
ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛ ಮಾಡಿದ ಹೊಯ್ಸಳ ಉತ್ಸವ ನಡೆಸಲು ನಿರ್ಮಿಸಿರುವ ಪುಷ್ಪಗಿರಿ ತಪ್ಪಲಿನ ಬಯಲು ರಂಗ ಮಂದಿರ
ಹಳೇಬೀಡು: ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಕಲೆ– ಸಂಸ್ಕೃತಿ ಬಿಂಬಿಸುವ ಉದ್ದೇಶದಿಂದ ಹೊಯ್ಸಳ ಉತ್ಸವ ನಡೆಸುವುದಕ್ಕಾಗಿ ಪುಷ್ಪಗಿರಿ ತಪ್ಪಲಿನಲ್ಲಿ ನಿರ್ಮಿಸಿರುವ ಬಯಲು ರಂಗ ಮಂದಿರಕ್ಕೆ ಮರು ಜೀವ ದೊರಕಿದೆ.
ಭಂಡಾರಿಕಟ್ಟೆ ಗ್ರಾಮದಲ್ಲಿ ಕಳೆದ ವಾರ ಆಯೋಜಿಸಿದ್ದ ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ವಿಶೇಷ ಶಿಬಿರದ ವಿದ್ಮಾರ್ಥಿಗಳು ಗಿಡ–ಗಂಟಿಗಳಿಂದ ಮುಚ್ಚುತ್ತಿದ್ದ ಪುಷ್ಪಗಿರಿ ತಪ್ಪಲಿನ ಕಲಾ ಮಂದಿರವನ್ನು ಬೆಳಕಿಗೆ ಬರುವಂತೆ ಮಾಡಿದ್ದಾರೆ.
8 ವರ್ಷದ ಹಿಂದೆ ಹೊಯ್ಸಳ ಉತ್ಸವ ನಡೆದಾಗ, ಜಿಲ್ಲಾಡಳಿತ ಪಾಳು ಬಿದ್ದ ಬಯಲು ರಂಗಮಂದಿರವನ್ನು ಸ್ವಚ್ಛ ಮಾಡಿತ್ತು. ಉತ್ಸವ ಮುಗಿದ ನಂತರ ರಂಗ ಮಂದಿರವನ್ನು ತಿರುಗಿ ನೋಡುವವರಿಲ್ಲದೇ ಸೊರಗಿತ್ತು. ಕಲೆಯನ್ನು ಪ್ರತಿಬಿಂಬಿಸುವ ವೇದಿಕೆ ಸ್ಥಿತಿಗತಿ ನೋಡುವವರಿಲ್ಲದೇ ಸೊರಗಿ ಹೋಗಿತ್ತು. ಸಂಗಿತ, ನೃತ್ಯ ಅರಳಿಸಲು ಅನುಕೂಲ ಆಗುವಂತೆ ಶಿಬಿರಾರ್ಥಿಗಳು ಕಲಾಮಂದಿರ ಸಿದ್ಧ ಮಾಡಿದ್ದಾರೆ.
ಕಲಾಮಂದಿರದಲ್ಲಿ ಮಹಿಳಾ ಹಾಗೂ ಪುರುಷ ಕಲಾವಿದರ ಪ್ರತ್ಯೇಕ ಪ್ರಸಾಧನ ಕೊಠಡಿಗಳಿವೆ. ದೊಡ್ಡದಾದ ವರಾಂಡಾ ಇದೆ. ವೇದಿಕೆ ವಿಶಾಲವಾಗಿದ್ದು, ಹೆಚ್ಚು ಕಲಾವಿದರು ನೃತ್ಯ ಮೊದಲಾದ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಅನುಕೂಲವಾಗಿದೆ. ವೇದಿಕೆಯ ಎದುರಿನ ಬದಿಯಲ್ಲಿ ಸ್ಟೇಡಿಯಂ ರೀತಿಯಲ್ಲಿ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲಾಗಿದೆ. ಸುಸಜ್ಜಿತ ಕಲಾಮಂದಿರದಲ್ಲಿ ನಿರಂತರ ಕಲಾ ಚಟುವಟಿಕೆ ನಡೆಯುವಂತಾಗಲಿ ಎಂದು ಶಿಬಿರಾರ್ಥಿಗಳು ಸ್ವಚ್ಛತಾ ಕೆಲಸ ನಡೆಸಿದ್ದಾರೆ.
ಪ್ರೇಕ್ಷಕರ ಗ್ಯಾಲರಿಯ ಮೆಟ್ಟಿಲುಗಳ ಮೇಲೆ ಮರದಂತೆ ಬೆಳೆದಿದ್ದ ಗಿಡಗಳನ್ನು ಕತ್ತರಿಸುವುದು ಸವಾಲಾಗಿತ್ತು. ಅಕ್ರಮ ಚಟುವಟಿಕೆ ತಾಣ ಮಾಡಿಕೊಂಡವರು ಎಲ್ಲೆಂದರಲ್ಲಿ ಮದ್ಯದ ಬಾಟಲಿ ಒಡೆದ ಚೂರುಗಳು ರಾಶಿ ಮಾಡಿದ್ದರು. ಬೀಡಿ, ಸಿಗರೇಟು ತುಂಡುಗಳು ರಾಶಿಯಾಗಿದ್ದನ್ನು ನೋಡಿ ಶಿಬಿರಾರ್ಥಿಗಳು ಬೇಸರ ವ್ಯಕ್ತಪಡಿಸಿದರು. ಮದ್ಯ, ಧೂಮಪಾನದ ದುಷ್ಪರಿಣಾಮ ಕುರಿತು ಪ್ರಾಧ್ಯಾಪಕರೊಂದಿಗೆ ಮಾಹಿತಿ ಪಡೆಯುತ್ತ ಶುಚಿಗೊಳಿಸಿದರು ಎಂದು ಭಂಡಾರಿಕಟ್ಟೆ ಗ್ರಾಮಸ್ಥರು ತಿಳಿಸಿದರು.
