ADVERTISEMENT

ಎನ್‌ಡಿಎ ಮೈತ್ರಿ | ಮುಖಭಂಗ ನನಗಲ್ಲ, ಬಿಜೆಪಿ ರಾಜ್ಯಾಧ್ಯಕ್ಷರಿಗೆ; ರೇವಣ್ಣ

ಕಾಂಗ್ರೆಸ್‌–ಬಿಜೆಪಿ ಹೊಂದಾಣಿಕೆ ಸವಾಲು ಸ್ವೀಕರಿಸುತ್ತೇನೆ: ಶಾಸಕ ಎಚ್.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 14:07 IST
Last Updated 29 ಏಪ್ರಿಲ್ 2025, 14:07 IST
ಎಚ್‌.ಡಿ. ರೇವಣ್ಣ
ಎಚ್‌.ಡಿ. ರೇವಣ್ಣ   

ಹಾಸನ: ‘ಎನ್‌ಡಿಎ ಮೈತ್ರಿ ಇದೆ ಎಂದು ಈ ಹಿಂದೆ ನಗರಸಭೆ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಕೊಡಲಾಗಿತ್ತು. ಆದರೆ ಈಗ ಬಿಜೆಪಿಯವರು ಅವಿಶ್ವಾಸ ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಿಗೆ ತಿಳಿಸಿದ್ದೇನೆ. ನನಗೆ ಮುಖಭಂಗ ಆಗಿಲ್ಲ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಿಗೆ ಮುಖಭಂಗ ಆಗಿದೆ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಂದು ವರ್ಷದಿಂದ ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂಬುದು ಬಿಜೆಪಿ ಅಧ್ಯಕ್ಷರಿಗೆ ಗೊತ್ತಾಗಲಿ. ಬಿಜೆಪಿ– ಕಾಂಗ್ರೆಸ್ ಸೇರಿ ಜಿಲ್ಲೆಯಲ್ಲಿ ಪ್ರಾದೇಶಿಕ ಪಕ್ಷದ ಮೇಲೆ ಸವಾಲು ಒಡ್ಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ– ಜೆಡಿಎಸ್ ಮೈತ್ರಿ ಇದ್ದರೆ, ಹಾಸನದಲ್ಲಿ ಮಾತ್ರ ಕಾಂಗ್ರೆಸ್– ಬಿಜೆಪಿ ಹೊಂದಾಣಿಕೆ ರಾಜಕೀಯ ಮಾಡುತ್ತಿದೆ. ಆ ಸವಾಲನ್ನು ನಾನು ಸ್ವೀಕರಿಸುತ್ತೇನೆ’ ಎಂದರು.

‘ನಮ್ಮ ಪಕ್ಷದಿಂದ ಜೆಡಿಎಸ್ ಸದಸ್ಯರೆಲ್ಲರಿಗೂ ವಿಪ್ ಜಾರಿ ಮಾಡಲಾಗಿತ್ತು. ಆದರೂ ಅವಿಶ್ವಾಸ ನಿರ್ಣಯದ ಪರ ಅಧ್ಯಕ್ಷರು ಮತ ಚಲಾಯಿಸಿಲ್ಲ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

‘ಮುಸ್ಲಿಂ ಸಮುದಾಯದವರಿಗೆ ನಗರಸಭೆ ಅಧ್ಯಕ್ಷ ಸ್ಥಾನ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಎಂ. ಚಂದ್ರೇಗೌಡ ಮೂರು ತಿಂಗಳು ಅಧಿಕಾರ ಸಾಕು ಎಂದಿದ್ದರು. ಆದರೆ ಆರು ತಿಂಗಳವರೆಗೆ ಮುಂದುವರಿದಿದ್ದು, ಈ ಬಗ್ಗೆ ಮಾತುಕತೆ ಆಗಿಲ್ಲ ಎಂದರೆ ಹಾಸನಾಂಬೆ ಮುಂದೆ ಆಣೆ ಮಾಡಲಿ’ ಎಂದು ಸವಾಲು ಹಾಕಿದರು.

ಅಧ್ಯಕ್ಷರು ಅದೆಷ್ಟು ದಿನ ಅಧಿಕಾರದಲ್ಲಿ ಇರುತ್ತಾರೆ. ಕಾಂಗ್ರೆಸ್- ಬಿಜೆಪಿ, ಇವರು ಸೇರಿ ಅದೇನು ಕಡಿದು ಕಟ್ಟೆ ಹಾಕುತ್ತಾರೆ ನೋಡೋಣ ಎಂದು ಸವಾಲು ಹಾಕಿದ ರೇವಣ್ಣ, ನಮ್ಮ ಪಕ್ಷದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಜೊತೆ ನಾನು ಇರುತ್ತೇನೆ. ಎಲ್ಲರೂ ಪ್ರಾಮಾಣಿಕವಾಗಿ ಮತ ಚಲಾಯಿಸಿದ್ದು, ಅವಿಶ್ವಾಸ ನಿರ್ಣಯದ ಪರ 21 ಮತ ಬಂದಿವೆ. ನನಗೆ ಮುಖಭಂಗವಾಗಿಲ್ಲ ಎಂದು ಹೇಳಿದರು.

