ADVERTISEMENT

ಪೌರಕಾರ್ಮಿಕರ ಸೇವೆ ಶ್ಲಾಘನೀಯ: ಶಾಸಕ ಸಿ.ಎನ್. ಬಾಲಕೃಷ್ಣ

ಪೌರಕಾರ್ಮಿಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 6:10 IST
Last Updated 6 ಅಕ್ಟೋಬರ್ 2025, 6:10 IST
ವಿವಿಧ ಕ್ರೀಡೆಯಲ್ಲಿ ವಿಜೇತರಾದ ಪೌರಕಾರ್ಮಿಕರಿಗೆ ಚನ್ನರಾಯಪಟ್ಟಣದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ಪುರಸಭಾಧ್ಯಕ್ಷ ಸಿ.ಎನ್. ಮೋಹನ್ ಮಂಗಳವಾರ ಬಹುಮಾನ ವಿತರಿಸಿದರು
ವಿವಿಧ ಕ್ರೀಡೆಯಲ್ಲಿ ವಿಜೇತರಾದ ಪೌರಕಾರ್ಮಿಕರಿಗೆ ಚನ್ನರಾಯಪಟ್ಟಣದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ಪುರಸಭಾಧ್ಯಕ್ಷ ಸಿ.ಎನ್. ಮೋಹನ್ ಮಂಗಳವಾರ ಬಹುಮಾನ ವಿತರಿಸಿದರು   

ಚನ್ನರಾಯಪಟ್ಟಣ: ‘ನಿತ್ಯ ಮುಂಜಾನೆ ಪಟ್ಟಣವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ಪುರಸಭೆವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಳೆ, ಗಾಳಿ, ಚಳಿ ಎನ್ನದೇ ನಸುಕಿನಲ್ಲಿ ಸ್ಚಚ್ಛ ಮಾಡುವ ಪೌರಕಾರ್ಮಿಕರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಅವರಿಗೆ ಸಲ್ಲಬೇಕಾದ ಸವಲತ್ತು ದೊರಕಬೇಕು. ಈ ನಿಟ್ಟಿನಲ್ಲಿ ಪೌರಕಾರ್ಮಿಕರನ್ನು ಕಾಯಂ ಮಾಡಿರುವ ರಾಜ್ಯ ಸರ್ಕಾರದ ಕಾರ್ಯ ಸ್ವಾಗತಾರ್ಹ. ಪೌರಕಾರ್ಮಿಕರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಮನಪೂರ್ವಕವಾಗಿ ಮಾಡುತ್ತಿದ್ದಾರೆ. ಪೌರಕಾರ್ಮಿಕರನ್ನು ಪ್ರತಿವರ್ಷ ಸನ್ಮಾನಿಸುತ್ತಿರುವುದು ಜನಮೆಚ್ಚುವ ಕೆಲಸವಾಗಿದೆ’ ಎಂದರು

‘ಪಟ್ಟಣದ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹಾಗಾಗಿ ಪ್ರತಿ 3 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಂಡರೆ ಸಮರ್ಪಕವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಅದೇ ರೀತಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದನ್ನು ಮರೆಯಬಾರದು’ ಎಂದು ತಿಳಿಸಿದರು.

ADVERTISEMENT

ಪುರಸಭಾಧ್ಯಕ್ಷ ಸಿ.ಎನ್. ಮೋಹನ್ ಮಾತನಾಡಿ, ‘ಸ್ವಚ್ಛತೆ ಕೈಗೊಳ್ಳುವಲ್ಲಿ ಪೌರಕಾರ್ಮಿಕರ ಕಾರ್ಯತತ್ಪರತೆ ಶ್ಲಾಘನೀಯ. ಈ ಹಿನ್ನೆಲೆಯಲ್ಲಿ 2023-24ನೇ ಸಾಲಿಗೆ ಚನ್ನರಾಯಪಟ್ಟಣದ ಪುರಸಭೆಗೆ ಪುರಸ್ಕಾರ ದೊರಕಿದೆ. ಇದಕ್ಕೆ ಪೌರಕಾರ್ಮಿಕರ ಶ್ರಮ ಕಾರಣ’ ಎಂದು ತಿಳಿಸಿದರು.

ಪುರಸಭೆಯ ಉಪಾಧ್ಯಕ್ಷೆ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎ. ಗಣೇಶ್, ಸದಸ್ಯರಾದ ಕೆ.ಎನ್. ಬನಶಂಕರಿ, ರಾಧಾ, ರೇಖಾ, ಜಿ.ಆರ್. ಸುರೇಶ್, ರಾಣಿ, ಯೋಗೀಶ್, ಲಕ್ಷ್ಮೀ, ಧರಣಿ, ಸಿ.ಎಸ್. ಪ್ರಕಾಶ್, ಉಮಾಶಂಕರ್, ಪ್ರೇಮಕುಮಾರ್, ರವಿ, ಮುಖ್ಯಾಧಿಕಾರಿ ಆರ್. ಯತೀಶ್‍ಕುಮಾರ್, ಪರಿಸರ ಎಂಜಿನಿಯರ್ ಕಾವ್ಯಾ ಭಾಗವಹಿಸಿದ್ದರು. ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.