ADVERTISEMENT

ಹಾಸನ: ಕಾಲಿಗೆ ಗುಂಡು ಹಾರಿಸಿ ರೌಡಿಶೀಟರ್‌ನ ಬಂಧನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 3:51 IST
Last Updated 4 ನವೆಂಬರ್ 2020, 3:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಸನ: ನಗರದ ಹೊರವಲಯದ ಕೃಷ್ಣ ನಗರದಲ್ಲಿ ಮಂಗಳವಾರ ರಾತ್ರಿ‌ ಗ್ರಾಮಾಂತರ ಠಾಣೆ ಪಿಎಸ್ಐ ಬಸವರಾಜ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ರೌಡಿ ಶೀಟರ್ ಸುನಿಲ್ ಎಂಬಾತನ‌ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಗಾಯಗೊಂಡಿರುವ ಆರೋಪಿಗೆ ಹಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಅರೆಕಲ್ಲು ಹೊಸಹಳ್ಳಿಯ ಸುನಿಲ್ ವಿರುದ್ಧ ಏಳು ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಪಿಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಪ್ರಮುಖ ಆರೋಪಿ ಸುನಿಲ್ ಮತ್ತು ಆತನ ಸಹಚರರಾದ ಅರೆಕಲ್ಲು ಹೊಸಹಳ್ಳಿ ಸಂತೋಷ್, ದೊಡ್ಡ ಮಂಡಿಗನಹಳ್ಳಿ ಪ್ರತಾಪ್, ಸೂರಿ, ರವಿ, ಸಂತೋಷ್ ಹಾಗೂ ಆಲೂರು ತಾಲ್ಲೂಕಿನ ಸತೀಶ್ ಅ. 23ರಂದು ಮೂರು ಮಂದಿ ಮೇಲೆ ದಾಳಿ ಮಾಡಿ, ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಪ್ರಕರಣದ ತನಿಖೆ ನಡೆಸುತ್ತಿದ್ದ ಪಿಎಸ್ಐ ಬಸವರಾಜ್, ಖಚಿತ ಮಾಹಿತಿ‌ ಮೇರೆಗೆ ಆರೋಪಿಗಳು ಕೃಷ್ಣ ನಗರದ ಬಳಿ ಇರುವುದನ್ನು ದೃಢಪಡಿಸಿಕೊಂಡು ಬಂಧಿಸಲು ತೆರಳಿದ್ದರು.

ಮದ್ಯ ಸೇವಿಸುತ್ತಿದ್ದ ಆರೋಪಿಗಳು ಬಂಧಿಸಲು ಪಿಎಸ್ಐ ಮುಂದಾದಾಗ ಮೂವರು ಆರೋಪಿಗಳು ಪರಾರಿಯಾದರು.‌ ಇಬ್ಬರನ್ನು ವಶಕ್ಕೆ ಪಡೆದರು.

ಸುನಿಲ್ ತಪ್ಪಿಸಿಕೊಳ್ಳಲು ಬಸವರಾಜ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ. ಬಸವರಾಜ್ ಅವರ ಹೊಟ್ಟೆ ಮತ್ತು ಎಡಗೈಗೆ ಗಂಭೀರ ಗಾಯವಾಗಿದೆ. ರಕ್ಷಣೆಗಾಗಿ ಸ್ಥಳದಲ್ಲಿದ್ದ ಗ್ರಾಮಾಂತರ ವೃತ್ತದ ಸಿಪಿಐ ಪಿ.ಸುರೇಶ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.