ADVERTISEMENT

ಸಕಲೇಶಪುರ | ರಾಷ್ಟ್ರೀಯ ಹೆದ್ದಾರಿ ದೂಳಿನ ರಹದಾರಿ: ವಾಹನ ಚಾಲಕರ ನಿತ್ಯ ಪರದಾಟ

ಜಾನೆಕೆರೆ ಆರ್‌.ಪರಮೇಶ್‌
Published 6 ಮಾರ್ಚ್ 2025, 8:01 IST
Last Updated 6 ಮಾರ್ಚ್ 2025, 8:01 IST
ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ –75 ರಲ್ಲಿ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ದೂಳಿನಲ್ಲಿ ಸಾಗುತ್ತಿರುವ ವಾಹನಗಳು
ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ –75 ರಲ್ಲಿ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ದೂಳಿನಲ್ಲಿ ಸಾಗುತ್ತಿರುವ ವಾಹನಗಳು   

ಸಕಲೇಶಪುರ: ತಾಲ್ಲೂಕಿನ ದೋಣಿಗಾಲ್‌ನಿಂದ ಮಾರನಹಳ್ಳಿವರೆಗೆ ಹೆಸರಿಷ್ಟೇ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಎನ್ನುವಂತಾಗಿದೆ. ಈ ರಸ್ತೆ ರೈತರು ತಮ್ಮ ತೋಟ ಗದ್ದೆಗಳಿಗೆ ಹೋಗುವ ಎತ್ತಿನ ಬಂಡಿಯ ಕಚ್ಚಾ ರಸ್ತೆಗಿಂತ ಕೆಟ್ಟ ಸ್ಥಿತಿಯಲ್ಲಿದೆ ಎನ್ನುವ ದೂರು ಚಾಲಕರಿಂದ ಕೇಳಿ ಬರುತ್ತಿದೆ.

ಹೆದ್ದಾರಿಯ ತುಂಬೆಲ್ಲಾ ಮಂಡಿಯುದ್ದ ಗುಂಡಿಗಳಲ್ಲಿ ವಾಹನಗಳನ್ನು ಚಾಲನೆ ಮಾಡುವುದೇ ಒಂದು ಸಮಸ್ಯೆಯಾದರೆ, ಕಣ್ಣು, ಮೂಗು, ಬಾಯಿ ಮುಚ್ಚಿಕೊಳ್ಳಲೇ ಬೇಕಾದಷ್ಟು ದೂಳು ನೇರವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಹಾಸನದಿಂದ ಮಾರನಹಳ್ಳಿವರೆಗೆ 45 ಕಿ.ಮೀ. ಚತುಷ್ಪಥ ನಿರ್ಮಾಣಕ್ಕೆ 2017ರಲ್ಲಿಯೇ ಟೆಂಡರ್‌ ಆಗಿದ್ದು, 2019ರ ಮಾರ್ಚ್‌ 31ರ ಒಳಗೆ ಕಾಮಗಾರಿ ಪೂರ್ಣಗೊಳಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಗುತ್ತಿಗೆದಾರ ಬಿಟ್ಟುಕೊಡಬೇಕಿತ್ತು. ಕಾಮಗಾರಿ ಪೂರ್ಣಗೊಳಿಸಬೇಕಾದ ಅವಧಿ ಮುಗಿದೇ 6 ವರ್ಷ ಕಳೆದರೂ ದೋಣಿಗಾಲ್‌ನಿಂದ ಮಾರನಹಳ್ಳಿವರೆಗಿನ 10 ಕಿ.ಮೀ. ಹೆದ್ದಾರಿ ಕಾಮಗಾರಿ ಇನ್ನೂ ಶೇ 60 ಬಾಕಿ ಉಳಿದಿದೆ. ಗುತ್ತಿಗೆದಾರ ಕಂಪನಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷಕ್ಕೆ ಇದೊಂದು ನಿದರ್ಶನ ಎನ್ನುತ್ತಿದ್ದಾರೆ ತಾಲ್ಲೂಕಿನ ಜನರು.

ADVERTISEMENT

ವಾಹನ ಓಡಿಸುವವರು, ವಾಹನಕ್ಕೆ ಬಂಡವಾಳ ಹಾಕಿರುವವರ ಕಣ್ಣಲ್ಲಿ ನೀರು ಬರುಷ್ಟರ ಮಟ್ಟಿಗೆ ದೋಣಿಗಾಲ್‌ನಿಂದ ಮಾರನಹಳ್ಳಿವರೆಗೆ ಹೆದ್ದಾರಿ ಗುಂಡಿಬಿದ್ದಿದೆ. ಮಣ್ಣು ಹಾಗೂ ಎಂ ಸ್ಯಾಂಡ್‌ ದೂಳು ಆವರಿಸಿಕೊಳ್ಳುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಕಡಿಮೆ ಎಂದರೂ 40 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ.

ಮಂಗಳೂರು ಬಂದರು ಹಾಗೂ ಪಕ್ಕದ ಕೇರಳ ರಾಜ್ಯದಿಂದ ಸರಕು ಸಾಗಣೆ ಹೊತ್ತ ಸಾವಿರಾರು ಲಾರಿಗಳು, ಟ್ಯಾಂಕರ್‌ಗಳು ಸಂಚರಿಸುತ್ತವೆ. ಈ 10 ಕಿ.ಮೀ. ರಸ್ತೆ ಸರಿ ಇಲ್ಲದೇ ಇರುವುದರಿಂದ ಟಯರ್ ಪಂಕ್ಚರ್, ಆಕ್ಸಲ್ ತುಂಡು, ಬಂಪರ್‌ ಕಿತ್ತು, ಬ್ಲೇಡ್‌ ಸೆಟ್‌ ತುಂಡಾಗುವುದು ಸೇರಿದಂತೆ ಹತ್ತು ಹಲವು ಸಮಸ್ಯೆಗಿಳಿಂದ ದಾರಿಯುದ್ದಕ್ಕೂ ಕೆಟ್ಟು ನಿಂತ ವಾಹನಗಳು ಕಾಣಿಸುತ್ತವೆ.

