ADVERTISEMENT

ಆನೆ ಹಾವಳಿ ತಡೆಗೆ ಶೀಘ್ರ ಕ್ರಮ: ಅರಣ್ಯ ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 13 ಮೇ 2025, 15:27 IST
Last Updated 13 ಮೇ 2025, 15:27 IST
ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದ ಸಸ್ಯಕ್ಷೇತ್ರದಲ್ಲಿ ಆನೆ ಕಾರ್ಯಕಡೆ ಜಿಲ್ಲಾ ಕೇಂದ್ರ ಕಚೇರಿ ನಿರ್ಮಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಭೂಮಿಪೂಜೆ ನೆರವೇರಿಸಿದರು. ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಕೆ.ಸುರೇಶ್ ಪಾಲ್ಗೊಂಡಿದ್ದರು
ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದ ಸಸ್ಯಕ್ಷೇತ್ರದಲ್ಲಿ ಆನೆ ಕಾರ್ಯಕಡೆ ಜಿಲ್ಲಾ ಕೇಂದ್ರ ಕಚೇರಿ ನಿರ್ಮಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಭೂಮಿಪೂಜೆ ನೆರವೇರಿಸಿದರು. ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಕೆ.ಸುರೇಶ್ ಪಾಲ್ಗೊಂಡಿದ್ದರು   

ಬೇಲೂರು: ‘ಕಾಡಾನೆಗಳ ಮೇಲ್ವಿಚಾರಣೆ ಮಾಡಲು, ₹ 40 ಲಕ್ಷ ವೆಚ್ಚದಲ್ಲಿ ಕಚೇರಿ ನಿರ್ಮಿಸಲಾಗುತ್ತಿದ್ದು, ಒಂದೂವರೆ ತಿಂಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ತಾಲ್ಲೂಕಿನ ಬಿಕ್ಕೋಡು ಗ್ರಾಮದ ಸಸ್ಯಕ್ಷೇತ್ರದಲ್ಲಿ ಆನೆ ಕಾರ್ಯಪಡೆ ಜಿಲ್ಲಾ ಕೇಂದ್ರ ಕಚೇರಿ ನಿರ್ಮಾಣಕ್ಕೆ ಮಂಗಳವಾರ ಭೂಮಿಪೂಜೆ ಮಾಡಿ ಮಾತನಾಡಿದ ಅವರು, ‘ಸಚಿವನಾದ ನಂತರ ಏಳು ಬಾರಿ ಜಿಲ್ಲೆಗೆ ಭೇಟಿ ಕೊಟ್ಟಿದ್ದೇನೆ. ಮಾನವ, ಪ್ರಾಣಿ ಸಂಘರ್ಷದ ಬಗ್ಗೆ ಮಾಹಿತಿ ಕಲೆ ಹಾಕಿದ್ದೇನೆ. ಬಹಳಷ್ಟು ಸಭೆ ಮಾಡಿದ್ದೇನೆ’ ಎಂದರು. 

‘ಆನೆ ಸೆರೆಹಿಡಿಯುವುದರಲ್ಲಿ ಮತ್ತು ಪಳಗಿಸುವುದರಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ ಮೂಂಚೂಣಿಯಲ್ಲಿದೆ. 6,300 ಆನೆಗಳು ರಾಜ್ಯದಲ್ಲಿವೆ. ಪ್ರತಿ ವರ್ಷ 50ರಿಂದ 60 ಜನ ಮಾನವ–ಪ್ರಾಣಿ ಸಂಘರ್ಷದಿಂದ ಮೃತಪಡುತ್ತಿದ್ದಾರೆ ಅದರಲ್ಲಿ 20ರಿಂದ 30 ಜನ ಕಾಡಾನೆಗಳ ದಾಳಿಯಿಂದ ಮೃತಪಡುತ್ತಿದ್ದಾರೆ’ ಎಂದರು.

ADVERTISEMENT

‘ಪ್ರತಿಯೊಂದು ಜೀವವೂ ಅತ್ಯಮೂಲ್ಯ. ₹10 ಕೋಟಿ ಪರಿಹಾರ ಕೊಟ್ಟರೂ ಕಡಿಮೆಯೇ. ಹಾಸನ– ಕೊಡಗಿನಲ್ಲಿ 150 ರಿಂದ 200 ಆನೆಗಳು ಕಾಡಿನಿಂದ ಹೊರಗಿವೆ. ಅವುಗಳ ಹಾವಳಿ ತಡೆಯಲು 391 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದ್ದು, ಮತ್ತೆ 156 ಕಿ.ಮೀ ನಿರ್ಮಿಸಲು ₹ 225 ಕೋಟಿ ಹೆಚ್ಚಿನ ಅನುದಾನ ನೀಡಲಾಗಿದೆ’ ಎಂದರು.

