ADVERTISEMENT

ಎಸ್‌ಐ ಆತ್ಮಹತ್ಯೆ ಪ್ರಕರಣ ಮುಚ್ಚಿ ಹಾಕಲ್ಲ: ಕೆ.ಗೋಪಾಲಯ್ಯ

ಅಧಿಕಾರಿಯಿಂದ ನಿಷ್ಪಕ್ಷಪಾತ ತನಿಖೆ, ಗಡುವು ನೀಡಿಲ್ಲ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 14:19 IST
Last Updated 4 ಆಗಸ್ಟ್ 2020, 14:19 IST
ಕೆ.ಗೋಪಾಲಯ್ಯ
ಕೆ.ಗೋಪಾಲಯ್ಯ   

ಹಾಸನ: ಚನ್ನರಾಯಪಟ್ಟಣ ಪಟ್ಟಣ ಠಾಣೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಕಿರಣ್‌ ಕುಮಾರ್‌ ಆತ್ಮಹತ್ಯೆ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದ್ದು, ಪ್ರಕರಣ ಮುಚ್ಚಿ ಹಾಕುವ ಪ್ರಸಂಗ ಬರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಕಿರಣ್ ಮನೆಗೆ ಹೋಗಿ ಸಾಂತ್ವನ ಹೇಳಿ, ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಅವರ ಮಕ್ಕಳ ಶಿಕ್ಷಣಕ್ಕೂ ನೆರವು
ನೀಡಲಾಗುವುದು. ಕೆಲಸ ವಿಚಾರದಲ್ಲಿ ಪೊಲೀಸ್ ಇಲಾಖೆ ಆಗಲಿ, ಯಾವ ಇಲಾಖೆಗೂ ಒತ್ತಡ ಇಲ್ಲ. ಅಧಿಕಾರಿಗಳು
ಧೈರ್ಯದಿಂದ ಶಾಂತಿ, ಸೌಹಾರ್ದದಿಂದ ಕೆಲಸ ಮಾಡಲು ಹೇಳಿದ್ದೇನೆ. ಪೊಲೀಸ್‌ ವರಿಷ್ಠಾಧಿಕಾರಿ, ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜತೆ ಚರ್ಚಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಚನ್ನರಾಯಪಟ್ಟಣದಲ್ಲಿ ನಡೆದ ಎರಡು ಕೊಲೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐ ಆತ್ಮಹತ್ಯೆ ಅರ್ಧ ಗಂಟೆಗೂ ಮುನ್ನ ಅವರ ಜತೆ ಮೊಬೈಲ್‌ನಲ್ಲಿ ಮಾತನಾಡಿದ್ದೆ. ಅವರು ಸಹ ಸಂಜೆ ಸಭೆ ನಡೆಸಿ, ಕಾನೂನು, ಸುವ್ಯವಸ್ಥೆ ಬಿಗಿಗೊಳಿಸುವುದಾಗಿ ಹೇಳಿದ್ದರು. ತನಿಖೆಯ ನಂತರ ನಿಖರ ಕಾರಣ ಗೊತ್ತಾಗಲಿದೆ. ತನಿಖಾಧಿಕಾರಿ ನಿಸ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ನಂಬಿಕೆ ಇದೆ. ಅದರಲ್ಲಿ ಅನುಮಾನ ಬೇಡ. ನಿಗದಿತ ಗಡುವು ನೀಡಿಲ್ಲ ಎಂದರು.

ADVERTISEMENT

ನಗರದ ಹಿಮತ್‌ ಸಿಂಗ್‌ ಕಾ ಲಿನೆನ್ಸ್‌ ಬಟ್ಟೆ ಕಾರ್ಖಾನೆಯ ಕೊರೊನಾ ಸೋಂಕಿತ ಕಾರ್ಮಿಕರಿಗೆ ಕೃಷಿ ಮಹಾವಿದ್ಯಾಲಯದಲ್ಲಿ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಗೆ 9 ಸಾವಿರ ರ್‍ಯಾಪಿಡ್‌ ಆ್ಯಟಿಜೆನ್ ಕಿಟ್‌ ನೀಡಲಾಗಿದ್ದು, ಒಂದು ಸಾವಿರ ಕಿಟ್ ಅನ್ನು ಕಾರ್ಖಾನೆಗೆ ಕೊಡಲಾಗಿದೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಧೈರ್ಯದಿಂದ ಇರಬೇಕು ಎಂದು ಮನವಿ ಮಾಡಿದರು.

ವರ್ಗಾವಣೆ ಸಂಬಂಧಿಸಿದಂತೆ ಅಧಿಕಾರಿಗಳ ಆಡಿಯೊ ವೈರಲ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಜನರಲ್ ಟ್ರಾನ್ಸ್‌ಫರ್ ಮುಗಿದಿದೆ. ಪರಾಜಿತ ಅಭ್ಯರ್ಥಿ ವರ್ಗಾವಣೆಗೆ ಒತ್ತಡ ಹಾಕಿಲ್ಲ. ಪಕ್ಷದ ಮುಖಂಡರು ಸಹ ಅಧಿಕಾರಿಗಳಿಗೆ ಬೆದರಿಕೆ ಹಾಗೂ ಒತ್ತಡ ಹೇರಿಲ್ಲ. ಅಂತಹ ಪ್ರಕರಣ ಇದ್ದರೆ ಅಧಿಕಾರಿಯೊಂದಿಗೆ ಮಾತನಾಡುತ್ತೇನೆ ಎಂದರು.

ಜಿಲ್ಲೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸೇಡಿನ ರಾಜಕಾರಣ ಮಾಡುವುದಿಲ್ಲ. ಸಕಲೇಶಪುರ ಭಾಗದಲ್ಲಿ ಗೋ ಸಾಗಣೆ ಗ್ಗೆ ಚರ್ಚೆ ಆಗಿದ್ದು, ಎಸ್ಪಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಮರಳು ಗಣಿಗಾರಿಕೆಗೆ ಕಡಿವಾಣ ಹಾಕಲಾಗುವುದು. ಕ್ಷೇತ್ರ ಹಾಗೂ ಇಲಾಖೆಗೆ ಸಂಬಂಧಿಸಿದ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಆ. 10ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಪ್ರೀತಂ ಗೌಡ ಮಾತನಾಡಿ, ‘ವಿಧಾನಸಭೆ ಚುನಾವಣೆ ವೇಳೆಯೂ ಇದೇ ರೀತಿ ಆಡಿಯೊ ಸಂಭಾಷಣೆ ವೈರಲ್‌ ಆಗಿತ್ತು. ಯಾರ ಧ್ವನಿಯನ್ನು ಯಾರು ಮಿಮಿಕ್ರಿ ಮಾಡಿದ್ದಾರೆ ಗೊತ್ತಿಲ್ಲ. ಇಬ್ಬರ ನಡುವಿನ ಸಂಭಾಷಣೆಯನ್ನು ಬಿಡುಗಡೆ
ಮಾಡುವ ಮೂಲಕ ಒಬ್ಬ ಅಧಿಕಾರಿ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಅಧಿಕಾರಿಗಳು ಯಾವ ರೀತಿ ಕುತಂತ್ರ ಮಾಡುತ್ತಾರೆಂಬುದು ಗೊತ್ತು ಎಂದರು.

ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಪೊಲೀಸ್‌ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ,
ಜಿಲ್ಲಾಧಿಕಾರಿ ಆರ್.ಗಿರೀಶ್‌, ಸಿಇಒ ಬಿ.ಎ.ಪರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.