ADVERTISEMENT

ಜಲಾನಯನ ಯೋಜನೆ ಭೂ ಮಂಜೂರಾತಿಯಲ್ಲಿ ಲೋಪ: ಎಸ್‌ಐಟಿ ತನಿಖೆಗೆ ಶಿವರಾಂ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 0:20 IST
Last Updated 10 ಡಿಸೆಂಬರ್ 2024, 0:20 IST
ಬಿ.ಶಿವರಾಂ
ಬಿ.ಶಿವರಾಂ   

ಹಾಸನ: ಜಿಲ್ಲೆಯ ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯ ಯೋಜನೆಗಾಗಿ ಜಮೀನು ಕಳೆದುಕೊಂಡವರಿಗೆ ಮಾಡಿರುವ ಭೂ ಮಂಜೂರಾತಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಹಗರಣ ನಡೆದಿದ್ದು, ಎಸ್‌ಐಟಿ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಬಿ. ಶಿವರಾಂ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲ ದಿನಗಳಿಂದ ಮುಡಾ ಹಗರಣ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ. ಆದರೆ ಅದಕ್ಕಿಂತಲೂ ಬ್ರಹ್ಮಾಂಡ ಭ್ರಷ್ಟಾಚಾರ ಜಲಾನಯನ ಯೋಜನೆಯಡಿ ಜಮೀನು ಕಳೆದುಕೊಂಡವರ ಭೂ ಮಂಜೂರಾತಿಯಲ್ಲಿ ನಡೆದಿದೆ. ಈ ಸಂಬಂಧ ಇದುವರೆಗೆ ಯಾವುದೇ ತನಿಖೆಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿದರು.

ಸರ್ಕಾರ ಹಾಗೂ ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಂಡರೆ, ಇದರಲ್ಲಿ ಹಲವು ಅಧಿಕಾರಿಗಳು ಶಿಕ್ಷೆಗೆ ಗುರಿಯಾಗುತ್ತಾರೆ. ಆದರೆ, ಇಲ್ಲಿ ಕೇವಲ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. 2005ರಿಂದ 2014 ಹಾಗೂ 2015ರಿಂದ 2019ರ ಅವಧಿಯಲ್ಲಿ ಒಟ್ಟು 1,265 ಭೂ ಮಂಜೂರಾತಿ ದಾಖಲೆ ರದ್ದುಪಡಿಸಲಾಗಿದೆ. ಈ ಮೂಲಕ ಅರ್ಹ ರೈತರಿಗೆ ಅನ್ಯಾಯವಾಗಿದೆ ಎಂದು ದೂರಿದರು.

ADVERTISEMENT

ಮೀಸಲಾತಿ, ನಕಲಿ ಭೂ ಮಂಜೂರಾತಿ ಹಾಗೂ ಮರು ಮಂಜೂರಾತಿ ಸೇರಿದಂತೆ ನಾನಾ ಕಾರಣಗಳನ್ನು ನೀಡಿ ಈ ಎಲ್ಲ ಮಂಜೂರಾತಿಯ ಪಹಣಿಗಳನ್ನು ರದ್ದುಪಡಿಸಲಾಗಿದೆ. ಆದರೆ ನೂರಾರು ಭೂ ಮಂಜೂರಾತಿ ದಾಖಲೆಗಳನ್ನು ಹೊಂದಿರುವ ಶೇ 50ರಷ್ಟು ರೈತರು ತಮಗೆ ಮಂಜೂರಾದ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎಂದರು.

ಭೂ ಮಂಜೂರಾತಿಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ, ಅನೇಕರಿಗೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಇನ್ನೂ ಕೆಲವೆಡೆ ಮೀಸಲು ಅರಣ್ಯ ಪ್ರದೇಶದ ಭೂಮಿಯನ್ನು ಮಂಜೂರು ಮಾಡಲಾಗಿದೆ. ಇಂತಹ ಅನೇಕ ಲೋಪಗಳನ್ನು ಅಧಿಕಾರಿಗಳು ಮಾಡಿದ್ದು, ಇವರ ವಿರುದ್ಧವು ಸೂಕ್ತ ತನಿಖೆ ಆಗಬೇಕಿದೆ ಎಂದು ಆಗ್ರಹಿಸಿದರು.