‘ಆನೆಗಳ ಹಾವಳಿ ತಡೆಗೆ ಅನ್ಯ ರಾಜ್ಯಗಳ ಪ್ರಯತ್ನದ ಅಧ್ಯಯನವೂ ನಡೆದಿದೆ. ಜಿಲ್ಲೆಯಲ್ಲಿ ನಾಲ್ಕು ಪುಂಡಾನೆಗಳನ್ನು ಸೆರೆಹಿಡಿಯಲಾಗಿದೆ. ಬೇರೆ ರಾಜ್ಯಗಳಲ್ಲಿ ಆನೆಗಳನ್ನು ಸೆರೆಹಿಡಿಯುವ ಪ್ರಕ್ರಿಯೆ ಇಲ್ಲ.  ಅದು ಅತ್ಯಂತ ಅಪಾಯದ ಕಾರ್ಯಾಚರಣೆ’ ಎಂದರು.

‘ಮಾನವರು ಆನೆ, ಪ್ರಾಣಿಗಳ ಜೊತೆಯಲ್ಲಿ ಸಹಬಾಳ್ವೆಯಿಂದ ಬದುಕಬೇಕು. ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಶ್ರೀಮಂತ ಅರಣ್ಯ ಪ್ರದೇಶ ಮತ್ತು ಜೀವ ವೈವಿಧ್ಯತೆಯ ಪ್ರಭೇದಗಳ ಜೊತೆ, ಪಶ್ಚಿಮ ಘಟ್ಟಗಳ ಜೊತೆ ಬದುಕುತ್ತಿರುವ ಜನರು ಧನ್ಯರಾಗಿದ್ದು, ಅತಿಕ್ರಮಕ್ಕೆ ಅಸ್ಪದ ಕೊಡದೇ, ಮುಂದಿನ ಪೀಳಿಗೆಗೆ ಪರಿಸರವನ್ನು ಕಾಪಾಡಬೇಕು’ ಎಂದು ಸಲಹೆ ನೀಡಿದರು.

‘ಬೆಳೆ ಪರಿಹಾರ ವಿತರಣೆ ತಡವಾಗುತ್ತಿದ್ದು, ಆರ್ಥಿಕ ಇಲಾಖೆ ಜೊತೆ ಮಾತನಾಡಿ ತಕ್ಷಣ ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ. 2024 ರ ಡಿಸೆಂಬರ್ ವರಗಿನ ಪರಿಹಾರವನ್ನು ಈಗಾಗಲೇ ನೀಡಲಾಗಿದ್ದು, ಮಾರ್ಚ್‌ವರೆಗಿನ ಪರಿಹಾರವನ್ನು ತಕ್ಷಣ ನೀಡಲಾಗುವುದು’ ಎಂದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ‘ಪ್ರಾಣಿಗಳ ರಕ್ಷಣೆ ನಮ್ಮ ಕರ್ತವ್ಯ. ಆದರೆ ಪ್ರಾಣಿಗಳು ನಿರ್ದಿಷ್ಟ ಪ್ರದೇಶಗಳಲ್ಲಿ ವಾಸಿಸುವಂತೆ ಮಾಡಬೇಕು. ಮಲೆನಾಡು ಭಾಗದಲ್ಲಿದ ಆನೆಗಳ ಸಮಸ್ಯೆ ಈಗ ಬಯಲು ಸೀಮೆಗೂ ಬಂದಿದೆ. ಕಾಡು ಕೋಣಗಳು ದಾಳಿ ಮಾಡುತ್ತಿದ್ದು, ಅವುಗಳ ನಿಯಂತ್ರಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಬೇಕು’ ಎಂದರು.

ಸಂಸದ ಶ್ರೇಯಸ್ ಪಟೇಲ್, ಸಿಸಿಎಫ್‌ ಏಡುಕೊಂಡಲು, ಡಿಎಫ್‌ಒ ಸೌರಭ್ ಕುಮಾರ್, ತಹಶೀಲ್ದಾರ್ ಎಂ.ಮಮತಾ, ಆರ್‌ಎಫ್‌ಒ ಬಿ.ಜಿ.ಯತೀಶ್, ಕಾಂಗ್ರೆಸ್ ಬಿಕ್ಕೋಡು ಹೋಬಳಿ ಘಟಕದ ಅಧ್ಯಕ್ಷ ಮಲ್ಲೇಶ್, ಕಾಫಿ ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅದ್ದೂರಿ ಕುಮಾರ್, ಕುಮಾರಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.