ಶ್ರವಣಬೆಳಗೊಳ: ಸಲ್ಲೇಖನ ಸಮಾಧಿ ಮತ್ತು ತಪಸ್ಸಿನ ಪವಿತ್ರ ಸ್ಥಳಕ್ಕೆ ಪ್ರಸಿದ್ಧಿಯಾಗಿರುವ ಶ್ರವಣಬೆಳಗೊಳ ಕ್ಷೇತ್ರಕ್ಕೆ ದೇಶದ ವಿವಿಧ ರಾಜ್ಯಗಳಿಂದ ಕಾಲ್ನಡಿಗೆಯ ಮೂಲಕ ಬಂದಿರುವ ದಿಗಂಬರ ಜೈನ ತ್ಯಾಗಿಗಳು, ಇಲ್ಲಿ ವರ್ಷಾಯೋಗ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಆಚಾರ್ಯರಾದ ಸುವಿಧಿಸಾಗರ ಮಹಾರಾಜರು, ವರ್ಧಮಾನಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳ ಸಾನಿಧ್ಯ ಹಾಗೂ ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.
ದಿಗಂಬರ ಜೈನ ಮುನಿಗಳು ತ್ಯಾಗ ಜೀವನದ ಸಾಧನೆಗಾಗಿ ನಿತ್ಯ ಕಠಿಣ ತಪಸ್ಸಿನಿಂದ ತಮ್ಮ ದೇಹವನ್ನು ಸಂಪೂರ್ಣವಾಗಿ ಕ್ಷಯಿಸಿ, ಮೋಕ್ಷ ಮಾರ್ಗದ ಹಾದಿಯಲ್ಲಿ ಸಾಗುತ್ತ ಆತ್ಮ ಕಲ್ಯಾಣ ಮಾಡಿಕೊಳ್ಳುತ್ತಾರೆ.
ಆಗಮ ಶಾಸ್ತ್ರಗಳಲ್ಲಿ ಉಲ್ಲೇಖಿಸಿದಂತೆ ದಿಗಂಬರ ಮುನಿ ಪರಂಪರೆಗೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತಾರೆ. ಮುನಿಗಳು ನಿರ್ದಿಷ್ಟವಾಗಿ ಒಂದೆಡೆ ಇರುವಂತಿಲ್ಲ. ನಿರಂತರವಾಗಿ ವಿಹಾರ ಮಾಡಬೇಕಾಗುತ್ತದೆ. ವರ್ಷದಲ್ಲಿ ಒಂದು ಸಲ ಮಾತ್ರ ಒಂದೇ ಕಡೆ ನೆಲೆಸುವುದು ವಾಡಿಕೆ. ಅದೂ ಮಳೆಗಾಲದ ಚಾತುರ್ಮಾಸ್ಯದ ಸಂದರ್ಭದಲ್ಲಿ ಮಾತ್ರ.
ತ್ಯಾಗ ಜೀವನದ ಸಾಧನೆಗಾಗಿ 4 ತಿಂಗಳು ವ್ರತಗಳಲ್ಲಿ ತೊಡಗಿಸಿಕೊಂಡು ಉಪವಾಸ, ಧರ್ಮ ಗ್ರಂಥಗಳ ನಿರಂತರ ಅಧ್ಯಯನ, ರಚನೆ ಮತ್ತು ಗ್ರಂಥ ಪ್ರಕಟಣೆ ಮಾಡುತ್ತಾರೆ. ದಿಗಂಬರ ದಿನಚರ್ಯದಲ್ಲಿ ತ್ಯಾಗಿಗಳು ಮಣೆ ಮತ್ತು ಹುಲ್ಲು ಚಾಪೆ ಹೊರತುಪಡಿಸಿ, ನಿದ್ರಿಸಲು ಬೇರಾವುದೇ ವಸ್ತುಗಳನ್ನೂ ಉಪಯೋಗಿಸುವುದಿಲ್ಲ.
ಎಷ್ಟೇ ಮಳೆ–ಗಾಳಿ, ಚಳಿ, ಸೆಖೆ ಇದ್ದರೂ ತಾಳ್ಮೆಯಿಂದ ಸಹಿಸಿಕೊಂಡು ಇರುತ್ತಾರೆ. ದೇಹದ ಮೇಲೆ ವ್ಯಾಮೋಹ ಬರಬಾರದೆಂದು ಸಾಬೂನು ಬಳಸಿ ಸ್ನಾನ ಮಾಡುವುದು ನಿಷಿದ್ಧ. ದಂತಗಳಿಗೆ ಬ್ರಷ್ ಮಾಡುವಂತಿಲ್ಲ. ಮೀಸೆ, ಗಡ್ಡ, ತಲೆಕೂದಲು ತೆಗೆಯುವುದಕ್ಕೆ ಸಾಧನಗಳನ್ನು ಬಳಸುವ ಹಾಗಿಲ್ಲ. ಕೇಶಲೋಚನ ಕ್ರಿಯೆ ಅಂದರೆ ಕೈಯಿಂದ ಮೀಸೆ ಗಡ್ಡ, ತಲೆಕೂದಲು ಕಿತ್ತು ತೆಗೆಯುತ್ತಾರೆ. ಇದು ಮುನಿ ಪರಂಪರೆಯ ಪದ್ಧತಿ.