ಕಳೆದ ವರ್ಷ ಸಕಲೇಶಪುರದಿಂದ ಮಾರನಹಳ್ಳಿವರೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ₹12 ಕೋಟಿ ಖರ್ಚು ಮಾಡಿ ರಸ್ತೆ ನಿರ್ಮಾಣ ಮಾಡಲಾಯಿತು. ಕಳಪೆ ಕಾಮಗಾರಿಯಿಂದ ಕೇವಲ 6 ತಿಂಗಳ ಒಳಗೆ ಆ ರಸ್ತೆಯೂ ಗುಂಡಿ ಬಿದ್ದು, ಮಣ್ಣಿನ ರಸ್ತೆಯಾಗಿದೆ.

ಏಪ್ರಿಲ್‌ ಅಂತ್ಯದೊಳಗೆ ಈ 10 ಕಿ.ಮೀ. ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸದೇ ಹೋದರೆ, ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ಈ ಹೆದ್ದಾರಿಯಲ್ಲಿ ವಾಹನಗಳು ಸಂಚಾರ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಕೆಲವೆಡೆ ಸುಮಾರು 80 ಅಡಿಗೂ ಹೆಚ್ಚು ಎತ್ತರದಲ್ಲಿ ಮಣ್ಣು ತೆಗೆದು ರಸ್ತೆ ನಿರ್ಮಾಣ ಮಾಡಲಾಗಿದ್ದು, ಆ ಪ್ರದೇಶಗಳಿಗೆ ಬಲವಾಗಿ ತಡೆಗೋಡೆಗಳ ನಿರ್ಮಾಣ ಆಗದೆ ಹೋದರೆ, ಮಳೆಗಾಲದಲ್ಲಿ ಗುಡ್ಡ ಕುಸಿತ ಉಂಟಾಗಿ ಈ ಮಾರ್ಗದ ವಾಹನಗಳ ಸಂಚಾರ ಪುನಃ ಸ್ಥಗಿತಗೊಳ್ಳುತ್ತದೆ ಎನ್ನುವ ಆತಂಕ ಇಲ್ಲಿನ ಜನರದ್ದಾಗಿದೆ.

ಈ ಹೆದ್ದಾರಿಯಲ್ಲಿ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುವುದಕ್ಕೆ ಭಯ ಆಗುತ್ತದೆ. ಗುಂಡಿ ನೆಗೆಸಿಕೊಂಡೇ ಬಸ್‌ ಓಡಿಸಬೇಕು. ಎದುರು ಹೋಗುವ ವಾಹನಗಳಿಂದ ಏಳುವ ದೂಳಿನಿಂದ ರಸ್ತೆಯೇ ಕಾಣುವುದಿಲ್ಲ
ರವಿ ಖಾಸಗಿ ಶಾಲಾ ಬಸ್‌ ಚಾಲಕ
ಕಳೆದ 5 ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಇದೇ ಸಮಸ್ಯೆಯನ್ನು ಪ್ರಯಾಣಿಕರು ಅನುಭವಿಸುತ್ತಿದ್ದಾರೆ. ಇಚ್ಛಾಶಕ್ತಿ ಕೊರತೆಯಿಂದಾಗಿ ಕಾಮಗಾರಿ ಕುಟುಂತ್ತಲೇ ಸಾಗಿದೆ
ರಮೇಶ್ ಕಾರು ಮಾಲೀಕರ ಸಂಘದ ಮಾಜಿ ಅಧ್ಯಕ್ಷ

ಹೆದ್ದಾರಿ ಬಂದ್‌ ಇಲ್ಲ

ಮಳೆಗಾಲ ಪ್ರಾರಂಭ ಆಗುವುದರೊಳಗೆ ದೋಣಿಗಾಲ್‌ನಿಂದ ಮಾರನಹಳ್ಳಿವರೆಗೆ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ. ಆದ್ದರಿಂದ ದೋಣಿಗಾಲ್‌ನಿಂದ ಕಪ್ಪಳ್ಳಿವರೆಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗುವುದು ಎಂದು ಉಪ ವಿಭಾಗಾಧಿಕಾರಿ ಡಾ.ಎಂ.ಕೆ.ಶ್ರುತಿ ತಿಳಿಸಿದ್ದಾರೆ. ಮಂಗಳೂರು ಕಡೆಯಿಂದ ಸಕಲೇಶಪುರದ ಕಡೆಗೆ ಬರುವ ವಾಹನಗಳು ಕಪ್ಪಳ್ಳಿಯಿಂದ ಕೆಸಗಾನಹಳ್ಳಿ ಮಾರ್ಗವಾಗಿ ಹಳೆ ಹೆದ್ದಾರಿ ಮೂಲಕ  ದೋಣಿಗಾಲ್‌ಗೆ ಬರಬೇಕು. ಸಕಲೇಶಪುರ ಕಡೆಯಿಂದ ಮಂಗಳೂರು ಕಡೆಗೆ ಹಾಲಿ ಹೆದ್ದಾರಿಯ ಮಾರ್ಗವಾಗಿಯೇ ವಾಹನಗಳು ಸಂಚರಿಸುತ್ತವೆ. ಈ ಮಾರ್ಗದಲ್ಲಿ ವಾಹನಗಳ ಸಂಚಾರ ಬಂದ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.