ADVERTISEMENT

ಅಕ್ರಮ ಮದ್ಯ, ಗಾಂಜಾ ಮಾರಾಟ ನಿಲ್ಲಿಸಿ

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ನಾಗರಿಕರ ಸಮಸ್ಯೆ ಆಲಿಸಿದ ಎಸ್ಪಿ ಶ್ರೀನಿವಾಸ್‌ ಗೌಡ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 12:53 IST
Last Updated 29 ಜನವರಿ 2021, 12:53 IST
ಆರ್.ಶ್ರೀನಿವಾಸ್ ಗೌಡ
ಆರ್.ಶ್ರೀನಿವಾಸ್ ಗೌಡ   

ಹಾಸನ: ಬೈಕ್‌ನಲ್ಲಿ ವ್ಹೀಲಿಂಗ್ ಮಾಡುವ ಯುವಕರು, ಟ್ರಾಫಿಕ್‌ ಸಮಸ್ಯೆ, ನಗರದಲ್ಲಿ ಅಕ್ರಮವಾಗಿ ಗಾಂಜಾ,ಮದ್ಯ ಮಾರಾಟ, ಇಸ್ಪೀಟು ಅಡ್ಡೆ ನಡೆಸುವ ಪ್ರಭಾವಿಗಳು, ಅನಧಿಕೃತವಾಗಿ ಪಟಾಕಿ ಮಾರಾಟ..

ನಗರದ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಎಸ್‌ಪಿ ಆರ್‌.ಶ್ರೀನಿವಾಸ್‌ ಗೌಡ ಹಮ್ಮಿಕೊಂಡಿದ್ದ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯಿತು. ಒಂದು ತಾಸು ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಕರೆ ಮಾಡಿದ ನಾಗರಿಕರು, ಅಕ್ರಮ ಮದ್ಯಮಾರಾಟ, ಗಾಂಜಾ ಮಾರಾಟ ಹಾಗೂ ಎಫ್‌ಐಆರ್‌ ದಾಖಲಿಸಲು ವಿಳಂಬ ಮಾಡುವ ಪೊಲೀಸರವರ್ತನೆ ಬಗ್ಗೆ ದೂರು ನೀಡಿದರು.

ಎಲ್ಲರ ಕರೆಗಳನ್ನು ಸ್ವೀಕರಿಸಿದ ಎಸ್‌ಪಿ, ಸೂಕ್ತ ಕ್ರಮದ ಭರವಸೆ ನೀಡಿದರು.

ADVERTISEMENT

ಬಾಗೆಯಿಂದ ಕರೆ ಮಾಡಿದ ವ್ಯಕ್ತಿ, ‘ಬಾಗೆಯಲ್ಲಿ ಪ್ರಭಾವಿ ರಾಜಕಾರಣಿ ತಮ್ಮ ವ್ಯಾನ್‌ನಲ್ಲಿ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಾರೆ. ಸಮುದಾಯ ಭವನದ ಪಕ್ಕದ ಪೆಟ್ಟಿಗೆ ಅಂಗಡಿಯಲ್ಲಿ ಚುನಾಯಿತ ಮಹಿಳೆಯೊಬ್ಬರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ’ ಎಂದು ಹೇಳಿದರು.

ಸ್ಥಳಕ್ಕೆ ಅಬಕಾರಿ ಮತ್ತು ಪೊಲೀಸ್‌ ಸಿಬ್ಬಂದಿ ಕಳಿಸಲಾಗುವುದು ಎಂದು ಎಸ್ಪಿ ಉತ್ತರಿಸಿದರು.

ಹಾಸನದ ಗೌರಿಕೊಪ್ಪಲಿನ ಮೋಹನ್‌, ‘ಗೌರಿ ಕೊಪ್ಪಲಿನಿಂದ ಡೈರಿ ವೃತ್ತಕ್ಕೆ ಆಟೋ ಚಾಲಕರು ಹೆಚ್ಚಿನ ಬಾಡಿಗೆ ತೆಗೆದುಕೊಳ್ಳುತ್ತಾರೆ. ಮೊದಲು ಒಬ್ಬರಿಗೆ ₹10 ಪಡೆಯಲಾಗುತ್ತಿತ್ತು. ಈಗ ₹ 20 ಪಡೆಯಲಾಗುತ್ತಿದೆ’ ಎಂದರು.

ಚನ್ನಪಟ್ಟಣ ಹೌಸಿಂಗ್‌ ಬೋರ್ಡ್ ಕಾಲೊನಿಯ ಲಕ್ಷ್ಮಣ್‌, ‘ವೃದ್ಧಾಪ್ಯ ವೇತನಮಾಡಿಸಿಕೊಡುವುದಾಗಿ ತಹಶೀಲ್ದಾರ್‌ ಕಚೇರಿ ಮುಂದೆ ಅರ್ಜಿ ಬರೆಯುವ ಕೃಷ್ಣ ಕುಮಾರ್‌ ಎಂಬಾತ ₹ 8 ಸಾವಿರ ಪಡೆದು ಈವರೆಗೂ ಮಾಡಿಸಿಕೊಟ್ಟಿಲ್ಲ. ನನ್ನ ಕಾಲಿಗೆ ಶಸ್ತ್ರ ಚಿಕಿತ್ಸೆಯಾಗಿದ್ದು, ಎರಡು ವರ್ಷದಿಂದ ಓಡಾಡದ ಸ್ಥಿತಿಯಲ್ಲಿದ್ದೇನೆ. ನ್ಯಾಯ ಕೊಡಿಸಬೇಕು’ ಎಂದು ಮನವಿ ಮಾಡಿದರು.

