
ಸಕಲೇಶಪುರ (ಹಾಸನ): ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ಮಹೇಶ್ವರಪ್ಪ ಅವರ ಕೊಠಡಿಯಲ್ಲಿ ಟೇಬಲ್ ಮೇಲೆ ಇರಿಸಿದ್ದ ಕಡತಗಳಿಗೆ ಶುಕ್ರವಾರ ದುಷ್ಕರ್ಮಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಶುಕ್ರವಾರ ಮಧ್ಯಾಹ್ನದಿಂದ ಕಚೇರಿ ಕಾರಿಡಾರ್‌ನಲ್ಲಿ ಆತ ಓಡಾಡುತ್ತಿದ್ದುದು ಹಾಗೂ ಬೆಂಕಿ ಹಚ್ಚಿದ ದೃಶ್ಯಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ. ಆತನನ್ನು ಪುರಸಭೆ ಸದಸ್ಯರೊಬ್ಬರು ಹಾಗೂ ಸಿಬ್ಬಂದಿ ನೋಡಿದ್ದರು. ಕಚೇರಿ ಒಳಗೆ ಬಂದು ಆತ ಚೀರಾಡಿದ್ದ ಎನ್ನಲಾಗಿದೆ.
ಮಾಹಿತಿ ದೊರೆತ ನಂತರ ಸ್ಥಳಕ್ಕೆ ಬಂದ ಪೊಲೀಸರು, ‘ಸಿಬ್ಬಂದಿ ಇರುವಾಗಲೇ ಕಡತಗಳಿಗೆ ಬೆಂಕಿ ಹಚ್ಚಿ, ಕಚೇರಿ ಬಳಿ ನಿಲ್ಲಿಸಿದ್ದ ಸ್ಕೂಟರ್ ಏರಿ ಹೋಗುವವವರೆಗೆ ಏಕೆ ಹಿಡಿಯಲಿಲ್ಲ? ಕೈಯಲ್ಲಿ ಚಾಕು ಇದ್ದರೂ ಏಕೆ ಮಾಹಿತಿ ನೀಡಲಿಲ್ಲ’ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದರು.
‘ಇ–ಖಾತೆ ಸೇರಿದಂತೆ ಕಚೇರಿ ಕೆಲಸಗಳಿಗೆ ಜನರು ಅಲೆದಾಡುವಂತಾಗಿದೆ. ಅದರಿಂದ ಬೇಸತ್ತು ಈ ಕೃತ್ಯ ಎಸಗಿರಬಹುದು’ ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.