ADVERTISEMENT

ಬೇಲೂರು: ಕೆಡಿಪಿ ಸಭೆಯಲ್ಲಿ ಮಾತಿನ ಚಕಮಾಕಿ

ಶಾಸಕ ಎಚ್.ಕೆ.ಸುರೇಶ್ ಮತ್ತು ದೇಶಾಣಿ ಆನಂದ್ ಹಾಗೂ ಕೆಡಿಪಿ ಸದಸ್ಯರ ನಡುವೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 1:40 IST
Last Updated 11 ನವೆಂಬರ್ 2025, 1:40 IST
ಬೇಲೂರಿನ ತಾಲ್ಲೂಕು ಪಂಚಾಯಿತಿ ಸಂಭಾಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ  ತಾಲ್ಲೂಕು ಘಟಕದ ಅಧ್ಯಕ್ಷ ದೇಶಾಣಿ ಆನಂದ್, ಕೆಡಿಪಿ ಸದಸ್ಯರಾದ ಚೇತನ್, ನಂದೀಶ್, ನವೀನ್ ನಡುವೆ ಮಾತಿನ ಚಕಮಾಕಿ ನಡೆಯಿತು 
ಬೇಲೂರಿನ ತಾಲ್ಲೂಕು ಪಂಚಾಯಿತಿ ಸಂಭಾಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ  ತಾಲ್ಲೂಕು ಘಟಕದ ಅಧ್ಯಕ್ಷ ದೇಶಾಣಿ ಆನಂದ್, ಕೆಡಿಪಿ ಸದಸ್ಯರಾದ ಚೇತನ್, ನಂದೀಶ್, ನವೀನ್ ನಡುವೆ ಮಾತಿನ ಚಕಮಾಕಿ ನಡೆಯಿತು    

ಬೇಲೂರು: ಇಲ್ಲಿನ ತಾಲ್ಲೂಕು ಪಂಚಾಯಿತಿ ಸಂಭಾಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ದೇಶಾಣಿ ಆನಂದ್ ನಡುವೆ ಮಾತಿನ ಚಕಮಾಕಿ ನಡೆಯಿತು.

ಸಭೆಯಲ್ಲಿ ಸೆಸ್ಕ್ ಇಲಾಖೆ ಮಾಹಿತಿ ಸಂದರ್ಭದಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ‘ತಾಲ್ಲೂಕಿನಲ್ಲಿ ವಿದ್ಯುತ್ ಉಪಕೇಂದ್ರಗಳನ್ನು ನಾನು ತಂದಿದ್ದು, ಮುಖ್ಯಮಂತ್ರಿ, ಸಚಿವರ ಬಳಿ ಹೋಗದೇ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಂಡು ಬಂದಿದ್ದೇನೆ ಎಂದು ಬಿ.ಶಿವರಾಂ ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಹೇಳುತ್ತಿದ್ದಾರೆ. ಸರ್ಕಾರ ಹಣ ನೀಡದೆ ಕೆಲಸಗಳು ಆಗಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಿಸಲು ನಾನು ಇಂಧನ ಸಚಿವ ಕೆ.ಜೆ.ಜಾರ್ಜ್ ಬಳಿ ವಿನಂತಿಸಿ, ಅನುದಾನ ತಂದಿದ್ದೇನೆ ಎಂಬ ಶಾಸಕ ಮಾತಿಗೆ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ದೇಶಾಣಿ ಆನಂದ್ ಹಾಗೂ ಕೆಡಿಪಿ ಸದಸ್ಯ ಬಿಕ್ಕೋಡು ಚೇತನ್, ನಂದೀಶ್  ಸಿಟ್ಟಿಗೆದ್ದರು.

ADVERTISEMENT

‘ಶಾಸಕರೇನು ಸರ್ವಾಧಿಕಾರಿಯಲ್ಲ. ಕಾಂಗ್ರೆಸ್ ಸರ್ಕಾರ ಇರುವುದರಿಂದಲೇ ಮಾಜಿ ಸಚಿವ ಶಿವರಾಂ ಅಭಿವೃದ್ದಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಸುತ್ತಿದ್ದಾರೆ. ಆದರೆ ನೀವು ತಾಲ್ಲೂಕಿನ ಅಧಿಕಾರಿಗಳನ್ನು ಸಾರ್ವಜನಿಕವಾಗಿ ನಿಂದಿಸಿ ಅವರನ್ನು ಅವಹೇಳನ ಮಾಡುತ್ತಿದ್ದೀರಿ. ಇದು ಒಳ್ಳೆಯ ಬೆಳವಣಿಗೆಯಲ್ಲ. ಅವರನ್ನು ಸೌಜನ್ಯದಿಂದ ನಡೆಸಿಕೊಂಡಾಗ ಮಾತ್ರ ಅಭಿವೃದ್ದಿಗೆ ಪೂರಕವಾಗಿರುತ್ತದೆ’ ಎಂದರು.

ಕೆಡಿಪಿ ಸದಸ್ಯ ಚೇತನ್ ಮಾತನಾಡಿ, ‘ನಿಮ್ಮ ಭ್ರಷ್ಟಾಚಾರವನ್ನು ಶೀಘ್ರದಲ್ಲೇ ಬಯಲು ಮಾಡಲಾಗುವುದು’ ಎಂದು ಶಾಸಕ ಎಚ್.ಕೆ.ಸುರೇಶ್‌ ಅವರಿಗೆ ಸವಾಲು ಹಾಕಿದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಪಟ್ಟಣದ ಗೆಂಡೇಹಳ್ಳಿ ರಸ್ತೆ ವಿಸ್ತಾರಣೆ ಮಾಡುತ್ತಿದ್ದು ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿಗ್ಗಾವಿ ಅಭಿವೃದ್ದಿ ಕಾರ್ಯಕ್ಕೆ ಸಹಕಾರ ನೀಡದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.  

ಸಭೆಯಲ್ಲಿ ತಹಶೀಲ್ದಾರ್ ಶ್ರೀಧರ್ ಕಂಕನವಾಡಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.