ಶಿಬಿರಾರ್ಥಿಗಳು ಶ್ರದ್ಧೆಯಿಂದ ಕೆಲಸ ಮಾಡಿದ್ದರಿಂದ ತಿಂಗಳು ಮಾಡುವ ಕೆಲಸ ಒಂದು ವಾರಕ್ಕೆ ಮುಗಿಯಿತು. ಕಲಾ ಚಟುವಟಿಕೆಯ ಕಟ್ಟಡ ಸ್ವಚ್ಛ ಮಾಡಿದ್ದು ಹೆಮ್ಮೆಯ ವಿಚಾರ.ಡಾ.ಶ್ರೀನಿವಾಸ ಬಿ.ಕೆ. ಪ್ರಾಂಶುಪಾಲ
ಭಂಡಾರಿಕಟ್ಟೆ ಎನ್ಎಸ್ಎಸ್ ಶಿಬಿರ ವಿಭಿನ್ನವಾಗಿತ್ತು. ಹೊಯ್ಸಳ ಉತ್ಸವದ ಕಲಾ ಭವನ ಶಾಲೆ ಅಂಗನವಾಡಿ ಸ್ವಚ್ಛ ಮಾಡಿದ್ದರಿಂದ ಶಿಬಿರಾರ್ಥಿಗಳಿಗೆ ಉತ್ತಮ ಅನುಭವ ಸಿಕ್ಕಿತು.ಶಂಕರಪ್ಪ ಎಸ್.ಆರ್. ಶಿಬಿರಾಧಿಕಾರಿ
ದೇಶದ ವಿವಿಧ ಭಾಗದ ಪ್ರಸಿದ್ದ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದ ಕಲಾ ಭವನಕ್ಕೆ ಮರು ಜೀವ ನೀಡಿದ್ದರಿಂದ ಸಂತಸವಾಯಿತು.ದರ್ಶನ್ ಕೆ.ಎಲ್. ಶಿಬಿರಾರ್ಥಿ
ದೀಪೋತ್ಸವ ಆಕರ್ಷಣೆ ಶಿಬಿರದ ದೀಪೋತ್ಸವ ವಿಭಿನ್ನವಾಗಿ ಮೂಡಿ ಬಂತು. ದೇಶಭಕ್ತಿ ಮೂಡುವ ನಾಡು– ನುಡಿ ಬಿಂಬಿಸುವ ಆಕೃತಿಯಲ್ಲಿ ಶಿಬಿರಾರ್ಥಿಗಳು ದೀಪಗಳನ್ನು ಜೋಡಿಸಿ ಗಮನ ಸೆಳೆದರು. ಶಿಬಿರವಾಣಿ ಕಾರ್ಯಕ್ರಮ ಜ್ಞಾನ ಬಂಡಾರದ ನಿಧಿಯಾಗಿತ್ತು. ಪ್ರಾಧ್ಯಾಪಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಶಿಬಿರಾರ್ಥಿಗಳು ಸಾಮಾನ್ಯ ಜ್ಞಾನ ಸಂಪಾದಿಸಿದರು. ಪುಷ್ಪಗಿರಿಯ ಬಯಲು ರಂಗ ಮಂದಿರ ಮಾತ್ರವಲ್ಲದೇ ಭಂಡಾರಿಕಟ್ಟೆ ಗ್ರಾಮದ ಅಂಗನವಾಡಿ ಶಾಲಾ ಕಟ್ಟಡಗಳನ್ನು ವಿದ್ಯಾರ್ಥಿಗಳು ಸ್ವಚ್ಛ ಮಾಡಿದರು. 7 ದಿನದ ಶಿಬಿರದಲ್ಲಿ ಭಾಗವಹಿಸಿದ್ದ 56 ವಿದ್ಯಾರ್ಥಿಗಳು ಗ್ರಾಮಸ್ಥರಿಂದ ಬೇಷ್ ಎನಿಸಿಕೊಂಡರು. ಶಿಬಿರಾಧಿಕಾರಿಯಾಗಿ ಶಂಕರಪ್ಪ ಎಸ್.ಆರ್. ಸಹ ಶಿಬಿರಾಧಿಕಾರಿಯಾಗಿ ಡಿಂಪಲ್ ವಿ. ಚಂದ್ರಶೇಖರ ಸಿಂಗ್ ಕೆಲಸ ಮಾಡಿದರು. ಗೋಣಿಸೋಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಪಿಡಿಒ ರಘುನಾಥ್ ಶಿಬಿರಕ್ಕೆ ಸಹಕರಿಸಿದರು ಎಂದು ಪ್ರಾಂಶುಪಾಲ ಡಾ.ಶ್ರೀನಿವಾಸ ಬಿ.ಕೆ. ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.