ADVERTISEMENT

ಸದಾಶಿವ ವರದಿ ಜಾರಿಗಾಗಿ ತಮಟೆ ಚಳವಳಿ

ವಿವಿಧ ಸಂಘಟನೆಗಳಿಂದ ಡಿ.ಸಿ ಕಚೇರಿಗೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 12:57 IST
Last Updated 13 ಅಕ್ಟೋಬರ್ 2020, 12:57 IST
ಹಾಸನದಲ್ಲಿ ದಲಿತ– ಛಲವಾದಿ, ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ತಮಟೆ ಚಳವಳಿ ನಡೆಸಲಾಯಿತು.
ಹಾಸನದಲ್ಲಿ ದಲಿತ– ಛಲವಾದಿ, ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ತಮಟೆ ಚಳವಳಿ ನಡೆಸಲಾಯಿತು.   

ಹಾಸನ: ಒಳಮೀಸಲಾತಿ ಅನುಷ್ಠಾನ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಮಂಗಳವಾರ ದಲಿತ– ಛಲವಾದಿ, ಮಾದಿಗ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ತಮಟೆ ಚಳವಳಿ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ಬಂದು ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಕೆಲ ಹೊತ್ತು ಧರಣಿ ನಡೆಸಿದರು.

‘ಪರಿಶಿಷ್ಟ ಜಾತಿ, ಪಂಗಡದವರಿಗೆ ಸಕಲ ಸೌಲಭ್ಯ ದೊರೆಯಬೇಕು. ಅದಕ್ಕಾಗಿ ಸದಾಶಿವ ಆಯೋಗದ ವರದಿ ಜಾರಿಯಾಗಬೇಕೆಂದು 12 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದರೂ ಪ್ರಯೋಜನವಾಗಿಲ್ಲ. ಸುಪ್ರೀಂಕೋರ್ಟ್‌ ಆದೇಶ ಒಳಮೀಸಲಾತಿ ಕಲ್ಪಿಸಲು ಇದ್ದ ಅಡ್ಡಿ ದೂರ ಮಾಡಿದೆ. ಅಲ್ಲದೇ ರಾಜ್ಯ ಸರ್ಕಾರಗಳಿಗೂ ಈ ಅಧಿಕಾರ ನೀಡಿದೆ. ಇದರಿಂದ ಹೊಲೆಯ, ಮಾದಿಗ, ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಸಮುದಾಯಕ್ಕೆ ಅನುಕೂಲವಾಗಲಿದೆ’ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಕೃಷ್ಣದಾಸ್‌ ಹೇಳಿದರು.

ADVERTISEMENT

2018ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ತಾವು ಮುಖ್ಯಮಂತ್ರಿಯಾದರೆ ಸದಾಶಿವ ಆಯೋಗ ವರದಿ ಜಾರಿಗೊಳಿಸುವ ಭರವಸೆ ನೀಡಿದ್ದರು. ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ನಿರ್ಧಾರ ಕೈಗೊಳ್ಳುವಂತೆ ರಾಜ್ಯಾದಾದ್ಯಂತ ಪ್ರತಿಭಟನೆ ನಡೆಸಿದರೂ ಫಲಪ್ರದವಾಗಲಿಲ್ಲ. ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಜನಸಂಖ್ಯೆಗೆನುಗುಣವಾಗಿ ಶೇಕಡಾವಾರು ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.‌

ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕಾಂತರಾಜ್ ಅವರು ನೀಡಿರುವ ಸಾಮಾಜಿಕ ಜನಗಣತಿ ವರದಿ ಬಹಿರಂಗಪಡಿಸಬೇಕು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ದಲಿತ ಸಂಘರ್ಷ ಸಮಿತಿ ಮುಖಂಡರಾದ ಕೆ. ಈರಪ್ಪ, ಅಂಬುಗ ಮಲ್ಲೇಶ್, ಎಚ್.ಪಿ. ಶಂಕರರಾಜು, ಎಸ್‌.ಎನ್‌. ಮಲ್ಲಪ್ಪ, ಮಾದಿಗ ದಂಡೋರ ಎಚ್‌.ಎಂ. ಮಹೇಶ್‌, ರಾಜಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.