕಗೊಂಡ ಯುವತಿ ಸ್ವಾತಿಗೆ ಕರೆ ಮಾಡಿದ್ದಾರೆ. ಎಲ್ಲ ಫೋಟೊಗಳನ್ನು ಡಿಲೀಟ್‌ ಮಾಡಬೇಕಾದರೆ ಅಸಲಿ ಪೋಟೊ ಹಾಗೂ ವಿಡಿಯೋ ನೀಡುವಂತೆ ಕೇಳಿದ್ದಾಳೆ. ಮೋಸದ ಜಾಲದ ಬಗ್ಗೆ ಅರಿಯದ ಯುವತಿ ಬೆತ್ತಲೆ ವಿಡಿಯೋ ಮಾಡಿ ಕಳುಹಿಸಿದ್ದಾರೆ.

ಯುವತಿಗೆ ಮತ್ತೆ ಕರೆ ಮಾಡಿದ ಸ್ವಾತಿ, ಚಿತ್ರಗಳು ಡಿಲೀಟ್‌ ಆಗುತ್ತಿಲ್ಲ. ಪ್ರೀತಂ ಎಂಬಾತನಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಹೇಳಿ ಕರೆ ಕಟ್‌ ಮಾಡಿದ್ದಳು.

ಪ್ರೀತಂ ಎಂಬಾತ ಯುವತಿಗೆ ಕರೆ ಮಾಡಿ, ಬೆಳಗಾವಿಯಲ್ಲಿರುವ ತನ್ನ ಸ್ನೇಹಿತನ ಖಾತೆಗೆ ₹ 22 ಸಾವಿರ ಹಾಕಬೇಕೆಂದು ಹೇಳಿದ್ದಾನೆ. ದಿಕ್ಕು ತೋಚದೆ ಯುವತಿ, ಏ.11 ರಂದು ₹ 17 ಸಾವಿರಗಳನ್ನು ಬಿ.ಸಿ.ಶಿವಾನಂದ ಎಂಬಾತನ ಎಸ್‌ಬಿಐ ಖಾತೆಗೆ ಹಣ ಹಾಕಿದ್ದಾರೆ. ಮೂರು ದಿನಗಳ ಬಳಿಕ ಪ್ರೀತಂ ಕರೆ ಮಾಡಿ, ‘ಅಶ್ಲೀಲ ಫೋಟೊಗಳನ್ನು ಶಾಶ್ವತವಾಗಿ ಡಿಲೀಟ್‌ ಮಾಡಬೇಕೆಂದರೆ ₹ 50 ಸಾವಿರ ಕೊಡಬೇಕು. ಇಲ್ಲವಾದರೆ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ಗಳಲ್ಲಿ ಫೋಟೊ ವೈರಲ್‌ ಆಗುತ್ತದೆ’ ಎಂದು ಎಚ್ಚರಿಸಿದ್ದಾನೆ.
ಆಗ ಯುವತಿ ಪೋಷಕರಿಗೆ ತಿಳಿಸಿ ಅಪರಾಧ ಠಾಣೆಗೆ ದೂರು ನೀಡಿದ್ದರು.

‘ಹಾಸನದ ಯುವತಿಗೆ ವಂಚಿಸದವನನ್ನು ಬಂಧಿಸಲಾಗಿದೆ. ಆಕೆಗೆ ಕರೆ ಮಾಡಿದ ಸ್ವಾತಿ, ಪ್ರೀತಂ ಇನ್ನೂ ಪತ್ತೆಯಾಗಿಲ್ಲ. ₹ 17 ಸಾವಿರ ಹಣ ಪಾವತಿಸಿಕೊಂಡ ಶಿವಾನಂದ ಸಂಪರ್ಕಕಕ್ಕೆ ಸಿಕ್ಕಿಲ್ಲ. ಮುಂಬೈ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಈ ಜಾಲ ಹರಡಿರುವ ಸಾಧ್ಯತೆ ಇದೆ. ಆರೋಪಿಯ ವಿಚಾರಣೆ ನಡೆಯುತ್ತಿದೆ’ ಎಂದು ಪೊಲಿಸ್‌ ಸಬ್‌ ಇನ್‌ಸ್ಪೆಕ್ಟರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.