ADVERTISEMENT

ಶಿಕ್ಷಕಿಯರ ಜಗಳ: ಮಕ್ಕಳ ಟಿ.ಸಿಗಾಗಿ ಪೋಷಕರ ಪಟ್ಟು

ಮುಖಂಡರ ಸಭೆಗೂ ಜಗ್ಗಲಿಲ್ಲ: ಪಾಲಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಮೇ 2022, 4:15 IST
Last Updated 31 ಮೇ 2022, 4:15 IST
ಯಸಳೂರು ಹೋಬಳಿಯ ಕೆರೊಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಭೆಯಲ್ಲಿ ಪೋಷಕರು, ಶಿಕ್ಷಕರು, ಮುಖಂಡರು ಪಾಲ್ಗೊಂಡಿದ್ದರು
ಯಸಳೂರು ಹೋಬಳಿಯ ಕೆರೊಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಭೆಯಲ್ಲಿ ಪೋಷಕರು, ಶಿಕ್ಷಕರು, ಮುಖಂಡರು ಪಾಲ್ಗೊಂಡಿದ್ದರು   

ಹೆತ್ತೂರು: ಶಿಕ್ಷಕಿಯರಿಬ್ಬರ ನಡುವಿನ ಜಗಳದಿಂದ ಬೇಸತ್ತ ಪೋಷಕರು, ತಮ್ಮ ಮಕ್ಕಳ ವರ್ಗಾವಣೆ ಪ್ರಮಾಣ ಪತ್ರಕ್ಕಾಗಿ ಯಸಳೂರು ಹೋಬಳಿಯ ಕೆರೊಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ‌ಪ್ರತಿಭಟಿಸಿದರು.

ಹಲವು ವರ್ಷಗಳಿಂದ ಶಾಲೆಯಲ್ಲಿರುವ ಶಿಕ್ಷಕಿಯರಾದ ಗೀತಾಂಜಲಿ ಮತ್ತು ಸಂಧ್ಯಾ ಈಚೆಗೆ ಅಡುಗೆ ಪಾತ್ರೆ ಹಾಗೂ ಸೌಟು ಹಿಡಿದು ಹೊಡೆದಾಡಿಕೊಂಡಿದ್ದನ್ನು ಮಕ್ಕಳು ಪೋಷಕರಿಗೆ ತಿಳಿಸಿದ್ದರು. ಆ ಬಗ್ಗೆ ವಿಚಾರಿಸಲು ಬಂದ ಪೋಷಕರೊಂದಿಗೂ ಶಿಕ್ಷಕಿಯರು ಜಗಳವಾಡಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದರೂ ಪ್ರಯೋಜನವಾಗದೆ ಸೋಮವಾರ ಗ್ರಾಮ ಪಂಚಾಯಿತಿ ಮುಖಂಡರ ಸಮ್ಮುಖದಲ್ಲಿ ಪೋಷಕರು–ಶಿಕ್ಷಕಿಯರ ನಡುವೆ ಮತ್ತೆ ವಾಗ್ವಾದ ನಡೆಯಿತು. ‘ಶಿಕ್ಷಕಿಯರನ್ನು ವರ್ಗಾಯಿಸಬೇಕು. ಇಲ್ಲವಾದರೆ ಮಕ್ಕಳ ಟಿ.ಸಿ.ಕೊಡಬೇಕು’ ಎಂದು ಪೋಷಕರು ಆಗ್ರಹಿಸಿದರು.

ADVERTISEMENT

‘ಶಿಕ್ಷಕಿಯರು ವೈಯುಕ್ತಿಕ ವಿಷಯಗಳಿಗಾಗಿ ಶಾಲೆಯಲ್ಲಿ ಮಕ್ಕಳ ಮುಂದೆ ಜಗಳವಾಡುವುದರಿಂದ ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿಯಾಗಿದೆ. ಹೀಗಾಗಿ ಇಬ್ಬರನ್ನೂ ಕೂಡಲೇ ಅಮಾನತು ಮಾಡಬೇಕು’ ಎಂದು ಎಸ್‌ಡಿಎಂಸಿ ಅಧ್ಯಕ್ಷೆ ಭವ್ಯಕುಮಾರ ಆಗ್ರಹಿಸಿದ್ದಾರೆ.

‘ಶಿಕ್ಷಕಿಯರ ಕುರಿತು ಗ್ರಾಮಸ್ಥರು ಪಂಚಾಯಿತಿಗೆ ದೂರು ನೀಡಿದ್ದರು. ಶಾಲೆಗೆ ಭೇಟಿ ಸಭೆ ನಡೆಸಿದ ಸಂದರ್ಭದಲ್ಲೂ ಶಿಕ್ಷಕಿಯರು, ವರ್ಗಾವಣೆ ಪತ್ರ ಕೇಳಲು ಬಂದ ಪೋಷಕರೊಂದಿಗೆ ಜಗಳವಾಡಿದ್ದಾರೆ. ಆ ಬಗ್ಗೆ ಶಾಸಕರಿಗೆ ಹಾಗೂ ಶಿಕ್ಷಣಾಧಿಕಾರಿಗೆ ದೂರು ನೀಡಲಾಗಿದೆ’ ಎಂದು ಪಂಚಾಯ್ತಿ ಅಧ್ಯಕ್ಷ ಹರ್ಷ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.