ADVERTISEMENT

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಚ್ಚಲಿ: ರೇವಣ್ಣ

ಯಾವುದೇ ತನಿಖೆಗೂ ಸಿದ್ಧ: ರೇವಣ್ಣ ಸವಾಲು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 14:43 IST
Last Updated 19 ಡಿಸೆಂಬರ್ 2019, 14:43 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ರಾಜ್ಯ ಸರ್ಕಾರಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೇಲೆ ನಂಬಿಕೆ ಇಲ್ಲದಿದ್ದರೆ ಮುಚ್ಚಬಿಡಲಿ ಎಂದು ಶಾಸಕ ಎಚ್‌.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆಯ 870 ಎಂಜಿನಿಯರುಗಳ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿ, ಕೆಪಿಎಸ್‌ಸಿಗೆ ವಹಿಸಿದೆ. ಪ್ರಾಧಿಕಾರದಲ್ಲಿ ಅಕ್ರಮ ನಡೆದಿದ್ದರೆ ಸಿಒಡಿ, ಲೋಕಾಯುಕ್ತ, ಸಿಬಿಐ ಸೇರಿದಂತೆ ಯಾವುದೇ ರೀತಿಯ ಸಂಸ್ಥೆಯಿಂದ ತನಿಖೆ ನಡೆಸಲಿ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

‘ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಕೆಪಿಎಸ್‌ಸಿಗೆ ಹೊಸದಾಗಿ ಸದಸ್ಯರನ್ನು ನೇಮಕ ಮಾಡಿದ್ದಾರೆ. ಕೆಪಿಎಸ್‌ಸಿ ಕರ್ಮಕಾಂಡ ಎಲ್ಲರಿಗೂ ಗೊತ್ತು. ಅವ್ಯವಹಾರ ನಡೆದಿರುವ ಬಗ್ಗೆ ಯಾರಾದರೂ ದೂರು ನೀಡಿದ್ದಾರೆಯೇ? ಅನಗತ್ಯವಾಗಿ ನನ್ನ ಹೆಸರು ಎಳೆದು ತರಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ₹ 20 ಸಾವಿರ ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಎಂಜಿನಿಯರ್‌ಗಳು ಇಲ್ಲದೇ ಕೆಲಸ ಹೇಗೆ ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರು.

ADVERTISEMENT

‌‘64 ಸಾವಿರ ಮಂದಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಗಾಗಿ ಅಭ್ಯರ್ಥಿಗಳು ₹ 50 ರಿಂದ ₹ 1 ಲಕ್ಷ ಪಾವತಿಸಿ ವಿಶೇಷ ತರಬೇತಿ ಪಡೆದಿದ್ದಾರೆ. ಪ್ರಾಧಿಕಾರಕ್ಕೆ ವಹಿಸಿದಾಗಲೇ ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿಯವರು ಪ್ರಶ್ನಿಸದೆ, ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರೆ. ಎಂಜಿನಿಯರುಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಲೋಕೋಪಯೋಗಿ ಇಲಾಖೆ ₹ 1,99,52,500 ಪರೀಕ್ಷಾ ವೆಚ್ಚ ಪಾವತಿಸಿಲ್ಲ’ ಎಂದು ಹೇಳಿದರು.

ನಂಬಿಹಳ್ಳಿ ಘರ್ಷಣೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ನಿವಾಸ ಸೆಪಟ್‌ಗೆ ನೀಡಿದ್ದ ಎರಡು ದಿನ ಗಡುವು ಮುಕ್ತಾಯವಾಗಿದೆ. ಆದರೆ, ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಇರುವ ಕಾರಣ ಸದ್ಯ ಪ್ರತಿಭಟನೆ ನಡೆಸುವುದಿಲ್ಲ. ಪಕ್ಷದ ಶಾಸಕರು ಹಾಗೂ ಸಂಸದರ ಜತೆ ಚರ್ಚಿಸಿ ಮುಂದಿನ ವಾರ ಪ್ರತಿಭಟನೆ ನಡೆಸಲಾಗುವುದು. ಅವಶ್ಯವಿದ್ದರೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ ಎಂದು ವಿವರಿಸಿದರು.

ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. ಕೆ.ಆರ್.ನಗರದಲ್ಲೂ ಪಕ್ಷದ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ ಒಂದು ಪಕ್ಷದ ಏಜೆಂಟರ್‌ರಂತೆ ಕೆಲಸ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಅಧಿಕಾರಿಗಳು ಕೆಲಸ ಮಾಡದಿದ್ದರೆ ಇಕ್ಕಟ್ಟಿಗೆ ಸಿಲುಕಿಕೊಳ್ಳುವುದು ಖಚಿತ ಎಂದು ಎಚ್ಚರಿಸಿದರು.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನದ ಮೀಸಲಾತಿಯನ್ನು ಚುನಾವಣೆಗೂ ಮೊದಲೇ ನಿಗದಿ ಪಡಿಸಲಾಗಿದೆ. ಅದನ್ನು ಬದಲಾವಣೆ ಮಾಡಿದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೆಡಿಎಸ್ ಕುರಿತು ಎಸ್‌.ಎಂ.ಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ರೇವಣ್ಣ, ‘ಅವರು ಒಕ್ಕಲಿಗ ಸಮಾಜದ ಹಿರಿಯ ನಾಯಕರು. ಅವರ ಬಗ್ಗೆ ಅಪಾರ ಗೌರವ ಇದೆ. ಬಿಜೆಪಿಯಲ್ಲಿರುವ ಅವರ ಬಗ್ಗೆ ಏನು ಹೇಳುವುದಿಲ್ಲ‌’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.