ADVERTISEMENT

ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹ, ಜಿಲ್ಲಾಡಳಿತಕ್ಕೆ ಎಐಡಿಎಸ್‌ಒ ಸಂಘಟನೆ ಮನವಿ

ಜಿಲ್ಲಾಡಳಿತಕ್ಕೆ ಎಐಡಿಎಸ್‌ಒ ಸಂಘಟನೆ ಮನವಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 12:28 IST
Last Updated 30 ಜನವರಿ 2021, 12:28 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.   

ಹಾಸನ: ವಿದ್ಯಾರ್ಥಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿಎಸ್ಒ) ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಹಾಸ್ಟೆಲ್ ಪ್ರಾರಂಭಿಸಲು ವಿಳಂಬವಾಗುತ್ತಿದ್ದು, ಬಸ್ ಹಾಗೂ ಬಸ್‌ ಪಾಸ್ ಕುರಿತ ಸಮಸ್ಯೆ ಬಗೆ ಹರಿಸಬೇಕು ಮತ್ತು ಕಾಲೇಜುಗಳಿಗೆ ಬೋಧಕ ಸಿಬ್ಬಂದಿ ನೇಮಿಸಬೇಕು ಎಂದು ಆಗ್ರಹಿಸಿದರು.

ಶಾಲಾ, ಕಾಲೇಜುಗಳ ಶೈಕ್ಷಣಿಕ ವರ್ಷ ಈಗಾಗಲೇ ಪ್ರಾರಂಭವಾಗಿದ್ದು, ರಾಜ್ಯದ ಸಾವಿರಾರು ವಿದ್ಯಾರ್ಥಿಗಳ ಕುಟುಂಬ ಕೊರೊನಾ ಸಂದರ್ಭದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದೆ. ಅನೇಕ ಸಮಸ್ಯೆಗಳ ನಡುವೆ ವಿದ್ಯಾರ್ಥಿಗಳು ಮತ್ತೆ ಕಾಲೇಜುಗಳಿಗೆ ಮರಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಿಷ್ಯ ವೇತನ ಅಗತ್ಯ ಎಂದರು.

ADVERTISEMENT

ಕಾಲೇಜು ಆರಂಭವಾದರೂ ಹಾಸ್ಟೆಲ್‌ಗಳನ್ನು ಸಂಪೂರ್ಣವಾಗಿ ತೆರೆದಿಲ್ಲ. ಹಾಸ್ಟೆಲ್‌ಗಳಿಗೆ ಪ್ರವೇಶ ಪಡೆಯಲು ಅರ್ಜಿಗಳನ್ನು ಬಿಡುಗಡೆಗೊಳಿಸಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿಯುಂಟಾಗಿದೆ ಎಂದು ಆರೋಪಿಸಿದರು.

ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ನಿತ್ಯವೂ ದೂರದ ಹಳ್ಳಿಗಳಿಂದ ಬಸ್ ಶುಲ್ಕ ನೀಡಿ ಪ್ರಯಾಣ ಮಾಡಲು ಕಷ್ಟವಾಗುತ್ತಿದೆ. ಆದ್ದರಿಂದ ಸರ್ಕಾರ ಎಲ್ಲ ಸರ್ಕಾರಿ ಹಾಸ್ಟೆಲ್‌ಗಳ ಪ್ರವೇಶಾತಿಗೆ ಕೂಡಲೇ ಅರ್ಜಿ ಆಹ್ವಾನಿಸಿ, ಪ್ರವೇಶಾತಿ ನೀಡಬೇಕು ಮತ್ತು ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಬಸ್‌ಗಳು ಪೂರ್ಣ ಪ್ರಮಾಣದಲ್ಲಿ ಸಂಚರಿಸುತ್ತಿಲ್ಲ ಹಾಗೂ ಸರಿಯಾದ ಸಮಯಕ್ಕೆ ಬಾರದ ಕಾರಣ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಕಷ್ಟವಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಇನ್ನೂ ಸಮರ್ಪಕವಾಗಿಲ್ಲ. ಇಲಾಖೆ ಗಮನ ವಹಿಸಿ ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡಿದರು.

ಎಐಡಿಎಸ್‌ಒ ಜಿಲ್ಲಾ ನಾಯಕ ಸುಭಾಷ್, ಅಂಕಿತ, ಚೈತ್ರ, ಹರ್ಷ, ಗಾಯತ್ರಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.