ADVERTISEMENT

ಹಾಸನ: ಕಣ್ಮನ ಸೆಳೆಯುತ್ತಿರುವ ಕಲಾಕೃತಿಗಳು

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ನಿರ್ಮಾಣ: ಗ್ರಾಹಕರಿಂದ ಹೆಚ್ಚುತ್ತಿರುವ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 4:46 IST
Last Updated 16 ನವೆಂಬರ್ 2025, 4:46 IST
ಹಾಸನದ ಗವೇನಹಳ್ಳಿ ಬಳಿ ಹಾದು ಹೋಗಿರುವ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ಮಾರಾಟಕ್ಕೆ ಸಿದ್ಧವಾಗಿರುವ ಕಲಾಕೃತಿಗಳು.
ಹಾಸನದ ಗವೇನಹಳ್ಳಿ ಬಳಿ ಹಾದು ಹೋಗಿರುವ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ಮಾರಾಟಕ್ಕೆ ಸಿದ್ಧವಾಗಿರುವ ಕಲಾಕೃತಿಗಳು.   

ಹಾಸನ: ಮನೆ, ಕಚೇರಿ, ಸಭಾಂಗಣ ಹೀಗೆ ನಾನಾ ಕಡೆಗಳಲ್ಲಿ ಪಿಒಪಿ ಹಾಗೂ ಜಿಪ್ಸ್ಂನಿಂದ ತಯಾರಿಸಿದ ಕಲಾಕೃತಿಗಳು ಜನರನ್ನು ಆಕರ್ಷಿಸುತ್ತಿದ್ದು, ಕಡಿಮೆ ಬೆಲೆಗೆ ಉತ್ತಮ ಆಲಂಕಾರಿಕ ವಸ್ತುಗಳನ್ನು ಖರೀದಿಸಲು ನಗರದ ನಿವಾಸಿಗಳು ಮುಂದಾಗಿದ್ದಾರೆ.

ನಗರದ ಗವೇನಹಳ್ಳಿ ಬಳಿ ಹಾದು ಹೋಗಿರುವ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿಯೇ ರಾಜಸ್ಥಾನದ ರಮೇಶ್ ಎಂಬುವವರು ಹಲವು ದಿನಗಳಿಂದ ಈ ರೀತಿಯ ಕಲಾಕೃತಿಗಳನ್ನು ತಯಾರಿಸುತ್ತಿದ್ದಾರೆ.

ಬಿಡಿಯಾಗಿ ಹಾಗೂ ಸಗಟು ಲೆಕ್ಕದಲ್ಲಿ ವಿವಿಧ ಬಗೆಯ ಕಲಾಕೃತಿಗಳನ್ನು ತಯಾರಿಸಿ ಕೊಡುತ್ತಾರೆ. ಇವರೊಂದಿಗೆ ಐದಾರು ಮಂದಿ ಮಹಿಳೆಯರು ಹಾಗೂ ಯುವಕರಿಗೆ ಉದ್ಯೋಗ ಒದಗಿಸಿದ್ದಾರೆ.

ADVERTISEMENT

ಕಲಾಕೃತಿಗಳ ಅಳತೆಗೆ ತಕ್ಕಂತೆ ₹ 50 ದಿಂದ ₹ 1 ಸಾವಿರದವರೆಗೆ ದರ ನಿಗದಿ ಮಾಡಿದ್ದು, ಬುದ್ಧ, ಬಸವಣ್ಣ, ಗಣೇಶ, ಕುಬೇರ, ರಾಧಾಕೃಷ್ಣ, ಆನೆ, ಹಸು, ಹೋರಿ, ಕೃಷ್ಣ, ಆದಿಯೋಗಿ ಸೇರಿದಂತೆ ಅನೇಕ ಕಲಾಕೃತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಹಸು– ಕರು, ಹೋರಿ, ಕುಬೇರ, ಬುದ್ಧನ ಕಲಾಕೃತಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅವುಗಳನ್ನು ಹೆಚ್ಚು ತಯಾರಿಸಲಾಗುತ್ತಿದೆ.

20 ವರ್ಷದಿಂದ ಇದೇ ವೃತ್ತಿ ಮಾಡುತ್ತಿರುವ ರಮೇಶ್‌, ಇಂತಿಷ್ಟು ತಿಂಗಳು ಮಾತ್ರ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಬಾಡಿಗೆ ಪಡೆದ ಜಾಗದಲ್ಲಿ ತಯಾರಿಕೆ ಘಟಕಗಳನ್ನು ತೆರೆಯುತ್ತಾರೆ.

