ADVERTISEMENT

ಸಕಲೇಶ್ವರಸ್ವಾಮಿ ಬ್ರಹ್ಮ ರ‌ಥೋತ್ಸವ ಸಂಭ್ರಮ

ಸಕಲೇಶಪುರ ರಾಜಬೀದಿಯಲ್ಲಿ ಸಾಗಿದ ಉತ್ಸವ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 4:39 IST
Last Updated 1 ಮಾರ್ಚ್ 2021, 4:39 IST
ಸಕಲೇಶಪುರದಲ್ಲಿ ಭಾನುವಾರ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸಕಲೇಶ್ವರಸ್ವಾಮಿ ರಥೋತ್ಸವ ಜರುಗಿತು  ಚಿತ್ರ–ಜಾನೇಕೆರೆ ಆರ್‌. ಪರಮೇಶ್
ಸಕಲೇಶಪುರದಲ್ಲಿ ಭಾನುವಾರ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸಕಲೇಶ್ವರಸ್ವಾಮಿ ರಥೋತ್ಸವ ಜರುಗಿತು  ಚಿತ್ರ–ಜಾನೇಕೆರೆ ಆರ್‌. ಪರಮೇಶ್   

ಸಕಲೇಶಪುರ: ‘ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಗ್ರಾಮ ದೇವತೆ ಸಕಲೇಶ್ವರ ಸ್ವಾಮಿ ಪುಷ್ಪಾಲಂಕೃತ ಬ್ರಹ್ಮ ರ‌ಥೋತ್ಸವ ಭಾನುವಾರ ಜರುಗಿತು.

ಮಧ್ಯಾಹ್ನ 12.30ರ ಸುಮಾರಿಗೆ ಬ್ರಾಹ್ಮಣರ ಬೀದಿಯಿಂದ ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಭಕ್ತರು ರಥವನ್ನು ಎಳೆದರು.

ಒಂದು ಗಂಟೆ ಸುಮಾರಿಗೆ ರಾಜಬೀದಿ ಪ್ರವೇಶಿಸಿದ ರಥಕ್ಕೆ ಸ್ಥಳೀಯರು ಈಡುಗಾಯಿ ಒಡೆದರು. ಮಂಗಳವಾದ್ಯ, ಡೊಳ್ಳು, ಮಲೆನಾಡಿನ ಕರಡಿವಾದ್ಯ, ವೀರಗಾಸೆ ಹಾಗೂ ಯುವಕರ ಸುಗ್ಗಿಕುಣಿತದೊಂದಿಗೆ ಪುರಭವನದವರೆಗೆ ರಥೋತ್ಸವ ಸಾಗಿತು.

ADVERTISEMENT

ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಯತ್ನ ಮಾಡುತ್ತಿದ್ದರು. ಒಂದು ಬದಿಯಿಂದ ಎಸೆದ ಬಾಳೆಹಣ್ಣು ಮತ್ತೊಂದು ಬದಿಯ ಭಕ್ತರ ಮೇಲೆ ಬೀಳುತ್ತಿದ್ದವು.

ರಾಜಬೀದಿಯನ್ನು ತಳಿರು ತೋರಣ, ರಂಗೋಲಿಯಿಂದ ಸಿಂಗರಿಸಲಾಗಿತ್ತು. ಮನೆ, ಅಂಗಡಿಗಳ ಮುಂದೆ ರಥ ಬರುತ್ತಿದ್ದಂತೆ ಆರತಿ ಎತ್ತಿ ಈಡುಗಾಯಿ ಒಡೆಯುತ್ತಿದ್ದದ್ದು ಸಾಮಾನ್ಯವಾಗಿತ್ತು.

ಸೇವೆ: ಪಟ್ಟಣದ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಥ ಸಾಗುವ ಮಾರ್ಗದ ಎರಡೂ ಬದಿಯಲ್ಲಿ ಭಕ್ತರಿಗೆ ತಂಪು ಪಾನೀಯ, ಲಘು ಉಪಾಹಾರ ವಿತರಿಸಿದರು.

ಬದಲಿ ಸಂಚಾರ ವ್ಯವಸ್ಥೆ: ರಾಜಬೀದಿ (ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ) ಯಲ್ಲಿ ಮಧ್ಯಾಹ್ನ 12–30 ರಿಂದ 6ರ ವರೆಗೆ ರಥೋತ್ಸವ ನಡೆಯುತ್ತಿದ್ದರಿಂದ ಹಾಸನ ಕಡೆಯಿಂದ ಬಂದ ವಾಹನಗಳನ್ನು ಬ್ರಾಹ್ಮಣರಬೀದಿ, ಶುಭಾಷ್ ಮೈದಾನ ರಸ್ತೆ, ವಾಸವಿ ದೇವಸ್ಥಾನ ರಸ್ತೆ, ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆ ಮಾರ್ಗದಲ್ಲಿಯೂ, ಮಂಗಳೂರು ಕಡೆಯಿಂದ ಬಂದ ವಾಹನಗಳನ್ನು ಹಳೆ ಸಂತವೇರಿ, ಆಜಾದ್ ರಸ್ತೆ ಮಾರ್ಗವಾಗಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾತ್ತು.

ಭಾರಿ ಸರಕು ವಾಹನಗಳನ್ನು ಮಾರನಹಳ್ಳಿ, ದೋಣಿಗಾಲ್‌, ಆನೇಮಹಲ್‌, ಬಾಗೆ ಗ್ರಾಮಗಳಲ್ಲಿ ಹೆದ್ದಾರಿ ಬದಿ ನಿಲ್ಲಿಸಲಾಗಿತ್ತು.

ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚುವರಿ ಪೊಲೀಸರನ್ನು ನೇಮಕ ಮಾಡಿ ಬಿಗಿ ಬಂದೋಬಸ್ತ್‌ ವ್ಯವಸ್ಥೆ
ಮಾ‌ಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.