ADVERTISEMENT

ತಹಶೀಲ್ದಾರ್ ಕಚೇರಿಗೆ ಬೀಗ ಹಾಕಲು ಯತ್ನ: ಪ್ರತಿಭಟನಕಾರರು ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 14:19 IST
Last Updated 14 ಮೇ 2025, 14:19 IST
ಚನ್ನರಾಯಪಟ್ಟಣದಲ್ಲಿ ತಹಶೀಲ್ದಾರ್ ಕಚೇರಿಗೆ ಬೀಗ ಹಾಕಲು ಯತ್ನಿಸಿದ ಪ್ರತಿಭಟನಕಾರರನ್ನು ಪ್ರವೇಶ ದ್ವಾರದ ಗೇಟ್ ಬಳಿ ಬುಧವಾರ ಪೊಲೀಸರು ವಶಕ್ಕೆ ಪಡೆದರು
ಚನ್ನರಾಯಪಟ್ಟಣದಲ್ಲಿ ತಹಶೀಲ್ದಾರ್ ಕಚೇರಿಗೆ ಬೀಗ ಹಾಕಲು ಯತ್ನಿಸಿದ ಪ್ರತಿಭಟನಕಾರರನ್ನು ಪ್ರವೇಶ ದ್ವಾರದ ಗೇಟ್ ಬಳಿ ಬುಧವಾರ ಪೊಲೀಸರು ವಶಕ್ಕೆ ಪಡೆದರು   

ಚನ್ನರಾಯಪಟ್ಟಣ: ತಹಶೀಲ್ದಾರ್ ಕಚೇರಿಗೆ ಬೀಗ ಹಾಕಲು ತೆರಳುತ್ತಿದ್ದ ಪ್ರತಿಭಟನಕಾರರನ್ನು ಪ್ರವೇಶ ದ್ವಾರದ ಗೇಟ್ ಬಳಿ ಪೊಲೀಸರು ಬುಧವಾರ ವಶಕ್ಕೆ ಪಡೆದರು.

ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆಯ ಸದಸ್ಯರು ಇಲ್ಲಿನ ತಾಲ್ಲೂಕು ಕಚೇರಿ ಬಳಿ ಕಳೆದ 13 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಮೇ 14ರಂದು ತಾಲ್ಲೂಕು ಕಚೇರಿಗೆ ಬೀಗ ಹಾಕಲಾಗುವುದು ಎಂದು ಪ್ರತಿಭಟನಕಾರರು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಡಿವೈಎಸ್‍ಪಿ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

‘ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಅದನ್ನು ತೊಡೆದು ಹಾಕಬೇಕು. ಸಾರ್ವಜನಿಕರು ಮತ್ತು ರೈತರ ಕೆಲಸ ವಿಳಂಬವಾಗುತ್ತಿದೆ. ಜತೆಗೆ ರಾಜ್ಯ ಸರ್ಕಾರದ ವಿರುದ್ಧ ಅಸಂಸದೀಯ ಭಾಷೆ ಉಪಯೋಗಿಸಿರುವ ತಹಶೀಲ್ದಾರ್ ವಿ.ಎಸ್. ನವೀನ್ ಕುಮಾರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕಂದಾಯ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ, ಹಾಸನ ಕ್ಷೇತ್ರದ ಸಂಸದ, ಸ್ಥಳೀಯ ಶಾಸಕ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

ನಂತರ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆಯ ಸಂಚಾಲಕ ಎಚ್.ಎಸ್. ಮಂಜುನಾಥ್ ನೇತೃತ್ವದಲ್ಲಿ ಜಿಲ್ಲಾ ಸಿಐಟಿಯು ಅಧ್ಯಕ್ಷ ಧರ್ಮೇಶ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ಸಿ.ಜಿ. ರವಿ, ಶಂಕರ್, ಚಂದ್ರು, ವಾಸು ಕಲ್ಕೆರೆ, ಚಂದ್ರಹಾಸ, ತೇಜಸ್‍ಗೌಡ ಸೇರಿ ಪ್ರತಿಭಟನಕಾರರು ಘೋಷಣೆ ಕೂಗುತ್ತ, ತಹಶೀಲ್ದಾರ್ ಕಚೇರಿಗೆ ಬೀಗ ಹಾಕಲು ತೆರಳುತ್ತಿದ್ದರು. ಅವರನ್ನು ಪ್ರವೇಶದ್ವಾರದ ಗೇಟ್ ಬಳಿ ಪೊಲೀಸರು ತಡೆದು ವಶಕ್ಕೆ ಪಡೆದರು. 

ಪೊಲೀಸ್ ವಾಹನ ಹತ್ತುವಾಗಲೂ ತಹಶೀಲ್ದಾರ್ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು. ಪ್ರತಿಭಟನಾ ಸ್ಥಳದಲ್ಲಿ ಹಾಕಲಾಗಿದ್ದ ಶಾಮಿಯಾನವನ್ನು ತೆರವುಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.