
ಹಾಸನ: ನಗರದ ಒಳಾಂಗಣ ಕ್ರೀಡಾಂಗಣದ ಪಕ್ಕದಲ್ಲಿರುವ ಬೃಹತ್ ಈಜುಕೊಳ ನಿರ್ಮಾಣಗೊಂಡು ಎರಡೂವರೆ ವರ್ಷ ಕಳೆದಿದ್ದು, ವಿದ್ಯುತ್ ಸಂಪರ್ಕ, ಮೀಟರ್ ಬೋರ್ಡ್ ಅಳವಡಿಕೆ ವಿಳಂಬದಿಂದ ಈಜುಪಟುಗಳ ಬಳಕೆಗೆ ಸಿಕ್ಕಿಲ್ಲ.
‘ಮೊದಲು ಈಜುಕೊಳ ನಿರ್ಮಾಣವನ್ನು ಬಿಎಸ್ಆರ್ ಕಂಪನಿಗೆ ನೀಡಲಾಗಿತ್ತು. ನಂತರ ಸಾಗರ್ ಪೋಲ್ ಕಂಪನಿಗೆ ವಹಿಸಲಾಗಿದೆ. ಈ ಎರಡೂ ಕಂಪನಿಗಳ ಕಿತ್ತಾಟದ ನಡುವೆ ವಿದ್ಯುತ್ ಮೀಟರ್ ಅಳವಡಿಕೆ ವಿಳಂಬವಾಗುತ್ತಿದೆ’ ಎಂಬ ಆರೋಪವಿದೆ.
ನಿರ್ವಹಣೆ ಇಲ್ಲದೇ ಈಜುಕೊಳದಲ್ಲಿ ಈಗಾಗಲೇ ಪಾಚಿ ಸಂಗ್ರಹವಾಗುತ್ತಿದ್ದು, ಮತ್ತಷ್ಟು ವಿಳಂಬವಾದಲ್ಲಿ ಈಜುಕೊಳದ ತಡೆಗೋಡೆ ಹಾಗೂ ಯಂತ್ರೋಪಕರಣ ಹಾನಿಯಾಗಲಿವೆ ಎಂಬ ಆತಂಕವೂ ಮೂಡಿದೆ.
‘ಶಾಸಕ ಪ್ರೀತಂ ಗೌಡರ ಅಧಿಕಾರ ಅವಧಿಯಲ್ಲಿ ಈಜುಕೊಳವನ್ನು ₹2.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಬೇಕಾದ ಯಂತ್ರೋಪಕರಣಗಳ ಅಳವಡಿಕೆ ಮಾಡಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಮೀಟರ್ ಅಳವಡಿಸದಿರುವುದರಿಂದ ಉಪಯೋಗಕ್ಕೆ ಬಾರದಾಗಿದೆ’ ಎಂದು ಈಜುಕೊಳದ ಮುಖ್ಯ ಈಜು ತರಬೇತುದಾರ ಕಿರಣ್ ಕುಮಾರ್ ಹೇಳುತ್ತಾರೆ.
‘ಮೀಟರ್ ಅಳವಡಿಕೆಗೆ ₹ 40ಸಾವಿರದಿಂದ ₹ 50 ಸಾವಿರ ವೆಚ್ಚವಾಗಲಿದೆ. ಶೇ 15ರಷ್ಟು ಕೆಲಸ ಮಾತ್ರ ಬಾಕಿ ಇದ್ದು, ಮೀಟರ್ ಅಳವಡಿಸಿ ಹಸ್ತಾಂತರಿಸಿದರೆ ಈಜುಕೊಳವನ್ನು ಉಪಯೋಗಿಸಬಹುದು’ ಎಂಬುದು ಅವರ ಸಲಹೆ.
‘ಜಿಲ್ಲೆಯಲ್ಲಿ ಐವತ್ತು ಮೀಟರ್ ವಿಸ್ತೀರ್ಣದ ಏಕಮಾತ್ರ ಈಜುಕೊಳ ಇದು. ಜಿಲ್ಲೆಯ ಸುಮಾರು 40 ಮಂದಿ ಈಜು ಕ್ರೀಡಾಪಟುಗಳಿದ್ದಾರೆ. 13ಕ್ಕೂ ಹೆಚ್ಚು ಮಂದಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರು ಅಂತರರಾಷ್ಟ್ರೀಯ ಮಟ್ಟದ ಈಜುಪಟುಗಳಿದ್ದಾರೆ. ಈಜುಕೊಳ ಪ್ರಾರಂಭವಾದರೆ ಇವರಿಗೆಲ್ಲ ಮತ್ತಷ್ಟು ಅನುಕೂಲವಾಗಲಿದೆ’ ಎಂದು ತರಬೇತಿದಾರರು ಹೇಳುತ್ತಾರೆ.
ಹಾಸನಕ್ಕೆ ಸುಸಜ್ಜಿತ ಈಜುಕೊಳ ಅಗತ್ಯವಿದೆ. ನಿರ್ವಹಣೆ ಕಾಮಗಾರಿ ವಿಳಂಬ ಆಗಿರುವುದರಿಂದ ಕ್ರೀಡಾಪಟುಗಳ ಉಪಯೋಗಕ್ಕೆ ಬರುತ್ತಿಲ್ಲ. ಶೀಘ್ರ ಪ್ರಾರಂಭವಾದಲ್ಲಿ ಅನುಕೂಲವಾಗಲಿದೆರವಿ , ಈಜುಪಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.