ADVERTISEMENT

ಹಾಸನ: ಜೆಡಿಎಸ್ ಅಭ್ಯರ್ಥಿ, ರೇವಣ್ಣ ಪುತ್ರ ಸೂರಜ್‌ಗೆ 1,433 ಮತಗಳ ಅಂತರದ ಗೆಲುವು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 6:25 IST
Last Updated 14 ಡಿಸೆಂಬರ್ 2021, 6:25 IST
ಜೆಡಿಎಸ್‌ ಅಭ್ಯರ್ಥಿ ಡಾ.ಸೂರಜ್‌ ರೇವಣ್ಣ, ಭವಾನಿ ರೇವಣ್ಣ ಮತ್ತು ಶಾಸಕ ಎಚ್.ಡಿ. ರೇವಣ್ಣ
ಜೆಡಿಎಸ್‌ ಅಭ್ಯರ್ಥಿ ಡಾ.ಸೂರಜ್‌ ರೇವಣ್ಣ, ಭವಾನಿ ರೇವಣ್ಣ ಮತ್ತು ಶಾಸಕ ಎಚ್.ಡಿ. ರೇವಣ್ಣ   

ಹಾಸನ: ಹಾಸನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ವಿಧಾನ ಪರಿಷತ್‌ಗೆ ಜೆಡಿಎಸ್ ಅಭ್ಯರ್ಥಿ ಆರ್.ಸೂರಜ್ (ಸೂರಜ್‌ ರೇವಣ್ಣ) ಆಯ್ಕೆಯಾಗಿದ್ದಾರೆ. ಸೂರಜ್‌ ಅವರು 1,433 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಜೆಡಿಎಸ್‌ನ ಆರ್.ಸೂರಜ್ 2,242 ಮತಗಳು, ಕಾಂಗ್ರೆಸ್‌ನ ಎಂ.ಶಂಕರ್‌ 731 ಮತಗಳು, ಬಿಜೆಪಿ ಎಚ್.ಎಂ.ವಿಶ್ವನಾಥ್‌ 354 ಮತಗಳು ಪಡೆದರು.

2015ರಲ್ಲಿ ನಡೆದ ಚುನಾವಣೆಯಲ್ಲಿ ಆಂತರಿಕ ಕಚ್ಚಾಟದ ಕಾರಣಕ್ಕೆ ಕಡಿಮೆ ಮತಗಳ ಅಂತರದಿಂದ ಜೆಡಿಎಸ್‌ ಅಭ್ಯರ್ಥಿ ಪಟೇಲ್ ಶಿವರಾಂ ಸೋತಿದ್ದರು. ಹಿಂದಿನ ಲೋಪದೋಷ ಸರಿಪಡಿಸಿಕೊಂಡು ಎಲ್ಲರ ವಿಶ್ವಾಸ ಮತ್ತು ಸಂಘಟನಾ ಶಕ್ತಿ ಬೆನ್ನಿಗಿಟ್ಟುಕೊಂಡು ಜೆಡಿಎಸ್‌ ಅಭ್ಯರ್ಥಿ ಆರ್.ಸೂರಜ್‌ ಪ್ರಚಾರ ನಡೆಸಿದ್ದರು. ಗ್ರಾಮ ಪಂಚಾಯಿತಿಗಳಲ್ಲಿ ಜೆಡಿಎಸ್‌ ಬೆಂಬಲಿತ ಸದಸ್ಯರೇ ಹೆಚ್ಚು ಆಯ್ಕೆಯಾಗಿರುವುದು ಸೂರಜ್‌ ಗೆಲುವಿಗೆ ಸಹಕಾರಿಯಾಗಿದೆ.

ADVERTISEMENT

2014ರ ಲೋಕಸಭೆ ಚುನಾವಣೆಯಿಂದಲೂ ದೇವೇಗೌಡ, ಎಚ್.ಡಿ.ರೇವಣ್ಣ, ಕಿರಿಯ ಸಹೋದರ ಪ್ರಜ್ವಲ್‌ ಸ್ಪರ್ಧಿಸಿದ ಚುನಾವಣೆಗಳಲ್ಲಿ ಸಕ್ರಿಯವಾಗಿ ಸೂರಜ್ ಪ್ರಚಾರದಲ್ಲಿ ತೊಡಗಿದ್ದಾರೆ. ಹಲವು ನಿರ್ಧಾರಗಳ ಮೂಲಕ ಪಕ್ಷದ ಜಿಲ್ಲಾ ಘಟಕದಲ್ಲಿ ಜನಪ್ರಿಯರೂ ಆಗಿದ್ದಾರೆ.

ಕುಟುಂಬ ರಾಜಕಾರಣದ ಕುರಿತು ಟೀಕೆಗಳು ವ್ಯಕ್ತವಾದಾಗ, '1960 ದಶಕದಿಂದಲೂ ತಾತ, ತಂದೆ, ಚಿಕ್ಕಪ್ಪ ಹೀಗೆ ನಮ್ಮ ಕುಟುಂಬದ ವಿರುದ್ಧ ನಿರಂತರ ಅಪಪ್ರಚಾರ ಮಾಡಲಾಗುತ್ತಿದೆ. ಕೆಲವರಿಗೆ ಚುನಾವಣಾ ಸಂದರ್ಭದಲ್ಲಿ ಇದೊಂದೇ ಗುರಿ. ಯಾರು ಏನೇ ಮಾಡಿದರೂ, ಇದರಲ್ಲಿ ಯಶಸ್ಸು ಅಥವಾ ಆರೋಪ ಸಾಬೀತು ಮಾಡಲು ಸಾಧ್ಯವಾಗಿದೆಯೇ' ಎಂದು ಡಾ. ಆರ್‌.ಸೂರಜ್‌ ಪ್ರಶ್ನಿಸಿದ್ದರು.

ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು. ಡಿ.10 ರಂದು ನಡೆದ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮತ ಚಲಾಯಿಸಿದ್ದರು. ಶೇ 99.78ರಷ್ಟು ಮತದಾನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.