ಪಹಲ್ಗಾಮ್ ನರಮೇಧ ಖಂಡನೆ

‘ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧವನ್ನು ಉಗ್ರವಾಗಿ ಖಂಡಿಸುತ್ತೇನೆ. ಎಲ್ಲ ಧರ್ಮವನ್ನು ಸಮನಾಗಿ ನೋಡಬೇಕು. ಅಲ್ಲಿ ಯಾರೋ ಮುಸ್ಲಿಂ ಸಮುದಾಯದವರು ನರಮೇಧ ಮಾಡಿದರು ಎಂದರೆ, ಇಲ್ಲಿರುವ ಮುಸ್ಲಿಮರನ್ನು ನಿಂದಿಸಲು ಆಗುವುದಿಲ್ಲ. ಈ ಪ್ರಕರಣ ಸಂಬಂಧ ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ನಾವು ಬದ್ಧ’ ಎಂದರು.

ಹಂಚಿಕೆಯಾಗದ ಅನುದಾನ

‘ಒಂದು ವರ್ಷದಿಂದ ಜಿಲ್ಲೆಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಜಿಲ್ಲಾ ಪಂಚಾಯಿತಿಗೆ ಬಂದಿರುವ ಅನುದಾನ ಬಿಡುಗಡೆ ಆಗುತ್ತಿಲ್ಲ’ ಎಂದು ಎಚ್.ಡಿ. ರೇವಣ್ಣ ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಸೇರಿದಂತೆ ಇತರ ಇಲಾಖೆಗಳಿಗೆ ಬಂದ ಹಣವನ್ನು ಸರಿಯಾಗಿ ಹಂಚಿಕೆ ಮಾಡದಿದ್ದರೆ, ಕಾನೂನು ರೀತಿ ಏನು ಮಾಡಬೇಕೋ ಮಾಡುತ್ತೇನೆ ಎಂದು ತಿಳಿಸಿದರು.

‘ಕಾಲೇಜುಗಳಿಗೆ ಮೂಲಸೌಕರ್ಯ ಕೊರತೆ’ ಕಾಲೇಜುಗಳು ಪ್ರಾರಂಭವಾಗಿವೆ. ಆದರೆ ಉಪನ್ಯಾಸಕರು ಸೇರಿದಂತೆ ಮೂಲಸೌಕರ್ಯದ ಕೊರತೆ ಇದೆ. ಡೆಸ್ಕ್ ಕಂಪ್ಯೂಟರ್ ಸೇರಿದಂತೆ ಮೂಲಸೌಕರ್ಯಗಳೇ ಇಲ್ಲ. ಸಿಬ್ಬಂದಿ ಇಲ್ಲದೇ ಹಲವು ಕಾಲೇಜಿನಲ್ಲಿ ಪ್ರಾಂಶುಪಾಲರೇ ಕಸ ಗುಡಿಸುತ್ತಿದ್ದಾರೆ ಎಂದು ಎಚ್‌.ಡಿ.ರೇವಣ್ಣ ಟೀಕಿಸಿದರು. ‘ಸರ್ಕಾರದ ಇಂತಹ ನಡೆಯನ್ನು ಗಮನಿಸಿದರೆ ಖಾಸಗಿ ಆಡಳಿತ ಮಂಡಳಿಗಳ ಜೊತೆ ಶಾಮೀಲಾಗಿರುವ ಅನುಮಾನವಿದೆ. ವಿಶ್ವವಿದ್ಯಾಲಯಗಳ ಕುಲಪತಿಗಳು ಮಹಾರಾಜರ ರೀತಿ ಊಟ ತಿಂಡಿ ಮಾಡಿಕೊಂಡಿದ್ದಾರೆ. ಆದರೆ ಕಾಲೇಜುಗಳನ್ನು ದುಸ್ಥಿತಿಗೆ ತಂದಿದ್ದು ಮೂಲಸೌಕರ್ಯ ಸೇರಿದಂತೆ ಉಪನ್ಯಾಸಕರ ನೇಮಕಾತಿ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು. ‘ಜಿಲ್ಲೆ ಸೇರಿದಂತೆ ರಾಜ್ಯದಲ್ಲಿಯೂ ಪ್ರಾಥಮಿಕ ಶಿಕ್ಷಣ ಕುಸಿದಿದೆ. ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಮುಂದೆ ಕಾಲೇಜುಗಳನ್ನು ಮುಚ್ಚುವ ಸ್ಥಿತಿ ದೂರವಿಲ್ಲ. ಹಲವು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿದೆ. ಈ ಸಂಬಂಧ ಸಚಿವರಿಗೆ ಪತ್ರ ಬರೆಯಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.