ನಿತ್ಯ ಒಂದೇ ಆಹಾರ ಸೇವನೆ. ಅದು ತಟ್ಟೆ, ಬಟ್ಟಲು ಉಪಯೋಗಿಸದೇ ಕೈಯಿಂದ ಮಾತ್ರ ತೆಗೆದುಕೊಳ್ಳುತ್ತಾರೆ. ದಿಗಂಬರ ಮುನಿಗಳು ಮಣೆಯ ಮೇಲೆ ನಿಂತುಕೊಂಡು 2 ಕೈಗಳನ್ನು ಜೋಡಿಸಿ ಬೊಗಸೆಯಲ್ಲಿ ಆಹಾರ ತೆಗೆದುಕೊಳ್ಳುತ್ತಾರೆ.
ಅವರು ಸೇವಿಸುವ ಆಹಾರದಲ್ಲಿ ಕಂದಮೂಲ ಅಂದರೆ ಗೆಡ್ಡೆ ಗೆಣಸು, ಈರುಳ್ಳಿ– ಬೆಳ್ಳುಳ್ಳಿ, ಆಲೂಗಡ್ಡೆ, ಕ್ಯಾರೆಟ್, ಬೀಟ್‌ರೂಟ್ ಮೂಲಂಗಿಯಂತಹ ತರಕಾರಿಗಳ ತ್ಯಾಗವಿದ್ದು, ಆಹಾರ ತಯಾರಿಸಲು ತೆರೆದ ಬಾವಿಗಳಿಂದ ನೀರು ತಂದು, ಕುದಿಸಿ ಆರಿಸಿ ಬಳಸುತ್ತಾರೆ. ಅಡುಗೆಯಲ್ಲಿ ಉಪ್ಪಿನ ಬದಲಾಗಿ ಸೈಂದ್ರ ಲವಣ ಬಳಸುತ್ತಾರೆ.
ಶ್ರಾವಕ, ಶ್ರಾವಕಿಯರಿಂದ ಸಿದ್ಧ ಪಡಿಸಿದ ಆಹಾರವಾದ ಚಪಾತಿ, ರೊಟ್ಟಿ, ಅನ್ನ, ಸಾರು, ಪಲ್ಯ, ಹಣ್ಣಿನ ರಸಗಳು, ಎಳನೀರು, ಬಿಸಿ ನೀರನ್ನು ತ್ಯಾಗಿಗಳು ಕೈಯಲ್ಲಿ ತೆಗೆದುಕೊಳ್ಳುತ್ತಾರೆ.
‘ಎಲ್ಲಿಗೆ ವಿಹಾರ ಮಾಡಿದರೂ ವಾಹನ ಬಳಸುವಂತಿಲ್ಲ. ಪಾದಯಾತ್ರೆಯ ಮೂಲಕವೇ ನಿಗದಿ ಪಡಿಸಿದ ಸ್ಥಳಕ್ಕೆ ಸಂಚರಿಸಬೇಕು. ವಯೋಸಹಜವಾಗಿ ದೇಹ ಸ್ಪಂದಿಸದೇ ಇದ್ದರೆ, ನಡೆಯಲು ಆಗದೇ ಇದ್ದಾಗ, ಕಣ್ಣು, ಕಿವಿ ಕೇಳದೇ ಇದ್ದಾಗ, ದೇಹ ಸಂಪೂರ್ಣ ಕ್ಷೀಣಿಸಿ, ನಿತ್ರಾಣವಾದಾಗ ಮುನಿ ಪರಂಪರೆಯ ನಿಯಮಗಳನ್ನು ಪಾಲಿಸಿ, ಆಹಾರ, ನೀರನ್ನು ನಿಧಾನವಾಗಿ ತ್ಯಜಿಸುತ್ತಾ ಅಂತಿಮವಾಗಿ ಮುನಿ ಸಂಪ್ರದಾಯದ ಸಲ್ಲೇಖನ ಸಮಾಧಿ ಮರಣ ಹೊಂದುತ್ತಾರೆ’ ಎಂದು ಪ್ರೊ. ಜೀವಂಧರ್‌ಕುಮಾರ್ ಹೊತಪೇಟೆ ಹೇಳುತ್ತಾರೆ.
