ADVERTISEMENT

ಹಾಸ‌ನ | ಸಂಕ್ರಾಂತಿ ಆಚರಣೆ, ಎಳ್ಳು–ಬೆಲ್ಲ ವಿತರಣೆ

ಹಬ್ಬದ ಸಂಭ್ರಮ, ಮನೆ ಮುಂದೆ ಬಣ್ಣದ ಅಲಂಕಾರ, ದೇವಾಲಯಗಳಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 14:09 IST
Last Updated 15 ಜನವರಿ 2024, 14:09 IST
ಹಾಸನ ನಗರದ ಮಾರಿಕಾಂಬ ಉಡುಸಲಮ್ಮ ದೇವಿಯ 48ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸಹಸ್ರರು ಭಕ್ತರು ದೇವಾಲಯಕ್ಕೆ ಆಗಮಿಸಿ, ವಿಶೇಷ ದರ್ಶನ ಪಡೆದರು.
ಹಾಸನ ನಗರದ ಮಾರಿಕಾಂಬ ಉಡುಸಲಮ್ಮ ದೇವಿಯ 48ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸಹಸ್ರರು ಭಕ್ತರು ದೇವಾಲಯಕ್ಕೆ ಆಗಮಿಸಿ, ವಿಶೇಷ ದರ್ಶನ ಪಡೆದರು.    

ಹಾಸ‌ನ: ಜಿಲ್ಲೆಯಾದ್ಯಂತ ಸೋಮವಾರ ವರ್ಷದ ಮೊದಲ ಸಂಕ್ರಾಂತಿ ಹಬ್ಬವನ್ನು ಜನರು ಸಂಭ್ರಮ, ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ನಗರ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಹಿಳೆಯರು, ಹೆಣ್ಣು ಮಕ್ಕಳು ಮನೆಯ ಆವರಣ ಸ್ವಚ್ಛಗೊಳಿಸಿ ಅಂದವಾದ ರಂಗೋಲಿ ಬಿಡಿಸಿದ್ದರು. ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿ, ಬಾಗಿಲಿಗೆ ತಳಿರು ತೋರಣ ಕಟ್ಟಿ ಅಲಂಕರಿಸಲಾಗಿತ್ತು.

ಮನೆ ಮಂದಿಯೆಲ್ಲ ಹೊಸ ಉಡುಗೆ ತೊಟ್ಟು ದೇವರ ಪೂಜೆ ನೆರವೇರಿಸಿ ಅಕ್ಕ ಪಕ್ಕದ ಮನೆಯವರೊಂದಿಗೆ ಪರಸ್ಪರ ಎಳ್ಳು–ಬೆಲ್ಲ, ಕಬ್ಬನ್ನು ಹಂಚಿ ಸಂಭ್ರಮಿಸಿದರು. ಸಂಕ್ರಾಂತಿ ಅಂಗವಾಗಿ ಮಹಿಳೆಯರು ಮನೆಗಳಲ್ಲಿ ಕಿಚಡಿ, ಖಾರ, ಸಿಹಿ ಪೊಂಗಲ್‌, ಪಾಯಸ ಸೇರಿದಂತೆ ಇತರೆ ಭಕ್ಷ್ಯಗಳನ್ನು ಸಿದ್ದಪಡಿಸಿದ್ದರು.

ADVERTISEMENT

ದೇವಾಲಯಗಳಲ್ಲಿ ಭಕ್ತರ ಸಂದಣಿ: ನಗರದ ದೇವಾಲಯಗಳಲ್ಲಿ ಭಕ್ತರ ಸಂದಣಿ ಕಂಡು ಬಂತು. ಬೆಳಿಗ್ಗೆಯಿಂದಲೇ ಭಕ್ತರು ದೇವರ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದರು. ಸಂಕ್ರಾಂತಿ ಅಂಗವಾಗಿ ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಎಳ್ಳು, ಬೆಲ್ಲದ ಮಿಶ್ರಣ, ಸಿಹಿ ಪೋಂಗಲ್‌, ಶಾವಿಗೆ ಪಾಯಸ ಹಾಗೂ ವಿಶೇಷವಾಗಿ ಬೇಯಿಸಿದ ಕಡಲೆಕಾಯಿ, ಅವರೆಕಾಯಿ, ಗೆಣಸು ದೇವರಿಗೆ ನೇವೈದ್ಯವಾಗಿ ಅರ್ಪಿಸಲಾಯಿತು.

ಗ್ರಾಮೀಣ ಭಾಗಗಳಲ್ಲಿ ಸಡಗರ: ಗ್ರಾಮೀಣ ಭಾಗಗಳಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಹೆಚ್ಚಿತ್ತು. ರೈತರು ಹಸುಗಳು, ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಮೈಗೆ ಅರಿಶಿಣ ಬಣ್ಣ ಹಚ್ಚಲಾಗಿತ್ತು. ಕೊಂಬುಗಳನ್ನು ಬಣ್ಣ ಬಣ್ಣದ ಕಾಗದಗಳಿಂದ ಅಲಂಕರಿಸಲಾಗಿತ್ತು. ಕಣದ ಪೂಜೆ, ಗೋ ಪೂಜೆ ಮಾಡಿ ನೈವೇದ್ಯ ಅರ್ಪಿಸಿದರು. ಹೊಸ ಫಸಲುಗಳನ್ನು ರಾಶಿ ಹಾಕಿ ಅವುಗಳಿಗೂ ಪೂಜೆ ಮಾಡಿದರು. ಪೊಂಗಲ್‌, ಕಡುಬು, ಪಾಯಸ ಸೇರಿದಂತೆ ವಿವಿಧ ಅವರೆ ಖಾದ್ಯ ತಯಾರಿಸಿ ಸವಿದರು.

ನಗರದಲ್ಲಿ ಆಡುವಳ್ಳಿ ಗ್ರಾಮದ ಅದಿದೇವತೆ ಮಾರಿಕಾಂಬಾ ಉಡುಸಲಮ್ಮ ದೇವಿಯ 48ನೇ ವರ್ಷದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಆಚರಿಸುವ ಹಿನ್ನೆಲೆಯಲ್ಲಿ ಸಹಸ್ರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ವಿಶೇಷ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.