ADVERTISEMENT

ಸೊಸೆಯ ಸೋಲಿಸಿದ ಅತ್ತೆ, ಕಲ್ಲಹಳ್ಳಿಯಲ್ಲಿ ಮಂಗಳಮುಖಿಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 12:29 IST
Last Updated 30 ಡಿಸೆಂಬರ್ 2020, 12:29 IST
ಮಂಗಳಮುಖಿ ಸುಧಾ
ಮಂಗಳಮುಖಿ ಸುಧಾ   

ಹಾಸನ: ಹಾಸನ ತಾಲ್ಲೂಕಿನ ಹೆರಗು ಗ್ರಾಮ ಪಂಚಾಯಿತಿ ಎಚ್‌.ಭೈರಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅತ್ತೆ ಸೊಂಬಮ್ಮ ಅವರು ಮೂರು ಮತಗಳ ಅಂತರದಿಂದ ಸೊಸೆ ಪವಿತ್ರಾ ಅವರನ್ನು ಸೋಲಿಸಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಬೆಳಗೋಡು ಗ್ರಾಮ ಪಂಚಾಯಿತಿ ಬೆಳಗೋಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಮಂಜುಳಾ ಮೀಸಲು ಕ್ಷೇತ್ರದಲ್ಲಿ ಒಂದು ಮತದಿಂದ ಸೋಲು ಕಂಡಿದ್ದು, ಇದೇ ಕ್ಷೇತ್ರದ ಸಾಮಾನ್ಯ ಅಭ್ಯರ್ಥಿಗಿಂತ ಹೆಚ್ಚು ಮತಗಳನ್ನು ಪಡೆದು ಆಯ್ಕೆಗೊಂಡಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಹೆಚ್ಚು ಮತಗಳನ್ನು ಪಡೆದು ನಿಸಾರ್ ಅಹಮ್ಮದ್‌ ಗೆಲುವು ಸಾಧಿಸಿದ್ದರು. ಮೀಸಲು ಕ್ಷೇತ್ರದಲ್ಲಿ ಸೋಲುಂಡ ಅಭ್ಯರ್ಥಿ ಗಳಿಸಿದ ಮತ ಇದೇ ಕ್ಷೇತ್ರದ ಸಾಮಾನ್ಯ ಅಭ್ಯರ್ಥಿ ಗಳಿಸಿದ್ದ ಮತಕ್ಕಿಂತ ಹೆಚ್ಚು ಇದ್ದಿದ್ದರಿಂದ ಮಂಜುಳಾ ಗೆಲುವಿನ ಅದೃಷ್ಟ ಒಲಿಯಿತು.

ADVERTISEMENT

ಬೆಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಗಲಿ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ದೊಡ್ಡೀರಯ್ಯ ಗೆಲುವು ಸಾಧಿಸಿದರೆ, ಇವರ ಪುತ್ರ ಭುವನಾಕ್ಷ ಹೆಬ್ಬನಹಳ್ಳಿ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ.

ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರ ಸೋದರ ಎಂ.ಎ.ನಾರಾಯಣಸ್ವಾಮಿ ಚನ್ನರಾಯಪಟ್ಟಣತಾಲ್ಲೂಕಿನ ಜಂಬೂರು ಕ್ಷೇತ್ರದಿಂದ ಜಯಗಳಿಸಿದರು.

ಹೊಳೆನರಸೀಪುರ ತಾಲ್ಲೂಕಿನ ಕಡುವಿನಹೊಸಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಯಿ ಕುಮಾರಿ ಸೋಲಿನಿಂದ ಮನನೊಂದ ಮಗ ಅರುಣ್‌ ಆತ್ಮಹತ್ಯೆಗೆ ಯತ್ನಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳಮುಖಿಗೆ ಗೆಲುವು: ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯ್ತಿಯ ರಾಜಾಪುರದ ಮತ ಕ್ಷೇತ್ರದಿಂದ ಮಂಗಳಮುಖಿ ಸುಧಾ ಗೆಲುವು ಸಾಧಿಸಿದ್ದಾರೆ. ಗ್ರಾಮ ಪಂಚಾಯ್ತಿ ಸ್ಥಾಪನೆಯಾಗಿ 26 ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಸುಧಾ ಗೆಲುವಿನ ನಗೆ ಬೀರಿದ್ದಾರೆ.

ಕಳೆದ 26 ವರ್ಷಗಳಿಂದ ಇಲ್ಲಿ ಅವಿರೋಧ ಆಯ್ಕೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.