ಭೂ ಮಂಜೂರಾತಿ ಆಗಬೇಕಾದರೆ 8 ರಿಂದ 10 ಇಲಾಖೆಗಳ ಅಧಿಕಾರಿಗಳ ಮೂಲಕ ದಾಖಲೆಗಳ ಪರಿಶೀಲನೆ ಹಾಗೂ ಮಂಜೂರಾತಿ ಆಗಬೇಕು. ಇಷ್ಟೆಲ್ಲಾ ಆದರೂ ಭ್ರಷ್ಟಾಚಾರ ತಡೆಯಲು ಆಗಿಲ್ಲ. ಇದರಲ್ಲಿ ಲೋಪ ಎಸಗಿರುವ ಅಧಿಕಾರಿಗಳ ಮೇಲೆಯೂ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಸ್‌ಐಟಿ ತನಿಖೆ ಅವಶ್ಯಕ ಎಂದರು.

ನಾನಾ ಹಂತಗಳಲ್ಲಿ ಭೂ ಮಂಜೂರಾತಿ ನೀಡುವಾಗ ಅಧಿಕಾರಿಗಳು ಲೋಪ ಎಸಗಿರುವುದು ಕಂಡುಬಂದಿದ್ದು, ಇದರಿಂದ ರೈತರು ನ್ಯಾಯಾಲಯಕ್ಕೆ ಅಲೆಯುವಂತಾಗಿದೆ. ಕೂಡಲೇ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಸಚಿವರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಈ ಎಲ್ಲಾ ನೂನ್ಯತೆಗಳ ಕುರಿತು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಸಿಬ್ಬಂದಿಗಳ ಕೊರತೆ ಎಂಬ ನೆಪವನ್ನು ಅಧಿಕಾರಿಗಳು ನೀಡಿದ್ದಾರೆ. ಆದರೆ ಇದರಿಂದ ₹1300 ಕೋಟಿಯಷ್ಟು ಹಗರಣ ನಡೆದಿದ್ದು, ಸೂಕ್ತ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ರಾಜಕೀಯ ಕೊನೆಗಾಲದಲ್ಲಿ ಇದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರು ನಿರಾಶೆ ಆಗುವ ಅಗತ್ಯವಿಲ್ಲ. ಜನರ ಆಶೀರ್ವಾದ ಅವರ ಮೇಲೆ ಇಂದಿಗೂ ಇದೆ.
ಬಿ. ಶಿವರಾಂ ಮಾಜಿ ಸಚಿವ
ರೈತರಿಗೂ ಗುತ್ತಿಗೆ ನೀಡಲಿ
ಬಗರ್ ಕುಂ ಭೂ ಮಂಜೂರಾತಿಯಲ್ಲಿ ಸರ್ಕಾರ ನಿಯಮಗಳನ್ನು ಪರಿಷ್ಕರಣೆ ಮಾಡಬೇಕು. ಕಾಫಿ ಬೆಳೆಗಾರರಿಗೆ ಒತ್ತುವರಿ ಭೂಮಿಯನ್ನು 30 ವರ್ಷ ಗುತ್ತಿಗೆ ಆಧಾರದಲ್ಲಿ ನೀಡಿದ ಮಾದರಿಯಲ್ಲಿಯೇ ಸಣ್ಣಪುಟ್ಟ ರೈತರಿಗೆ ಎರಡೂವರೆ ಹೆಕ್ಟೇರ್‌ವರೆಗೂ ಭೂಮಿಯನ್ನು ಗುತ್ತಿಗೆ ನೀಡಬೇಕು. ಈ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯನ್ನು ಮತ್ತೆ ಒತ್ತಾಯಿಸುವುದಾಗಿ ಬಿ. ಶಿವರಾಂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.