ಕೃಷ್ಣ ಕುಮಾರ್‌ ಮೊಬೈಲ್‌ ನಂಬರ್‌ ಪಡೆದ ಎಸ್ಪಿ, ಆ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.ಕಚೇರಿ ಬಳಿ ಅರ್ಜಿ ಬರೆಯುವ ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ಹಾಗೂಜಿಲ್ಲಾಧಿಕಾರಿಗೆ ಪತ್ರ ಬರೆಯಲು ಎಎಸ್‌ಐ ಕುಮಾರ್‌ ಗೆ ನಿರ್ದೇಶನ ನೀಡಿದರು.

ಹಾಸನದ ಭಾಗ್ಯಮ್ಮ, ‘ಹಾಸನದಲ್ಲಿ ಒಂದೂವರೆ ಗುಂಟೆ ನಿವೇಶನ ಖರೀದಿಸಿದ್ದು, ಕಾಂಪೌಂಡ್‌ನಿರ್ಮಾಣ ಮಾಡಲು ವಕೀಲ ಸತ್ಯನಾರಾಯಣ್‌ ಸಮಸ್ಯೆ ಮಾಡುತ್ತಿದ್ದಾರೆ, ಸರ್ವೇ ಮಾಡಿಸಲು ಸೂಕ್ತ ರಕ್ಷಣೆ ನೀಡಬೇಕು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ, ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿ. ಸರ್ವೇ ಕಾರ್ಯನಡೆಯುವ ದಿನ ಮಾಹಿತಿ ನೀಡಿದರೆ ಪೊಲೀಸ್‌ ಭದ್ರತೆ ನೀಡಲಾಗುವುದು ಎಂದರು.

ಅರಸೀಕೆರೆಯಿಂದ ಕರೆ ಮಾಡಿದ ವ್ಯಕ್ತಿ, ‘ನಗರದಲ್ಲಿ ಕೀರ್ತಿ ಮತ್ತು ಚಿದಾನಂದ ಎಂಬುವವರು ಮಟ್ಕಾ, ಇಸ್ಪೀಟು ಆಡಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

ಚನ್ನರಾಯಪಟ್ಟಣದ ರವಿ, ‘ಕೇಶವಮೂರ್ತಿ ಎಂಬುವರಿಂದ ನಿವೇಶನ ಖರೀದಿ ಮಾಡಲು ಮುಂಗಡ ಹಣ ನೀಡಿದ್ದೇನೆ. ಆದರೆ ಅವರು ನೋಂದಣಿ ಮಾಡಿಕೊಡುತ್ತಿಲ್ಲ’ ಎಂದು ಹೇಳಿದರು.

ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡುವಂತೆ ಎಸ್‌ಪಿ ತಿಳಿಸಿದರು.

ಚನ್ನರಾಯಪಟ್ಟಣದ ವ್ಯಕ್ತಿ ಕರೆ ಮಾಡಿ, ‘ಬಾಗೂರು ರಸ್ತೆಯ ಕೆನರಾ ಬ್ಯಾಂಕ್ ಎಟಿಎಂ ಎದುರು ಸತೀಶ್‌ ಹೇರ್‌ಡ್ರೆಸ್ ಪಕ್ಕದ ಮನೆಯಲ್ಲಿ ಅಕ್ರಮವಾಗಿ ಪಟಾಕಿ ಮಾರಾಟ ಮಾಡಲಾಗುತ್ತಿದೆ.ಅನಾಹುತ ಸಂಭವಿಸಿದರೆ ಯಾರು ಹೊಣೆ? ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದರು.

ಆಟೋ ಚಾಲಕರ ಸಂಘದ ಮೊಹಮ್ಮದ್‌ ಕರೆ ಮಾಡಿ, ನಗರದಲ್ಲಿ ಪರವಾನಗಿ ಇಲ್ಲದೇ ಆಟೊಗಳುಸಂಚರಿಸುತ್ತಿವೆ. ಇದಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ‘ಈಗಾಗಲೇ ಸುಮಾರು 1300 ಆಟೊಗಳಿಗೆ ನೋಂದಣಿ ಸಂಖ್ಯೆನೀಡಲಾಗಿದೆ. ಇನ್ನು 800 ಆಟೊಗಳಿಗೆ ನಂಬರ್‌ ನೀಡುವುದು ಬಾಕಿ ಇದೆ. ಪರವಾನಗಿ ಇಲ್ಲದಆಟೋಗಳು ಓಡಾಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲೆಯ ವಿವಿಧ ಭಾಗಗಳಿಂದ 20ಕ್ಕೂ ಜನರು ಕರೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.