‘ಇದೀಗ ಹಾಸನದಲ್ಲಿ ಕಲಾಕೃತಿ ತಯಾರಿಕೆಯಲ್ಲಿ ನಿರತವಾಗಿದ್ದು, ಸಗಟು ಲೆಕ್ಕದಲ್ಲಿ ಅರಸೀಕೆರೆ, ತಿಪಟೂರು, ಬೆಂಗಳೂರು, ದಾವಣಗೆರೆ, ಚನ್ನಗಿರಿ ಸೇರಿದಂತೆ ನಾನಾ ಕಡೆಗೆ ಬೇಡಿಕೆ ಅನುಸಾರವಾಗಿ ಕಲಾಕೃತಿಗಳನ್ನು ತಯಾರಿಸಿ ಕೊಡಲಾಗುತ್ತದೆ’ ಎನ್ನುತ್ತಾರೆ ರಮೇಶ್.

ಪ್ರಮುಖವಾಗಿ ಜಿಪ್ಸ್ಂ ಮತ್ತು ಪಿಒಪಿ ಮಿಶ್ರಣದೊಂದಿಗೆ ಕಲಾಕೃತಿಗಳ ಅಚ್ಚನ್ನು ಮಾಡಿ, ನಂತರ ಅವುಗಳಿಗೆ ವಿವಿಧ ಬಗೆಯ ಬಣ್ಣಗಳನ್ನು ಸ್ಪ್ರೇಯರ್ ಮೂಲಕ ಸಿಂಪಡಿಸುವ ಮೂಲಕ ಆಕರ್ಷಕವಾಗಿ ಕಾಣುವಂತೆ ಮಾಡುತ್ತಾರೆ. ಈ ಕಲಾಕೃತಿಗಳಿಗೆ ಸಾಕಷ್ಟು ಬೇಡಿಕೆ ಇದ್ದು, ಯಾವುದೇ ಬಗೆಯ ಹಳೆಯ ವಿಗ್ರಹಗಳು, ಕಲಾಕೃತಿಗಳಿದ್ದರೆ, ಅವುಗಳ ಮಾದರಿಯನ್ನು 15 ರಿಂದ 30 ದಿನಗಳ ಒಳಗೆ ತಯಾರಿಸಿ ಕೊಡಲಾಗುತ್ತಿದೆ ಎಂದು ಅವರು ಹೇಳುತ್ತಾರೆ.

ಹೋರಿ, ಹಸು, ಬುದ್ಧ ಸೇರಿದಂತೆ ಸಣ್ಣ ಕಲಾಕೃತಿಗಳು ಹೆಚ್ಚು ವ್ಯಾಪಾರವಾಗುತ್ತವೆ. ಹಾಗಾಗಿ ಸಗಟು ದರದಲ್ಲಿ ಖರೀದಿ ಮಾಡಲಾಗುತ್ತಿದೆ ಎಂದು ತಿಪಟೂರಿನ ಸಗಟು ವ್ಯಾಪಾರಿ ನಿರಂಜನ್‌ ಹೇಳಿದರು.

ಹಾಸನದ ಗವೇನಹಳ್ಳಿ ಬಳಿ ಹಾದು ಹೋಗಿರುವ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ಮಾರಾಟಕ್ಕೆ ಸಿದ್ಧವಾಗಿರುವ ಕಲಾಕೃತಿಗಳು.
ಹಾಸನದ ಗವೇನಹಳ್ಳಿ ಬಳಿ ಹಾದು ಹೋಗಿರುವ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ಮಾರಾಟಕ್ಕೆ ಸಿದ್ಧವಾಗಿರುವ ಕಲಾಕೃತಿಗಳು.
ಇಲ್ಲಿ ತಯಾರಿಸುವ ಪ್ರತಿಯೊಂದು ಕಲಾಕೃತಿಯು ಆಕರ್ಷಕವಾಗಿದ್ದು ಮನೆಯ ಪ್ರವೇಶ ದ್ವಾರ ಹಾಲ್ ಕೋಣೆಗಳಲ್ಲಿ ಇರಿಸಲು ಸೂಕ್ತವಾಗಿವೆ
ಧರ್ಮೇಶ್ ಜಿ.ಡಿ. ಗವೇನಹಳ್ಳಿ ನಿವಾಸಿ
ಕಲಾಕೃತಿಗಳು ಮನೆಯ ಅಲಂಕಾರಕ್ಕೆ ಹೇಳಿ ಮಾಡಿಸಿದಂತಿವೆ. ಕೃಷ್ಣ–ರಾಧೆ ಬುದ್ಧ ಪ್ರಾಣಿಗಳ ಕಲಾಕೃತಿಗಳು ಚೆನ್ನಾಗಿ ಮೂಡಿ ಬಂದಿವೆ ದರವೂ ದುಬಾರಿ ಆಗಿಲ್ಲ
ಮಂಜುನಾಥ ಬೆಂಗಳೂರಿನ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.