ಆಹಾರ ನೀಡುವ ಶ್ರಾವಕರು ಮನಶುದ್ಧಿ ವಚನಶುದ್ಧಿ ಕಾಯಶುದ್ಧಿ ಆಹಾರಶುದ್ಧಿ ಜಲಶುದ್ಧಿ ಇದ್ದು ನವಧಾ ಭಕ್ತಿಯಿಂದ ಆಹಾರ ನೀಡುವುದಾಗಿ ಹಾಗೂ ತಾವು ಸ್ವೀಕರಿಸಬೇಕು ಎಂದಾಗ ತ್ಯಾಗಿಗಳು ಆಹಾರ ಸ್ವೀಕರಿಸುತ್ತಾರೆ.– ಜಯಪದ್ಮಮ್ಮ, ಶ್ರಾವಕಿ
ಪಡೆದ ಆಹಾರದಲ್ಲಿ ಕೂದಲು ಇರುವೆ ಹರಳು ಮುಂತಾದ ಅಶುದ್ಧ ವಸ್ತುಗಳು ಕಂಡು ಬಂದರೆ ಆಹಾರ ನಿಲ್ಲಿಸಿ ನೀರನ್ನೂ ತೆಗೆದುಕೊಳ್ಳದೇ ನಿಂತಲ್ಲಿಂದ ಹೊರಡುತ್ತಾರೆ. ಇದನ್ನು ಅಂತರಾಯ ಎಂದು ಕರೆಯುತ್ತಾರೆ.– ರಾಜೇಶ್ ಶಾಸ್ತ್ರಿ, ಶ್ರಾವಕ
ಅಹಿಂಸಾ ಧರ್ಮ ಪಾಲನೆ
ಅನಾದಿ ಕಾಲದಿಂದಲೂ ದಿಗಂಬರ ಜೈನಧರ್ಮದ ಪರಂಪರೆಯಲ್ಲಿ ಅಹಿಂಸಾ ಧರ್ಮ ಪಾಲನೆಗಾಗಿ ಮಹಾವ್ರತಧಾರಿ ಮುನಿರಾಜರು ತ್ಯಾಗಿಗಳು ವ್ರತಿಕರು ಚಾತುರ್ಮಾಸ್ಯ ವ್ರತ ಆಚರಿಸುವ ಪದ್ಧತಿ ಮೊದಲಿನಿಂದಲೂ ಇದೆ. ಮಳೆಗಾಲದಲ್ಲಿ ಮಾತ್ರ ಭೂದೇವಿಯು ಎಲ್ಲೆಡೆ ಸಸ್ಯ ಶ್ಯಾಮಲೆಗಳಿಂದ ಸದಾ ಹಚ್ಚ ಹಸುರಾಗಿ ಶೋಭಿಸುತ್ತಾಳೆ.
ಕಣ್ಣಿಗೆ ಕಾಣಿಸುವ ಮತ್ತು ಕಾಣಿಸದೇ ಇರುವ ಅನಂತ ಜೀವಿಗಳು ಈ ಭೂಮಿಯ ಮೇಲೆ ಉತ್ಪತ್ತಿಯೂ ಆಗುವುದರಿಂದ ಎಲ್ಲಿಗೂ ವಿಹಾರ ಮಾಡದೇ ತಮ್ಮ ಆತ್ಮ ಕಲ್ಯಾಣದಲ್ಲಿ ಲೀನರಾಗುತ್ತಾ ಒಂದೇ ಸ್ಥಳದಲ್ಲಿ ನಿಂತು ಧರ್ಮ ತಪಸ್ಸಾಧನೆ ಮಾಡುವ ಮೂಲಕ ಶ್ರಾವಕ ಶ್ರಾವಕಿಯರಿಗೆ ಸತ್ಸಂಗದ ಧರ್ಮ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಾರೆ. ಈ 4 ತಿಂಗಳುಗಳ ಸಾಧನಾ ಸಮಯಕ್ಕೆ ವರ್ಷಾಯೋಗ ಇಲ್ಲವೇ ಚಾತುರ್ಮಾಸ್ಯ ಧಾರಣೆ ಎಂದು ಕರೆಯುವುದು ವಾಡಿಕೆ. ಈ ಚಾತುರ್ಮಾಸ್ಯವು ಆಷಾಡ ಶುದ್ಧ ಅಷ್ಟಮಿಯಿಂದ ಕಾರ್ತಿಕ ಶುದ್ಧ ಪೌರ್ಣಮಿಯವರೆಗೆ ಜರುಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.